Afzalpur | ಗೃಹಲಕ್ಷ್ಮಿ ಯೋಜನೆ ಫಲಾನುಭವಿಗಳ ಮರು ಪರಿಶೀಲನೆ ಆರಂಭ : ಪ್ರಕಾಶ್ ಜಮಾದಾರ
ಗೃಹಲಕ್ಷ್ಮಿ ಯೋಜನೆಯ ಮರು ಪರಿಶೀಲನಾ ಸಭೆ

ಅಫಜಲಪುರ : ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಗೃಹಲಕ್ಷ್ಮಿ ಯೋಜನೆ ಜಾರಿಗೆ ಬಂದು ಮೂರು ವರ್ಷಗಳು ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ, ಅರ್ಹ ಫಲಾನುಭವಿಗಳ ಬಯೋಮೆಟ್ರಿಕ್ ದೃಢೀಕರಣ ಹಾಗೂ ಮನೆಮನೆಗೆ ಭೇಟಿ ಮೂಲಕ ಮರು ಪರಿಶೀಲನೆ ನಡೆಸಲು ಸರ್ಕಾರ ನಿರ್ಧರಿಸಿದೆ ಎಂದು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಪ್ರಕಾಶ್ ಜಮಾದಾರ ತಿಳಿಸಿದ್ದಾರೆ.
ಪಟ್ಟಣದ ತಹಸೀಲ್ದಾರ್ ಕಚೇರಿಯಲ್ಲಿ ನಡೆದ ಗೃಹಲಕ್ಷ್ಮಿ ಯೋಜನೆ ಮರು ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಅಫಜಲಪುರ ತಾಲೂಕಿನಲ್ಲಿ 52,984 ಫಲಾನುಭವಿಗಳಿದ್ದು, ಇದುವರೆಗೆ 32 ಕಂತುಗಳಲ್ಲಿ ಒಟ್ಟು 339 ಕೋಟಿ ರೂ. ಮೊತ್ತವನ್ನು ಫಲಾನುಭವಿಗಳ ಖಾತೆಗಳಿಗೆ ಜಮಾ ಮಾಡಲಾಗಿದೆ ಎಂದು ಹೇಳಿದರು.
ಕೆಲವು ಫಲಾನುಭವಿಗಳು ಮೃತಪಟ್ಟಿದ್ದರೂ ಅವರ ಖಾತೆಗಳಿಗೆ ಹಣ ಜಮೆಯಾಗುತ್ತಿರುವ ಪ್ರಕರಣಗಳು ಕಂಡುಬಂದಿರುವುದರಿಂದ, ಫಲಾನುಭವಿಗಳ ಪ್ರಸ್ತುತ ಸ್ಥಿತಿಯನ್ನು ಪರಿಶೀಲಿಸಿ ಅರ್ಹರಿಗೆ ಮಾತ್ರ ಯೋಜನೆಯ ಲಾಭ ತಲುಪಿಸುವ ಉದ್ದೇಶದಿಂದ ಮರು ಪರಿಶೀಲನೆ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು.
ಪ್ರತಿ ಗ್ರಾಮ ಪಂಚಾಯಿತಿಗೆ ಆರು ಮಂದಿ ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯರನ್ನು ಹಾಗೂ ಎರಡು ಗ್ರಾಮ ಪಂಚಾಯಿತಿಗಳಿಗೆ ಒಬ್ಬರಂತೆ ತಾಲೂಕು ಮಟ್ಟದ ಸಮಿತಿ ಸದಸ್ಯರನ್ನು ನೇಮಿಸಿ ಪರಿಶೀಲನಾ ಕಾರ್ಯವನ್ನು ಸಮರ್ಪಕವಾಗಿ ನಡೆಸಲಾಗುವುದು ಎಂದು ಹೇಳಿದರು.
ತಹಶೀಲ್ದಾರ್ ಸಂಜೀವಕುಮಾರ ದಾಸರ ಮಾತನಾಡಿ, ಗೃಹಲಕ್ಷ್ಮಿ ಫಲಾನುಭವಿಗಳ ವಿವರಗಳನ್ನು ಪರಿಶೀಲಿಸಿ ಅವರ ಪ್ರಸ್ತುತ ಸ್ಥಿತಿಯನ್ನು ದೃಢೀಕರಿಸಲು ಸರ್ಕಾರ ಮರು ಪರಿಶೀಲನೆಗೆ ಮುಂದಾಗಿದೆ. ಗಣತಿದಾರರು ಹಾಗೂ ಗ್ಯಾರಂಟಿ ಸಮಿತಿ ಸದಸ್ಯರು ಕಡ್ಡಾಯವಾಗಿ ಮನೆಮನೆಗೆ ಭೇಟಿ ನೀಡಿ ಅರ್ಹ ಫಲಾನುಭವಿಗಳನ್ನು ಪರಿಶೀಲಿಸಬೇಕು. ಯಾವುದೇ ಫಲಾನುಭವಿಯನ್ನು ಬಿಟ್ಟು ಹೋಗದಂತೆ ಎಚ್ಚರಿಕೆಯಿಂದ ಕಾರ್ಯನಿರ್ವಹಿಸಬೇಕು ಎಂದು ಸೂಚನೆ ನೀಡಿದರು.
ಸಭೆಯಲ್ಲಿ ಪುರಸಭೆ ಮುಖ್ಯಾಧಿಕಾರಿ ಫಕ್ರುದ್ದೀನ್,ಡಾ.ಚೇತನ, ಅಂಬರೀಷ್ ಬುರಲಿ, ಶಕೀಲ್ ವಡ್ಡಳ್ಳಿ, ಸುಧಾಕರ ಎಸ್.ಕೆ, ಪ್ರವೀಣ್ ಕಲ್ಲೂರ,ಹಾಜಿ ಮುಜಾವರ,ದುಂಡಪ್ಪ ಜಮಾದಾರ,ಬಿಸ್ಮಿಲ್ಲಾ ಶೇಖ್, ಅನುಸೂಯಾ ಸುಲೇಕರ, ಅಣವೀರಯ್ಯ ಮಠಪತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಪೂರ್ಣಿಮಾ ಸುಬೇದಾರ,ನಿಂಗಮ್ಮ ಬಡದಾಳ,ಗುರುಬಾಯಿ ಮುದ್ದೇಬಿಹಾಳ,ಶಶಿಕಲಾ ತಾಳೇಕರ,ರೇವಮ್ಮ ಮೇಟಿ, ಮಂಜುನಾಥ ಆರೇಕರ, ಹರಿದಾಸ ಚೋಪಡೆ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.






