ಅಫಜಲಪುರ | ರೆಡ್ ಕ್ರಾಸ್ ಸಂಸ್ಥೆ ಸಭೆ: ಸಮಾಜ ಸೇವೆಯಲ್ಲಿ ಚುರುಕುತನಕ್ಕೆ ಕರೆ

ಅಫಜಲಪುರ: ಭಾರತೀಯ ರೆಡ್ ಕ್ರಾಸ್ ಸಂಸ್ಥೆ ನಿಸ್ವಾರ್ಥ ಸೇವೆ ಮಾಡುವ ಮಾನವೀಯ ಸಂಸ್ಥೆಯಾಗಿದ್ದು, ಜನಸೇವೆಗೆ ಎಲ್ಲರಿಗೂ ಅವಕಾಶ ಕಲ್ಪಿಸುವ ಸಂಘಟನೆ ಎಂದು ಕಲಬುರಗಿ ಜಿಲ್ಲಾ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಗೌರವ ಕಾರ್ಯದರ್ಶಿ ರವೀಂದ್ರ ಶಾಬಾದಿ ಹೇಳಿದರು.
ಪಟ್ಟಣದ ತಹಸೀಲ್ದಾರ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, ವಿಶ್ವದ ಸುಮಾರು 192 ದೇಶಗಳಲ್ಲಿ ರೆಡ್ ಕ್ರಾಸ್ ಸಂಸ್ಥೆ ಕಾರ್ಯನಿರ್ವಹಿಸುತ್ತಿದ್ದು, ಮಾನವೀಯ ಸೇವೆಯನ್ನು ತನ್ನ ಮುಖ್ಯ ಉದ್ದೇಶವಾಗಿಟ್ಟುಕೊಂಡಿದೆ. ಜನಸೇವೆಗೆ ಆಸಕ್ತಿ ಹೊಂದಿರುವವರು ಸಂಸ್ಥೆಯ ಸದಸ್ಯರಾಗಬಹುದು ಎಂದು ತಿಳಿಸಿದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ತಹಶೀಲ್ದಾರ್ ಸಂಜೀವಕುಮಾರ ದಾಸರ ಮಾತನಾಡಿ, ರೆಡ್ ಕ್ರಾಸ್ ಸಂಸ್ಥೆ ಅನೇಕ ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಿರುವುದು ಶ್ಲಾಘನೀಯವಾಗಿದೆ. ಹೊಸ ಪದಾಧಿಕಾರಿಗಳು ಸದಸ್ಯತ್ವ ಪಡೆದು ಸಭೆ ನಡೆಸಿ ಮುಂದಿನ ದಿನಗಳಲ್ಲಿ ಕೈಗೊಳ್ಳಬೇಕಾದ ಸಮಾಜ ಸೇವಾ ಕಾರ್ಯಗಳ ಬಗ್ಗೆ ಚರ್ಚೆ ನಡೆಸಬೇಕು ಎಂದು ಹೇಳಿದರು.
ಈಗಾಗಲೇ ನಿಧನರಾದ ಪದಾಧಿಕಾರಿಗಳ ಹೆಸರನ್ನು ಪಟ್ಟಿಯಿಂದ ತೆಗೆದು ಹೊಸ ಪದಾಧಿಕಾರಿಗಳನ್ನು ನೇಮಕ ಮಾಡುವ ಅಗತ್ಯವಿದೆ ಎಂದು ತಿಳಿಸಿದರು.
ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಜಿಲ್ಲಾ ಸಭಾಪತಿ ಅರುಣಕುಮಾರ ಲೋಹಿಯಾ ಮಾತನಾಡಿ, ಈ ಹಿಂದೆ ತಾಲೂಕಿನಲ್ಲಿ ರೆಡ್ ಕ್ರಾಸ್ ಸಂಸ್ಥೆ ಬಹಳ ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸುತ್ತಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಸಂಸ್ಥೆಯ ಚಟುವಟಿಕೆಗಳು ಕಡಿಮೆಯಾಗಿರುವುದು ಗಮನಕ್ಕೆ ಬಂದಿದೆ. ಮುಂದಿನ ದಿನಗಳಲ್ಲಿ ಮತ್ತೆ ಚುರುಕಾಗಿ ಸಮಾಜ ಸೇವಾ ಕಾರ್ಯಗಳಲ್ಲಿ ತೊಡಗಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಮಹೇಶ ಆಲೇಗಾಂವ್, ಸಿದ್ದರಾಮ ಶಿವಣಗಿ, ರಾಜೇಶ ದೇವಣಿ, ವೈಜನಾಥ ಆಲೇಗಾಂವ್, ಚೆನ್ನು ಬಡದಾಳ, ರೇವಣಸಿದ್ದ ಪೂಜಾರಿ ಸೇರಿದಂತೆ ತಹಶೀಲ್ದಾರ್ ಕಚೇರಿ ಸಿಬ್ಬಂದಿಗಳು ಉಪಸ್ಥಿತರಿದ್ದರು.







