Afzalpur | ಎಸ್‌ಟಿ ಪ್ರಮಾಣಪತ್ರಕ್ಕೆ ಆಗ್ರಹಿಸಿ ಜು.27ರಂದು ತಳವಾರ ಸಮಾಜದಿಂದ ಬೃಹತ್ ಪ್ರತಿಭಟನೆ

ಅಫಜಲಪುರ: ಕಲಬುರಗಿ ಜಿಲ್ಲೆಯಲ್ಲಿ ತಳವಾರ ಸಮಾಜದ ಜನರಿಗೆ ಪರಿಶಿಷ್ಟ ಪಂಗಡ (ಎಸ್‌ಟಿ) ಪ್ರಮಾಣಪತ್ರ ನೀಡಬೇಕು ಹಾಗೂ ಅಫಜಲಪುರ ತಾಲೂಕಿನ ಗ್ರೇಡ್-2 ತಹಶೀಲ್ದಾರರ ವಿರುದ್ಧ ತನಿಖೆ ನಡೆಸಿ ಅಮಾನತು ಮಾಡಬೇಕು ಎಂದು ಆಗ್ರಹಿಸಿ ಅಖಿಲ ಕರ್ನಾಟಕ ಮಹರ್ಷಿ ವಾಲ್ಮೀಕಿ ತಳವಾರ ಸಮಾಜ ಸಂಘದ ವತಿಯಿಂದ ಜುಲೈ 27ರಂದು ಬೆಳಿಗ್ಗೆ 10.30ಕ್ಕೆ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ತಾಲೂಕು ಅಧ್ಯಕ್ಷ ಸಂತೋಷ ತಳವಾರ ತಿಳಿಸಿದ್ದಾರೆ.
ಪಟ್ಟಣದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಫಜಲಪುರ ತಹಶೀಲ್ದಾರ್ ಕಚೇರಿಯಿಂದ ಕಲಬುರಗಿ ನಗರದಲ್ಲಿರುವ ಶಾಸಕ ಎಂ.ವೈ. ಪಾಟೀಲ ಅವರ ನಿವಾಸದವರೆಗೆ ದೀರ್ಘದಂಡ ನಮಸ್ಕಾರ ಹಾಕುತ್ತ ಪ್ರತಿಭಟನೆ ನಡೆಸಲಾಗುವುದು ಎಂದು ಹೇಳಿದರು.
ಪ್ರತಿಭಟನೆಯ ಬಳಿಕವೂ ಸಮಾಜದ ಬೇಡಿಕೆಗಳು ಈಡೇರುವವರೆಗೆ ಶಾಸಕ ಎಂ.ವೈ. ಪಾಟೀಲ ಅವರ ನಿವಾಸದ ಎದುರು ಅಹೋರಾತ್ರಿ ಧರಣಿ ಸತ್ಯಾಗ್ರಹ ಮುಂದುವರಿಸಲಾಗುವುದು ಎಂದು ತಿಳಿಸಿದರು.
ತಳವಾರ ಸಮಾಜದ ಜನರಿಗೆ ನ್ಯಾಯ ದೊರಕುವಂತೆ ಸರ್ಕಾರ ಹಾಗೂ ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ಕ್ರಮ ಕೈಗೊಳ್ಳಬೇಕು. ಸಮಾಜದ ಸದಸ್ಯರಿಗೆ ಎಸ್‌ಟಿ ಪ್ರಮಾಣಪತ್ರ ವಿತರಿಸುವ ಪ್ರಕ್ರಿಯೆಯನ್ನು ವಿಳಂಬವಿಲ್ಲದೆ ಪೂರ್ಣಗೊಳಿಸಬೇಕು. ಕರ್ತವ್ಯ ಲೋಪ ಎಸಗಿರುವ ಅಧಿಕಾರಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ಅವರು ಆಗ್ರಹಿಸಿದರು.
ತಳವಾರ ಸಮಾಜದ ಮುಖಂಡರು, ಪದಾಧಿಕಾರಿಗಳು ಹಾಗೂ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಪ್ರತಿಭಟನೆಯಲ್ಲಿ ಭಾಗವಹಿಸಲಿದ್ದು, ನ್ಯಾಯ ದೊರಕುವವರೆಗೆ ಹೋರಾಟವನ್ನು ಹಿಂಪಡೆಯುವುದಿಲ್ಲ ಎಂದು ಸಂತೋಷ ತಳವಾರ ಹೇಳಿದರು.
ಈ ಸಂದರ್ಭದಲ್ಲಿ ರವೀಂದ್ರ ಜಮಾದಾರ, ಮಲ್ಲಿಕಾರ್ಜುನ ಚೌರಾದ, ಆನಂದ ಹಂಚನಾಳ, ಮಹೇಶ ನಾಟೀಕಾರ ಇದ್ದರು.






