Afzalpur | ವಿಶೇಷ ಚೇತನರಿಗೆ ಅನುಕಂಪವಲ್ಲ, ಸಮಾನ ಅವಕಾಶ ಅಗತ್ಯ: ಸಿದ್ದರಾಮ ಸೀತನೂರ

ಅಫಜಲಪುರ: ವಿಶೇಷ ಚೇತನರ ಕಾರ್ಯಕ್ರಮಗಳಿಗೆ ಮಾತಿನ ಬೆಂಬಲ ನೀಡುವವರು ಸಾಕಷ್ಟು ಇದ್ದರೂ, ಕಾರ್ಯರೂಪದಲ್ಲಿ ನೆರವು ನೀಡುವವರು ಅತ್ಯಂತ ಕಡಿಮೆ. ವಿಶೇಷ ಚೇತನರಿಗೆ ಅನುಕಂಪ ತೋರಿಸುವ ಬದಲು ಸಮಾನ ಅವಕಾಶಗಳನ್ನು ಕಲ್ಪಿಸುವ ಮನೋಭಾವ ಸಮಾಜದಲ್ಲಿ ಬೆಳೆಯಬೇಕು ಎಂದು ನವ ಕಲ್ಯಾಣ ಜ್ಯೋತಿ ಜನಪರ ವೇದಿಕೆಯ ರಾಜ್ಯಾಧ್ಯಕ್ಷ ಸಿದ್ದರಾಮ ಸೀತನೂರ ಹೇಳಿದರು.
ನಗರದ ಶಾರದ ಕಲ್ಯಾಣ ಮಂಟಪದಲ್ಲಿ ನವ ಕಲ್ಯಾಣ ಜ್ಯೋತಿ ಜನಪರ ವೇದಿಕೆ ವತಿಯಿಂದ ಆಯೋಜಿಸಿದ್ದ ಹೆಲ್ಲನ್ ಕೆಲ್ಲರ್ ದಿನಾಚರಣೆ ಹಾಗೂ ರಾಜ್ಯ ಮಟ್ಟದ ಮಹಿಳಾ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಹೆಲ್ಲನ್ ಕೆಲ್ಲರ್ ಅವರ 146ನೇ ಜನ್ಮದಿನದ ಅಂಗವಾಗಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಮಹಿಳೆಯರನ್ನು ರಾಜ್ಯ ಪ್ರಶಸ್ತಿಯ ಮೂಲಕ ಗೌರವಿಸುತ್ತಿರುವುದು ಸಂತಸದ ಸಂಗತಿ. ಕಣ್ಣು, ಕಿವಿ ಹಾಗೂ ಮಾತಿನ ಸಾಮರ್ಥ್ಯ ಇಲ್ಲದಿದ್ದರೂ 43ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿ ಜಗತ್ತಿಗೆ ಸ್ಫೂರ್ತಿಯಾಗಿರುವ ಹೆಲ್ಲನ್ ಕೆಲ್ಲರ್ ಅವರ ಜೀವನ ಎಲ್ಲರಿಗೂ ಆದರ್ಶವಾಗಿದೆ ಎಂದು ಹೇಳಿದರು.
ಕಾರ್ಯಕ್ರಮದ ದಿವ್ಯ ಸಾನ್ನಿಧ್ಯವನ್ನು ವಿಶ್ವಾರಾಧ್ಯ ಮಳೇಂದ್ರ ಶಿವಾಚಾರ್ಯರು ಹಾಗೂ ಹಜರತ್ ಮಲ್ಲಿಕಾರ್ಜುನ ದವಲಮಲೀಕ ಶ್ರೀಗಳು ವಹಿಸಿದ್ದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಕೆಪಿಸಿಸಿ ರಾಜ್ಯ ಹಿಂದುಳಿದ ವರ್ಗಗಳ ಉಪಾಧ್ಯಕ್ಷ ಜೆ.ಎಂ. ಕೊರಬು ಮಾತನಾಡಿ, ವಿಶೇಷ ಚೇತನರ ಪ್ರತಿಭೆಗೆ ಸೂಕ್ತ ವೇದಿಕೆ ಕಲ್ಪಿಸುವುದು ಸಮಾಜದ ಜವಾಬ್ದಾರಿಯಾಗಿದೆ. ಸಾಧಕರನ್ನು ಗುರುತಿಸಿ ಗೌರವಿಸುವ ಮೂಲಕ ಯುವಜನತೆಗೆ ಪ್ರೇರಣೆ ನೀಡುವ ಕಾರ್ಯವನ್ನು ಸಂಘಟಕರು ಮಾಡುತ್ತಿರುವುದು ಶ್ಲಾಘನೀಯ ಎಂದರು.
ಜೆಡಿಎಸ್ ರಾಜ್ಯ ಹಿಂದುಳಿದ ವರ್ಗಗಳ ಅಧ್ಯಕ್ಷ ಶಿವಕುಮಾರ ನಾಟಿಕಾರ ಮಾತನಾಡಿ, ಅಂಧ ಮಕ್ಕಳ ಶಿಕ್ಷಣ, ಆರೋಗ್ಯ ಹಾಗೂ ಉದ್ಯೋಗಕ್ಕೆ ಸಂಬಂಧಿಸಿದ ಸರ್ಕಾರಿ ಸೌಲಭ್ಯಗಳ ಕುರಿತು ಮಾಹಿತಿ ನೀಡಿದರು. ವಿಶೇಷ ಚೇತನರನ್ನು ಕರುಣೆಯಿಂದಲ್ಲ, ಸಮಾನ ಅವಕಾಶಗಳ ದೃಷ್ಟಿಯಿಂದ ನೋಡುವ ಮನೋಭಾವ ಸಮಾಜದಲ್ಲಿ ಬೆಳೆಯಬೇಕು. ಜಗತ್ತನ್ನು ಕೇವಲ ಕಣ್ಣುಗಳಿಂದ ಮಾತ್ರವಲ್ಲ, ಉತ್ತಮ ಚಿಂತನೆಗಳಿಂದಲೂ ಕಟ್ಟಿಕೊಳ್ಳಬಹುದು ಎಂದು ಹೇಳಿದರು.
ಅಖಿಲ ಕರ್ನಾಟಕ ಮಹಿಳಾ ನೌಕರರ ಸಂಘದ ಜಿಲ್ಲಾಧ್ಯಕ್ಷೆ ರೇಣುಕಾ ಡಾಂಗೆ ಮಾತನಾಡಿ, ಸಮಾಜದ ಪ್ರತಿಯೊಂದು ವರ್ಗವೂ ವಿಶೇಷ ಚೇತನರ ಬೆನ್ನಿಗೆ ನಿಂತಾಗ ಮಾತ್ರ ಅವರ ಬದುಕಿನಲ್ಲಿ ನಿಜವಾದ ಬದಲಾವಣೆ ಸಾಧ್ಯವಾಗುತ್ತದೆ ಎಂದರು.
ಕೆಪಿಸಿಸಿ ರಾಜ್ಯ ಮಹಿಳಾ ಪ್ರಧಾನ ಕಾರ್ಯದರ್ಶಿ ಅನಸೂಯಾ ಸುಲೇಕಾರ ಮಾತನಾಡಿ, ವಿವಿಧ ಕ್ಷೇತ್ರಗಳ ಸಾಧಕರನ್ನು ಗುರುತಿಸಿ ಸನ್ಮಾನಿಸುವುದು ಅವರ ಸೇವೆಗೆ ಸಲ್ಲಿಸುವ ಗೌರವವಾಗಿದ್ದು, ಇಂತಹ ಕಾರ್ಯಕ್ರಮಗಳು ಸಮಾಜದಲ್ಲಿ ಸಕಾರಾತ್ಮಕ ಮನೋಭಾವ ಬೆಳೆಸಲು ಸಹಕಾರಿಯಾಗುತ್ತವೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಶಿಕ್ಷಣ, ಸಮಾಜಸೇವೆ, ವೈದ್ಯಕೀಯ, ಸಾಹಿತ್ಯ, ಕಲೆ, ಕೃಷಿ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆಗೈದ ಮಹಿಳಾ ಸಾಧಕರಿಗೆ ರಾಜ್ಯ ಮಟ್ಟದ ಪ್ರಶಸ್ತಿ ಪ್ರದಾನ ಮಾಡಿ ಸನ್ಮಾನಿಸಲಾಯಿತು.ಕಾರ್ಯಕ್ರಮದಲ್ಲಿ ಸಮಾಜಸೇವಕರಾದ ಶಂಕರ ಮ್ಯಾಕೇರಿ, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷೆ ಪ್ರಭಾವತಿ ಮೇತ್ರೆ, ದೇವಿಕಾ ಶೆಟ್ಟಿ, ಶ್ರೀದೇವಿ ಪಾಟೀಲ, ಸಾಹಿತಿಗಳಾದ ಬಾಬುಮಿಯಾ ಪುಲಾರಿ, ಬಿ.ಎಂ. ರಾವ್, ರಮೇಶ್ ಹೂಗಾರ, ಗುರು ಚಾಂದಕವಟೆ, ತಾಲೂಕು ಸಂಘಟನೆಗಳ ಅಧ್ಯಕ್ಷರಾದ ಮುತ್ತು ಕುರಿಮನಿ, ಪ್ರಮೋದ್ ಭೋವಿ, ಸಿದ್ದು ಗುರುದೇವ ಪೂಜಾರಿ, ಅಶೋಕ ಪರೀಟ್, ಶೈಲಜಾ ಹೇರೂರ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಗುರುದೇವ ಪೂಜಾರಿ ಮತ್ತು ಸೌಮ್ಯಾ ಪಟ್ಟಿ ನಿರೂಪಿಸಿದರು. ಪ್ರಿಯಾಂಕಾ ಕೋರಿ ವಂದಿಸಿದರು.
ಕಾರ್ಯಕ್ರಮದ ಅಂಗವಾಗಿ ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ್ದ 50ಕ್ಕೂ ಹೆಚ್ಚು ವಿಶೇಷ ಚೇತನರಿಗೆ ದಾಖಲೆಗಳನ್ನು ಸುರಕ್ಷಿತವಾಗಿ ಸಂರಕ್ಷಿಸಿಕೊಳ್ಳಲು ಡಾಕ್ಯುಮೆಂಟ್ ಫೈಲ್‌ಗಳನ್ನು ಉಚಿತವಾಗಿ ವಿತರಿಸಲಾಯಿತು.






