Afzalpur | ರೈತ–ಕಾರ್ಮಿಕ ವಿರೋಧಿ ನೀತಿ ಖಂಡಿಸಿ ಪ್ರತಿಭಟನೆ

ಅಫಜಲಪುರ: ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜಾರಿಗೆ ತಂದಿರುವ ರೈತ–ಕಾರ್ಮಿಕ ವಿರೋಧಿ ನೀತಿಗಳನ್ನು ಖಂಡಿಸಿ ಸಿಐಟಿಯು (CITU), ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು ಸೇರಿದಂತೆ ವಿವಿಧ ಕಾರ್ಮಿಕ ಹಾಗೂ ರೈತ ಸಂಘಟನೆಗಳ ನೇತೃತ್ವದಲ್ಲಿ ಗುರುವಾರ ಅಫಜಲಪುರ ಪಟ್ಟಣದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯಿತು.
ಅಖಿಲ ಭಾರತ ಸಾರ್ವತ್ರಿಕ ಮುಷ್ಕರಕ್ಕೆ ಬೆಂಬಲ ಸೂಚಿಸಿ ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ ಪ್ರತಿಭಟನೆ ನಡೆಸಲಾಯಿತು. ಅಂಬೇಡ್ಕರ್ ವೃತ್ತದಿಂದ ಆರಂಭವಾದ ಮೆರವಣಿಗೆ ಬಸ್ ನಿಲ್ದಾಣ, ಚೌವಡಿ ಮಾರ್ಗವಾಗಿ ಬಸವೇಶ್ವರ ವೃತ್ತದವರೆಗೆ ಸಾಗಿತು. ಕೈಯಲ್ಲಿ ಬ್ಯಾನರ್‌ಗಳು, ಘೋಷಣೆಗಳ ಫಲಕಗಳನ್ನು ಹಿಡಿದು ಸರ್ಕಾರದ ವಿರುದ್ಧ ಘೋಷಣೆ ಕೂಗಿ ತಮ್ಮ ಆಕ್ರೋಶ ಹೊರಹಾಕಿದರು.
ಬಳಿಕ ಅಂಬೇಡ್ಕರ್ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಪ್ರತಿಭಟನಾಕಾರರು ರಸ್ತೆ ತಡೆದು ಸರ್ಕಾರದ ನೀತಿಗಳ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. “ರೈತ–ಕಾರ್ಮಿಕರ ಬದುಕು ಉಳಿಸಬೇಕು”, “ಖಾಸಗೀಕರಣ ಹಿಂಪಡೆಯಿರಿ”, “ಕಾರ್ಮಿಕ ಹಕ್ಕುಗಳಿಗೆ ಸಂವಿಧಾನಿಕ ರಕ್ಷಣೆ ನೀಡಬೇಕು” ಎಂಬ ಘೋಷಣೆಗಳು ಮೊಳಗಿದವು.
ಈ ವೇಲೆ ಪ್ರತಿಭಟನಾಕಾರರು ಬೀಜ ಮಸೂದೆ ಜಾರಿಗೆ ಬಂದರೆ ಕೃಷಿಯಲ್ಲಿ ಬಹುರಾಷ್ಟ್ರೀಯ ಕಂಪನಿಗಳ ಏಕಾಧಿಕಾರ ಹೆಚ್ಚಾಗುತ್ತದೆ. ನಾಲ್ಕು ಲೇಬರ್ ಕೋಡ್‌ಗಳು ಕಾರ್ಮಿಕರ ವೇತನ, ಭದ್ರತೆ ಮತ್ತು ಉದ್ಯೋಗ ಹಕ್ಕುಗಳನ್ನು ದುರ್ಬಲಗೊಳಿಸುತ್ತವೆ ಎಂದು ಆರೋಪಿಸಿದರು.
ಮಹಿಳಾ ಹೋರಾಟಗಾರ್ತಿ ಶಾಂತಾ ಘಂಟೆ ಮಾತನಾಡಿ, ವಿದ್ಯುತ್ ಖಾಸಗೀಕರಣ ಹಾಗೂ ಬೀಜ ಮಸೂದೆಗಳು ರೈತ–ಕಾರ್ಮಿಕರಿಗೆ ಭಾರವಾಗಿವೆ. ಲೇಬರ್ ಕೋಡ್‌ಗಳು ಕಾರ್ಮಿಕರ ಹಕ್ಕುಗಳನ್ನು ಕುಗ್ಗಿಸುತ್ತಿವೆ. ಸರ್ಕಾರ ತಕ್ಷಣ ಈ ನೀತಿಗಳನ್ನು ಹಿಂಪಡೆದು ರೈತ–ಕಾರ್ಮಿಕರ ಪರ ನಿಲುವು ತಾಳಬೇಕು ಎಂದರು.
ಈ ಸಂದರ್ಭದಲ್ಲಿ ರೈತ ಮುಖಂಡರಾದ ಗುರು ಚಾಂದಕವಟೆ, ಶಿವಾನಂದ ಹೊಟ್ಕರ್, ರಮೇಶ್ ಪಾಟೀಲ, ಶ್ರೀಮಂತ ಬಿರಾದಾರ, ಬಸಮ್ಮ ಗುತ್ತೇದಾರ್ ರಮೇಶ್ ಪಾಟೀಲ್, ಯಶವಂತ್ ಪಟ್ಟೆದಾರ್, ಸಿದ್ದಮ್ಮ ನಾಗೋಜಿ , ಸಂತೋಷ್ ಚಲವಾದಿ, ಬೋಜರಾಜ್ ಪಾಟೀಲ್, ಶಿವಾನಂದ್ ಹೋಟ್ಕರ್, ಸುರೇಶ್ ತಾವರ್ಖೇಡ್, ಬೀರಣ್ಣ ಪೂಜಾರಿ, ಶ್ರೀಶೈಲ ಪತ್ತಾರ್ , ಕಲಾವತಿ ಯಲಸಂಗಿ, ಬಿಸ್ಮಿಲ್ಲಾ ಖೇಡಗಿ, ದೇವೇಂದ್ರ ಘಂಟೆ, ಹರೀಶ ಅರೀಫ್ ಶೇಕ್, ಕಾಂಚನ ಕಾಂಬಳೆ, ಸೇರಿದಂತೆ ಹಲವಾರು ಸಂಘಟನೆಗಳ ಪದಾಧಿಕಾರಿಗಳು ಇದ್ದರು.







