Afzalpur | ಬಳೂರಗಿ ತಾಂಡದಲ್ಲಿ ಧರೆಗೆ ಉರುಳಿದ 3 ಸಾವಿರಕ್ಕೂ ಹೆಚ್ಚು ಬಾಳೆ ಗಿಡಗಳು

ಅಫಜಲಪುರ : ತಾಲೂಕಿನ ಬಳೂರಗಿ ತಾಂಡ ಗ್ರಾಮದ ಸರ್ವೆ ನಂ. 290/4ರಲ್ಲಿ ಮೂರು ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಬಾಳೆ ಬೆಳೆ ಅಕಾಲಿಕ ಭಾರಿ ಮಳೆ ಹಾಗೂ ಬಿರುಗಾಳಿಗೆ ನೆಲಕ್ಕುರುಳಿದ್ದು, ರೈತರಿಗೆ ಲಕ್ಷಾಂತರ ರೂಪಾಯಿ ನಷ್ಟ ಉಂಟಾಗಿದೆ.
ರೈತ ಮಹಿಳೆ ಸಂಗೀತಾ ದೇವಲು ರಾಥೋಡ್ ಅವರು ಸುಮಾರು 4 ಸಾವಿರ ಬಾಳೆ ಗಿಡಗಳನ್ನು ಬೆಳೆದಿದ್ದು, ಅವುಗಳಲ್ಲಿ 3 ಸಾವಿರಕ್ಕೂ ಹೆಚ್ಚು ಗಿಡಗಳು ಧರೆಗೆ ಉರುಳಿವೆ. ಇದರಿಂದ ಸುಮಾರು 6 ಲಕ್ಷ ರೂಪಾಯಿಗೂ ಅಧಿಕ ಹಾನಿಯಾಗಿದೆ ಎಂದು ಅವರು ಅಳಲು ತೋಡಿಕೊಂಡರು.
ಬೆಳೆ ಕಟಾವಿನ ನಿರೀಕ್ಷೆಯಲ್ಲಿದ್ದ ವೇಳೆಯೇ ಸುರಿದ ಅಕಾಲಿಕ ಮಳೆ ಹಾಗೂ ಬಿರುಗಾಳಿಯಿಂದ ರೈತರು ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಸರ್ಕಾರದಿಂದ ಸೂಕ್ತ ಪರಿಹಾರ ಒದಗಿಸಬೇಕು ಎಂದು ರೈತರು ಆಗ್ರಹಿಸಿದ್ದಾರೆ.
ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ :
ಬಾಳೆ ನಾಟಿಗೆ ಸುಮಾರು ಎರಡು ಲಕ್ಷ ರೂಪಾಯಿ ಸಾಲ ಮಾಡಿ ಬೆಳೆ ಬೆಳೆದಿದ್ದೇವೆ. ಬೆಳೆ ಸರಿಯಾಗಿ ಬಂದಿದ್ದರೆ ಸುಮಾರು ಆರು ಲಕ್ಷ ರೂಪಾಯಿವರೆಗೆ ಆದಾಯ ಸಿಗುವ ನಿರೀಕ್ಷೆ ಇತ್ತು. ಆದರೆ ಅಕಾಲಿಕ ಮಳೆ ಮತ್ತು ಗಾಳಿಯಿಂದ ಎಲ್ಲವೂ ಹಾಳಾಗಿದೆ. ಈಗ ಬದುಕು ನಡೆಸುವುದೇ ಕಷ್ಟಕರವಾಗಿದೆ ಎಂದು ಸಂಗೀತಾ ದೇವಲು ರಾಠೋಡ ತಮ್ಮ ನೋವು ವ್ಯಕ್ತಪಡಿಸಿದರು.




