Afzalpur | ಕುಡಿಯುವ ನೀರು, ನರೇಗಾ ಉದ್ಯೋಗಕ್ಕೆ ಆಗ್ರಹಿಸಿ ಗ್ರಾಮ ಪಂಚಾಯತ್ ಎದುರು ಪ್ರತಿಭಟನೆ

ಅಫಜಲಪುರ : ತಾಲೂಕಿನ ಗೊಬ್ಬುರ (ಬಿ) ಗ್ರಾಮ ಪಂಚಾಯಿತಿಯಲ್ಲಿ ಕುಡಿಯುವ ನೀರು, ನರೇಗಾ ಉದ್ಯೋಗ, ಕರ ವಸೂಲಿ ಸೇರಿದಂತೆ ವಿವಿಧ ಸಮಸ್ಯೆಗಳನ್ನು ತಕ್ಷಣ ಪರಿಹರಿಸುವಂತೆ ಒತ್ತಾಯಿಸಿ ಮುಖಂಡ ಹುಣಚಪ್ಪ ಮೈನಾಳ ನೇತೃತ್ವದಲ್ಲಿ ಕೂಲಿ ಕಾರ್ಮಿಕರು ಹಾಗೂ ಗ್ರಾಮಸ್ಥರು ಗ್ರಾಮ ಪಂಚಾಯಿತಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ನರೇಗಾ ಯೋಜನೆಯಡಿ ಉದ್ಯೋಗಕ್ಕಾಗಿ ಸಲ್ಲಿಸಿರುವ ಬೇಡಿಕೆಗಳಿಗೆ ಸ್ಪಂದನೆ ದೊರೆಯುತ್ತಿಲ್ಲ. ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರಗೊಂಡಿದ್ದರೂ ಪಂಚಾಯಿತಿ ಆಡಳಿತ ನಿರ್ಲಕ್ಷ್ಯ ವಹಿಸುತ್ತಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಕರ ವಸೂಲಿಯಲ್ಲಿ ಬಡವರು ಮತ್ತು ಶ್ರೀಮಂತರ ನಡುವೆ ಬೇಧಭಾವ ಮಾಡಲಾಗುತ್ತಿದ್ದು, ಕೆಲವರಿಂದ ಮಾತ್ರ ಕಟ್ಟುನಿಟ್ಟಾಗಿ ಕರ ವಸೂಲಿ ಮಾಡಲಾಗುತ್ತಿದೆ. ಇನ್ನೂ ಕೆಲವರಿಗೆ ವಿನಾಯಿತಿ ನೀಡಲಾಗುತ್ತಿದೆ ಎಂಬ ಆರೋಪವೂ ಕೇಳಿಬಂದಿದೆ.
ಕರ ವಸೂಲಿ ಪ್ರಕ್ರಿಯೆಯಲ್ಲಿ ಭ್ರಷ್ಟಾಚಾರ ನಡೆಯುತ್ತಿರುವ ಶಂಕೆ ವ್ಯಕ್ತವಾಗಿದ್ದು, ಪಂಚಾಯಿತಿ ಆಡಳಿತದಲ್ಲಿ ಪಾರದರ್ಶಕತೆ ಇಲ್ಲ ಎಂದು ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದರು.
ನರೇಗಾ ಕೂಲಿ ಕಾರ್ಮಿಕರಿಗೆ ಉದ್ಯೋಗ ಒದಗಿಸುವುದು, ಕುಡಿಯುವ ನೀರಿನ ಸಮಸ್ಯೆ ಬಗೆಹರಿಸುವುದು ಹಾಗೂ ಕರ ವಸೂಲಿಯಲ್ಲಿನ ಅಕ್ರಮಗಳ ಬಗ್ಗೆ ಸಮಗ್ರ ತನಿಖೆ ನಡೆಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಈ ವೇಳೆ ಪಿಡಿಒ ಲಕ್ಷ್ಮೀ ಬಜೇಂತ್ರಿ ಮಾತನಾಡಿ, “ನಾನು ಈ ಪಂಚಾಯಿತಿಗೆ ಅಧಿಕಾರ ವಹಿಸಿಕೊಂಡು ಎರಡ್ಮೂರು ತಿಂಗಳಷ್ಟೇ ಆಗಿದೆ. ಇಲ್ಲಿನ ಸಮಸ್ಯೆಗಳ ಕುರಿತು ಸಂಪೂರ್ಣ ಮಾಹಿತಿ ಪಡೆಯಲು ಸ್ವಲ್ಪ ಸಮಯ ಬೇಕಾಗಿದೆ. ಗ್ರಾಮಸ್ಥರ ಸಹಕಾರವೂ ಅಗತ್ಯವಾಗಿದೆ” ಎಂದು ತಿಳಿಸಿದರು.
“ಕರ ವಸೂಲಿಯಲ್ಲಿ ಆಗುತ್ತಿರುವ ಸಮಸ್ಯೆಗಳನ್ನು ಪರಿಶೀಲಿಸಿ ಸರಿಪಡಿಸಲಾಗುವುದು. ಕುಡಿಯುವ ನೀರಿನ ಸಮಸ್ಯೆಗೂ ಪರಿಹಾರ ಕಲ್ಪಿಸಲಾಗುವುದು. ಉದ್ಯೋಗ ಖಾತ್ರಿ ಯೋಜನೆಯಡಿ ಸದ್ಯ ಕೂಲಿ ಕಾರ್ಮಿಕರಿಗೆ ಉದ್ಯೋಗ ನೀಡಲು ಬಜೆಟ್ ಕೊರತೆ ಇದೆ. ಈ ಕುರಿತು ಮೇಲಧಿಕಾರಿಗಳ ಗಮನಕ್ಕೆ ತಂದು ಅಗತ್ಯ ಕ್ರಮ ಕೈಗೊಳ್ಳಲು ಮನವಿ ಮಾಡಲಾಗುವುದು” ಎಂದು ಅವರು ಹೇಳಿದರು.
ಒಂದು ವಾರದೊಳಗೆ ಸಮಸ್ಯೆಗಳಿಗೆ ಸ್ಪಂದಿಸಿ ಕ್ರಮ ಕೈಗೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸಲಾಗುವುದು ಎಂದು ಗ್ರಾಮಸ್ಥರು ಎಚ್ಚರಿಕೆ ನೀಡಿದರು.
ಪ್ರತಿಭಟನೆಯಲ್ಲಿ ಹುಣಚಪ್ಪ ಮೈನಾಳ, ಖಾದರ್ ಸಾಬ್ ಆಂದೋಲ, ಬಾಸುಮಯ್ಯ, ಸಾತಲಿಂಗಪ್ಪ ನಂದೂರ, ಶಿವಾನಂದ ಕೌಲಗಿ, ಸೋಮಣ್ಣ ಕಲಬುರಗಿ, ಪ್ರಭುಲಿಂಗ ಹುಣಸಿಹಡಲಗಿ, ಮಂಜುನಾಥ ಸರಡಗಿ, ಶಿವು ಕುಸಾಳ, ಶಿವಕುಮಾರ ವಾಗ್ಮಡಿ, ಮೋಸಿನ್ ಜಮಾದಾರ, ಗೋವಿಂದ, ಶರಣು ಕೊತ್ವಾಳ, ಲಚ್ಚಪ್ಪ ನಾಟಿಕಾರ, ಹುಸೇನಿ ವಾಗ್ಮಡೆ, ಯಲ್ಲಪ್ಪ ವಾಗ್ಮಡೆ, ಯಲ್ಲಪ್ಪ ಸಂಡಗಿ, ದಸ್ತಗೀರ್ ಬಾಸಗಿ, ರಫೀಕ್ ಬಂದರವಾಡ, ರಾಮಣ್ಣ ಮೈಂದರಗಿ, ಶ್ರೀಶೈಲ ಬಂತನಾಳ, ಚಂದ್ರಕಾಂತ ಬೆಣ್ಣೆಶಿರೂರ, ಮಲ್ಲಿಕಾರ್ಜುನ ಸೇರಿದಂತೆ ಅನೇಕರು ಭಾಗವಹಿಸಿದ್ದರು.






