Afzalpur | ಅಸಮರ್ಪಕ ವಿದ್ಯುತ್ ಪೂರೈಕೆ ಖಂಡಿಸಿ ರೈತರಿಂದ ಪ್ರತಿಭಟನೆ

ಅಫಜಲಪುರ: ತಾಲೂಕಿನ ರೇವೂರ(ಬಿ) ಜೆಸ್ಕಾಂ ಕೇಂದ್ರದಿಂದ ಅಸಮರ್ಪಕ ವಿದ್ಯುತ್ ಪೂರೈಕೆ, ಸಿಬ್ಬಂದಿಗಳ ಅಸಹಕಾರ ಧೋರಣೆ ಹಾಗೂ ಟಿ.ಸಿ ಸುಟ್ಟಾಗ ಹಣಕ್ಕಾಗಿ ಪೀಡಿಸುತ್ತಿರುವುದನ್ನು ಖಂಡಿಸಿ ರೇವೂರ(ಬಿ) ಜೆಸ್ಕಾಂ ವಲಯದ ಬಡದಾಳ, ರೇವೂರ(ಬಿ), ಚಿಂಚೋಳಿ, ಅರ್ಜುಣಗಿ, ಸಿದ್ದನೂರ, ಅಂಕಲಗಿ, ಕುಲಾಲಿ ಗ್ರಾಮಗಳ ರೈತರು ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ರೇವೂರ(ಬಿ) ಜೆಸ್ಕಾಂ ವಲಯದಿಂದ ಗ್ರಾಮಗಳು ಹಾಗೂ ಹೊಲಗದ್ದೆಗಳಿಗೆ ಸರಿಯಾದ ವಿದ್ಯುತ್ ಸಂಪರ್ಕ ನೀಡುತ್ತಿಲ್ಲ. ಹೊಲಗದ್ದೆಗಳಲ್ಲಿ ಸಮರ್ಪಕ ವಿದ್ಯುತ್ ಇಲ್ಲದೆ ರೈತರು ಸಂಕಷ್ಟ ಅನುಭವಿಸುತ್ತಿದ್ದಾರೆ ಎಂದು ಆರೋಪಿಸಿದರು.
33 ಕೆವಿ ಸಾಮರ್ಥ್ಯದ ರೇವೂರ ಕೇಂದ್ರದಿಂದ 110 ಕೆವಿ ಸಾಮರ್ಥ್ಯದ ಚವಡಾಪುರ ಪಕ್ಕದ ಊರಿನವರೆಗೂ ವಿದ್ಯುತ್ ಸಂಪರ್ಕ ನೀಡಲಾಗುತ್ತಿದೆ. ಆದರೆ ನಮ್ಮ ಭಾಗದಲ್ಲೇ ಹೆಚ್ಚಿನ ಬೇಡಿಕೆ ಇದ್ದರೂ ಸಮರ್ಪಕ ಪೂರೈಕೆ ಮಾಡುತ್ತಿಲ್ಲ ಎಂದು ದೂರಿದರು.
40 ಡಿಗ್ರಿಗಿಂತ ಹೆಚ್ಚಿನ ಸುಡುಬಿಸಿಲಿನಿಂದ ಬೆಳೆಗಳು ಒಣಗುತ್ತಿವೆ. ಇಂತಹ ಸಂದರ್ಭದಲ್ಲಿ ಬೆಳೆ ಉಳಿಸಿಕೊಳ್ಳಲು ಸರಿಯಾದ ಸಮಯಕ್ಕೆ ವಿದ್ಯುತ್ ಬೇಕಾದರೂ ಅಧಿಕಾರಿಗಳು ಹಾಗೂ ಸಿಬ್ಬಂದಿ ಅಸಹಕಾರ ಧೋರಣೆ ತಾಳಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರೈತರು ಕರೆ ಮಾಡಿದರೂ ಸ್ಪಂದಿಸುವುದಿಲ್ಲ. ಟಿ.ಸಿ ಸುಟ್ಟರೆ ಹೊಸ ಟ್ರಾನ್ಸ್‌ಫಾರ್ಮರ್ ಅಳವಡಿಸಲು ಹಣ ಬೇಡಿಕೆ ಇಡುತ್ತಾರೆ. ಹಣ ಕೊಟ್ಟರೂ ಸಮಯಕ್ಕೆ ಟಿ.ಸಿ ಅಳವಡಿಸದೆ ವಿಳಂಬ ಮಾಡುತ್ತಾರೆ ಎಂದು ಆರೋಪಿಸಿದರು.
ರೇವೂರ(ಬಿ) ಕೇಂದ್ರವು 33 ಕೆವಿ ಸಾಮರ್ಥ್ಯ ಹೊಂದಿದ್ದು, ಹೆಚ್ಚಿನ ಬೇಡಿಕೆ ಇರುವುದರಿಂದ ಅದನ್ನು 65 ಕೆವಿಗೆ ಹೆಚ್ಚಿಸಬೇಕು. ರೈತರ ಸಮಸ್ಯೆಗಳನ್ನು ಮೇ 10ರೊಳಗೆ ಬಗೆಹರಿಸಬೇಕು. ಇಲ್ಲದಿದ್ದರೆ ಮೇ 15ರಿಂದ ನಿರಂತರ ಧರಣಿ ಸತ್ಯಾಗ್ರಹ ಆರಂಭಿಸಲಾಗುವುದು ಎಂದು ಎಚ್ಚರಿಸಿದರು.
ಪ್ರತಿಭಟನಾ ಸ್ಥಳಕ್ಕೆ ಚವಡಾಪುರ ಜೆಸ್ಕಾಂ ವಲಯದ ಎಇಇ ಖೈಮುದ್ದಿನ್ ಭೇಟಿ ನೀಡಿ, ಮೇ 10ರೊಳಗೆ ರೇವೂರ ವಲಯದ ವಿದ್ಯುತ್ ಸಮಸ್ಯೆ ಸರಿಪಡಿಸಲು ಪ್ರಯತ್ನಿಸುವುದಾಗಿ ಭರವಸೆ ನೀಡಿದರು.
ರೈತರು ಹಾಗೂ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸುವುದೇ ಇಲಾಖೆಯ ಆದ್ಯ ಕರ್ತವ್ಯವಾಗಿದ್ದು, ಧರಣಿ ಕೈಬಿಡುವಂತೆ ಮನವಿ ಮಾಡಿದರು. ಅವರ ಭರವಸೆಯ ಮೇರೆಗೆ ರೈತರು ಪ್ರತಿಭಟನೆ ಹಿಂಪಡೆದರು.
ಈ ಸಂದರ್ಭದಲ್ಲಿ ಬಡದಾಳ, ಕುಲಾಲಿ, ರೇವೂರ, ಸಿದ್ದನೂರ, ಅಂಕಲಗಿ, ಅರ್ಜುಣಗಿ, ಚಿಂಚೋಳಿ ಸೇರಿದಂತೆ ಅನೇಕ ಗ್ರಾಮಗಳ ರೈತರು ಪ್ರತಿಭಟನೆಯಲ್ಲಿದ್ದರು.






