ಅಫಜಲಪುರ | ಎಸೆಸೆಲ್ಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪುರಸ್ಕಾರ

ಕಲಬುರಗಿ: ಎಸೆಸೆಲ್ಸಿ ವಾರ್ಷಿಕ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದು ಅಫಜಲಪುರ ತಾಲೂಕಿಗೆ ಹೆಸರು ತಂದಿರುವ ವಿದ್ಯಾರ್ಥಿಗಳು, ಮುಂದೆ ಉನ್ನತ ಮಟ್ಟದ ಅಧಿಕಾರಿಗಳಾಗಿ ನಮ್ಮ ತಾಲೂಕಿಗೆ, ಜನ್ಮ ನೀಡಿದ ತಂದೆ, ತಾಯಿಗೆ ಹಾಗೂ ವಿದ್ಯೆ ಕಲಿಸಿದ ಗುರುಗಳಿಗೆ ಗೌರವ ತಂದುಕೊಡುವ ಕೆಲಸ ವಿದ್ಯಾರ್ಥಿಗಳಿಂದ ಆಗಬೇಕು ಎಂದು ಬ್ರಾಹ್ಮಣ ಸಮಾಜದ ಮುಖಂಡರು ಹಾಗೂ ಪ್ರಶಸ್ತಿ ಪತ್ರ ವಿತರಕರಾದ ಶಾಮರಾವ ಕುಲಕರ್ಣಿ ಅಭಿಪ್ರಾಯ ವ್ಯಕ್ತಪಡಿಸಿದರು.
ಅಫಜಲಪುರ ಪಟ್ಟಣದ ನಿವಾಸದಲ್ಲಿ ದಿ. ರಾಮಚಂದ್ರರಾವ್ ಕುಲಕರ್ಣಿ ಹಾಗೂ ದಿ.ಮೇಧಾ ಶಹಾಬಾದಕರ ಇವರ ಸ್ಮರಣಾರ್ಥವಾಗಿ ಶ್ರೀ ಗಾಯಿತ್ರಿ ವಿಪ್ರ ಸಮುದಾಯ ಪತ್ತಿನ ಸಹಕಾರ ಸಂಘದ ಸಹಯೋಗದೊಂದಿಗೆ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಎಸೆಸೆಲ್ಸಿ ವಾರ್ಷಿಕ ಪರೀಕ್ಷೆಯಲ್ಲಿ ರಾಯಲ್ ಪಬ್ಲಿಕ್ ಸ್ಕೂಲ್ ವಿದ್ಯಾರ್ಥಿ ಉಸೈದುಲ್ಲಾ ಮಂಜೂರ ಅಹ್ಮದ್ ಅಗರಖೇಡ (92.16), ರೇಣುಕಾ (91.52) ಅಂಕ ಪಡೆದಿರುವ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ, ಪ್ರೋತ್ಸಾಹ ಧನ ವಿತರಿಸಿ ಮಾತನಾಡಿದರು.
ವಿದ್ಯಾರ್ಥಿ ಉಸೈದುಲ್ಲಾ ಪಾಲಕರಾದ ಮಂಜೂರ ಅಹ್ಮದ್ ಅಗರಖೇಡ ಮಾತನಾಡಿದರು.
ಈ ಸಂದರ್ಭದಲ್ಲಿ ಶ್ರೀ ಗಾಯತ್ರಿ ವಿಪ್ರ ಸಮುದಾಯ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ದತ್ತಾತ್ರಯರಾವ ಕುಲಕರ್ಣಿ ಅಧ್ಯಕ್ಷತೆ ವಹಿಸಿದ್ದರು. ಪ್ರಲ್ಹಾದ್ ಕುಲಕರ್ಣಿ ನಿರೂಪಿಸಿ ವಂದಿಸಿದರು.





