Afzalpur | ಘತ್ತರಗಾ ಭಾಗ್ಯವಂತಿ ದೇವಾಲಯದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾಗಿ ಎಸ್.ವೈ.ಪಾಟೀಲ್ ಅವಿರೋಧ ಆಯ್ಕೆ

ಅಫಜಲಪುರ : ತಾಲೂಕಿನ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಘತ್ತರಗಾ ಶ್ರೀ ಭಾಗ್ಯವಂತಿ ದೇವಾಲಯದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾಗಿ ಎಸ್.ವೈ. ಪಾಟೀಲ್ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಕಲಬುರಗಿಯ ಸಹಾಯಕ ಆಯುಕ್ತರ ಕಚೇರಿಯಲ್ಲಿ ಸಹಾಯಕ ಆಯುಕ್ತೆ ಸಾಹಿತ್ಯ ಆಲದಕಟ್ಟೆ ಅವರ ಅಧ್ಯಕ್ಷತೆಯಲ್ಲಿ ನಡೆದ ವ್ಯವಸ್ಥಾಪನಾ ಸಮಿತಿ ಸಭೆಯಲ್ಲಿ ಸದಸ್ಯರ ಸರ್ವಾನುಮತದೊಂದಿಗೆ ಎಸ್.ವೈ. ಪಾಟೀಲ್ ಅವರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿ ಘೋಷಿಸಲಾಯಿತು. ಬಳಿಕ ನೂತನ ಅಧ್ಯಕ್ಷರನ್ನು ಸದಸ್ಯರು ಅಭಿನಂದಿಸಿ ಶುಭಾಶಯ ಕೋರಿದರು.
ಇತ್ತೀಚೆಗೆ ರಾಜ್ಯ ಧಾರ್ಮಿಕ ಪರಿಷತ್ತು ಹಾಗೂ ಧಾರ್ಮಿಕ ದತ್ತಿಗಳ ಇಲಾಖೆಯು ದೇವಾಲಯದ ವ್ಯವಸ್ಥಾಪನಾ ಸಮಿತಿಯನ್ನು ಪುನರ್‌ರಚಿಸಿ, ಪ್ರಧಾನ ಅರ್ಚಕರು ಸೇರಿದಂತೆ ಶ್ವೇತಾ ಲಕ್ಷ್ಮಿಕಾಂತ್ ಸಿಂಗೆ, ಲಕ್ಷ್ಮೀಬಾಯಿ ಬಾಗಪ್ಪ ಮಾಂಗ, ಚಿತ್ರಲೇಖಾ ರಮೇಶ್ ಪಾಟೀಲ್, ಬಾಬುಸಾಹುಕಾರ ಅಮ್ಮಣ್ಣಿ, ಗಂಗಾಧರ ಸ್ವಾಮಿ ಕರಭಂಟನಾಳ, ಸಿದ್ದಪ್ಪ ಗುಡೇದ, ಎಸ್.ವೈ. ಪಾಟೀಲ್ ಹಾಗೂ ರಾಚಪ್ಪ ನೆಲೋಗಿ ಅವರನ್ನು ಸದಸ್ಯರನ್ನಾಗಿ ನೇಮಕ ಮಾಡಿತ್ತು. ಅದರ ಅನ್ವಯ ನಡೆದ ಮೊದಲ ಸಭೆಯಲ್ಲಿ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ಪೂರ್ಣಗೊಂಡಿತು.
ಅಧ್ಯಕ್ಷರಾಗಿ ಆಯ್ಕೆಯಾದ ಬಳಿಕ ಮಾತನಾಡಿದ ಎಸ್.ವೈ. ಪಾಟೀಲ್, ರಾಜ್ಯದ ಪ್ರಮುಖ ಧಾರ್ಮಿಕ ಕ್ಷೇತ್ರಗಳಲ್ಲಿ ಒಂದಾಗಿರುವ ಘತ್ತರಗಾ ಶ್ರೀ ಭಾಗ್ಯವಂತಿ ದೇವಾಲಯದ ಸಮಗ್ರ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಶ್ರಮಿಸುವುದಾಗಿ ತಿಳಿಸಿದರು. ಭಕ್ತರಿಗೆ ಉತ್ತಮ ಮೂಲಸೌಕರ್ಯ ಹಾಗೂ ಅಗತ್ಯ ಸೌಲಭ್ಯಗಳನ್ನು ಕಲ್ಪಿಸುವ ಜೊತೆಗೆ ಸದಸ್ಯರು ಮತ್ತು ಗ್ರಾಮಸ್ಥರ ಸಲಹೆಗಳನ್ನು ಪಡೆದು ದೇವಸ್ಥಾನವನ್ನು ರಾಜ್ಯದಲ್ಲೇ ಮಾದರಿ ಕ್ಷೇತ್ರವನ್ನಾಗಿ ಅಭಿವೃದ್ಧಿಪಡಿಸುವ ಗುರಿ ಹೊಂದಿರುವುದಾಗಿ ಹೇಳಿದರು.
ಸಭೆಯಲ್ಲಿ ದೇವಾಲಯದ ಸಿಬ್ಬಂದಿ ಮಂಜುನಾಥ ಹಡಪದ ಸೇರಿದಂತೆ ವ್ಯವಸ್ಥಾಪನಾ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.






