Afzalpur | ವ್ಯಕ್ತಿತ್ವ ರೂಪಿಸುವಲ್ಲಿ ಗುರುಗಳ ಪಾತ್ರ ಅತ್ಯಂತ ಮಹತ್ತರವಾಗಿದೆ: ವಿಶ್ವರಾಧ್ಯ ಶ್ರೀ

ಅಫಜಲಪುರ : ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನ 2003-04ನೇ ಸಾಲಿನ ಪಿಯುಸಿ ಹಳೆಯ ವಿದ್ಯಾರ್ಥಿಗಳಿಂದ ಗುರುಭವನದಲ್ಲಿ ಆಯೋಜಿಸಲಾದ ಗುರುವಂದನೆ ಹಾಗೂ ಸ್ನೇಹ ಸಮ್ಮಿಲನ ಕಾರ್ಯಕ್ರಮ ಸಂಭ್ರಮ ಮತ್ತು ಆತ್ಮೀಯತೆಯಿಂದ ನಡೆಯಿತು.
22 ವರ್ಷಗಳ ಬಳಿಕ ಒಂದೇ ವೇದಿಕೆಯಲ್ಲಿ ಸೇರಿದ್ದ ಹಳೆಯ ವಿದ್ಯಾರ್ಥಿಗಳು ವಿದ್ಯಾರ್ಥಿ ಜೀವನದ ಸವಿ ನೆನಪುಗಳನ್ನು ಮೆಲುಕು ಹಾಕಿ, ತಮ್ಮ ಗುರುಗಳಿಗೆ ಕೃತಜ್ಞತೆ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಪೂಜ್ಯ ಶ್ರೀ ವಿಶ್ವಾರಾಧ್ಯ ಮಳೇಂದ್ರ ಶಿವಾಚಾರ್ಯರು, ಸ್ನೇಹ ಸಮ್ಮಿಲನವು ಕೇವಲ ಹಳೆಯ ನೆನಪುಗಳನ್ನು ಹಂಚಿಕೊಳ್ಳುವ ಕಾರ್ಯಕ್ರಮವಾಗಿರದೆ, ಸಮಾಜದ ಬಗ್ಗೆ ಜವಾಬ್ದಾರಿಯನ್ನು ಅರಿತು ಸಮಾಜಮುಖಿ ಕಾರ್ಯಗಳಿಗೆ ಮುನ್ನುಡಿ ಬರೆಯುವ ವೇದಿಕೆಯಾಗಬೇಕು ಎಂದು ಹೇಳಿದರು.
ತಂದೆ-ತಾಯಿಗಳ ನಂತರ ವ್ಯಕ್ತಿತ್ವ ರೂಪಿಸುವಲ್ಲಿ ಗುರುಗಳ ಪಾತ್ರ ಅತ್ಯಂತ ಮಹತ್ತರವಾಗಿದೆ. ತಾಯಿಯೇ ಮಗುವಿನ ಮೊದಲ ಗುರು. ತಾಯಿ-ತಂದೆಯರು ದೇವರಿಗಿಂತ ಶ್ರೇಷ್ಠರು. ಅವರ ಸಂಸ್ಕಾರ ಹಾಗೂ ಗುರುಗಳ ಮಾರ್ಗದರ್ಶನದಿಂದ ಉತ್ತಮ ಸಮಾಜ ನಿರ್ಮಾಣ ಸಾಧ್ಯ ಎಂದು ಅವರು ಅಭಿಪ್ರಾಯಪಟ್ಟರು.
ಜೆಡಿಎಸ್ ಹಿಂದುಳಿದ ವರ್ಗಗಳ ರಾಜ್ಯಾಧ್ಯಕ್ಷ ಶಿವಕುಮಾರ ನಾಟೀಕಾರ ಪ್ರಾಸ್ತಾವಿಕವಾಗಿ ಮಾತನಾಡಿ, 22 ವರ್ಷಗಳ ಬಳಿಕ ಎಲ್ಲ ಸ್ನೇಹಿತರು ಒಂದೇ ವೇದಿಕೆಯಲ್ಲಿ ಸೇರಿರುವುದು ಸಂತಸದ ಕ್ಷಣವಾಗಿದೆ. ವಿದ್ಯಾರ್ಥಿ ಜೀವನದಲ್ಲಿ ಗುರುಗಳು ನೀಡಿದ ಶಿಕ್ಷಣ, ಶಿಸ್ತು ಹಾಗೂ ಜೀವನ ಮೌಲ್ಯಗಳೇ ಇಂದು ಪ್ರತಿಯೊಬ್ಬರ ಸಾಧನೆಗೆ ಅಡಿಪಾಯವಾಗಿವೆ. ಗುರುಗಳ ಋಣವನ್ನು ಎಂದಿಗೂ ತೀರಿಸಲಾಗದು ಎಂದರು.
ಮುಂದಿನ ದಿನಗಳಲ್ಲಿ ‘ಸೋಶಿಯಲ್ ವೆಲ್ಫೇರ್ ಟ್ರಸ್ಟ್’ ಸ್ಥಾಪಿಸಿ ಶಿಕ್ಷಣ, ಆರೋಗ್ಯ ಹಾಗೂ ಬಡ ವಿದ್ಯಾರ್ಥಿಗಳ ನೆರವಿನಂತಹ ಸಮಾಜಮುಖಿ ಕಾರ್ಯಗಳನ್ನು ಕೈಗೊಳ್ಳುವ ಉದ್ದೇಶ ಹೊಂದಿದ್ದೇವೆ ಎಂದು ತಿಳಿಸಿದರು.
ಮುಖ್ಯ ಗುರು ಎಚ್.ಎಸ್. ಪಾಟೀಲ ಜ್ಯೋತಿ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು. ಪಿಎಸ್‌ಐ ಸಂಗಮೇಶ ಅಂಗಡಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು. ತಹಶೀಲ್ದಾರ್ ಸಂಜೀವಕುಮಾರ ದಾಸರ ಸಸಿಗೆ ನೀರುಣಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ನಿವೃತ್ತ ಪ್ರಾಂಶುಪಾಲ ಎಚ್.ಸಿ. ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ಶಾಂತರಸ ಹೊಸಮನಿ, ಸಿದ್ದರಾಮ ಅಜಗೊಂಡ ಹಾಗೂ ಪ್ರಕಾಶ ಜಮಾದಾರ ಅವರನ್ನು ಹಳೆಯ ವಿದ್ಯಾರ್ಥಿಗಳ ಪರವಾಗಿ ಆತ್ಮೀಯವಾಗಿ ಸನ್ಮಾನಿಸಲಾಯಿತು.
ಮಹಾನಂದ ಕಲಶೆಟ್ಟಿ ಸಂಗಡಿಗರು ಪ್ರಾರ್ಥನಾ ಗೀತೆ ಹಾಡಿದರು. ಶಾಂತಾ ಮೋಸಲಗಿ ಸ್ವಾಗತಿಸಿದರು. ಭೀಮಶಾ ಅಂಜುಟಗಿ ಹಾಗೂ ತ್ರಿವೇಣಿ ಬಣಗಾರ್ ಕಾರ್ಯಕ್ರಮ ನಿರೂಪಿಸಿದರು. ಅರುಣ ಚವ್ಹಾಣ ಸನ್ಮಾನ ಕಾರ್ಯಕ್ರಮ ನಡೆಸಿಕೊಟ್ಟರೆ, ಯಲ್ಲಪ್ಪ ಉಡುಗಿ ವಂದಿಸಿದರು.
ವಿದ್ಯಾರ್ಥಿ ಜೀವನದಲ್ಲಿ ನಮ್ಮನ್ನು ಸತ್ಪಥದಲ್ಲಿ ನಡೆಸಿದ ಗುರುಗಳನ್ನು ಹಲವು ವರ್ಷಗಳ ಬಳಿಕ ಒಂದೇ ವೇದಿಕೆಯಲ್ಲಿ ಭೇಟಿ ಮಾಡಿರುವುದು ಅಪಾರ ಸಂತಸ ತಂದಿದೆ. ಗುರುಗಳು ಕಲಿಸಿದ ಶಿಕ್ಷಣ, ಶಿಸ್ತು ಮತ್ತು ಜೀವನ ಮೌಲ್ಯಗಳೇ ಇಂದು ನಮ್ಮ ಸಾಧನೆಗೆ ಬಲವಾಗಿವೆ. ಇಂತಹ ಸ್ನೇಹ ಸಮ್ಮಿಲನಗಳು ಪರಸ್ಪರ ಬಾಂಧವ್ಯವನ್ನು ಗಟ್ಟಿಗೊಳಿಸುವುದರ ಜೊತೆಗೆ ಸಮಾಜಮುಖಿ ಕಾರ್ಯಗಳಿಗೆ ಪ್ರೇರಣೆಯಾಗಲಿ ಎಂದು ಹಳೆಯ ವಿದ್ಯಾರ್ಥಿ ಪ್ರಕಾಶ ಕಲಕೇರಿ ಹೇಳಿದರು.
ಈ ವೇಳೆ ಹಳೆಯ ವಿದ್ಯಾರ್ಥಿಗಳಾದ ವಿನೋದ ರಾಠೋಡ, ಜಗನಾಥ ಚಿನವಾರ,ಆನಂದ ಬಿರಾದಾರ, ರಿಯಾಜ್ ಶೇಖ, ಸಿರಾಜ ಮನಿಯಾರ,ವಿಜಯಕುಮಾರ ಬಾದನಳ್ಳಿ, ಮಾಂತು ಬಾವಿ, ನಾಗು ಅಳ್ಳಗಿ,ಸೈಬಣ್ಣ ಅಳ್ಳಗಿ ರಾಜು ಬಿರಾದಾರ, ರವಿ ಬಳುರ್ಗಿ, ಸಂದೀಪ ಪಾಟೀಲ, ಅಂಬರೀಷ್ ಪೋದ್ದಾರ್, ಭರತ ಚಿಕ್ಕಳಗಿ, ರಮೇಶ ಹೂಗಾರ,ಮಲ್ಲು ಚಲಗೇರಿ,ಮೈಬೂಬ ಪಟೇಲ,ಹಾಜಿ ದಂಡೋತಿ, ರಾಜು ಉಡಗಿ, ಭೀಮಾಶಂಕರ ಕರೀಗೌಡ, ಪೀರಪ್ಪ ಬಟಗೇರಿ, ಗುರು ಹಡಪದ, ಸೇರಿದಂತೆ ಬಸಮ್ಮಾ ಚೆನ್ನೂರ,ಸಂಗೀತ ಮಾಡ್ಯಾಳ,ವಿಜಯಲಕ್ಷ್ಮಿ ಕುಲಕರ್ಣಿ ಪ್ರತಿಮಾ ಬಿಜಾಪುರ ಸೇರಿದಂತೆ ಅನೇಕರಿದ್ದರು.






