Afzalpur | ಶಿಕ್ಷಕ ವೃತ್ತಿ ಪವಿತ್ರ ಸೇವೆ : ಗಿರೇಪ್ಪ ಕನ್ನೂರ
ಗಿರೇಪ್ಪ ಕನ್ನೂರರಿಗೆ ಸನ್ಮಾನ ಸಮಾರಂಭ

ಅಫಜಲಪುರ: ಶಿಕ್ಷಕ ವೃತ್ತಿ ಎನ್ನುವುದು ಕೇವಲ ಜೀವನೋಪಾಯಕ್ಕಾಗಿ ಮಾಡುವ ಕೆಲಸವಲ್ಲ. ನಿಷ್ಠೆ, ಪ್ರಾಮಾಣಿಕತೆ ಮತ್ತು ಸಮರ್ಪಣಾ ಮನೋಭಾವದಿಂದ ವಿದ್ಯಾರ್ಥಿಗಳ ಭವಿಷ್ಯ ರೂಪಿಸುವ ಪವಿತ್ರ ಸೇವೆಯಾಗಿದೆ. ನನ್ನ 30 ವರ್ಷಗಳ ಶಿಕ್ಷಕ ವೃತ್ತಿಯಲ್ಲಿ ಅದರ ಘನತೆ ಮತ್ತು ಗೌರವವನ್ನು ಎತ್ತಿಹಿಡಿದು ಸೇವೆ ಸಲ್ಲಿಸಿದ್ದೇನೆ ಎಂದು ಸೇವಾ ನಿವೃತ್ತ ಶಿಕ್ಷಕ ಗಿರೇಪ್ಪ ಕನ್ನೂರ ಹೇಳಿದರು.
ಪಟ್ಟಣದ ಬಸವ ಮಂಟಪದಲ್ಲಿ ತಾಲೂಕಿನ ಕರಜಗಿಯಲ್ಲಿ ಹಿರಿಯ ಗುರು ಬಳಗ ಹಾಗೂ ಬಂಧು ಬಳಗದ ವತಿಯಿಂದ ಆಯೋಜಿಸಿದ್ದ ಸನ್ಮಾನ ಸಮಾರಂಭದಲ್ಲಿ ಗೌರವ ಸ್ವೀಕರಿಸಿ ಅವರು ಮಾತನಾಡಿದರು.
ನಾನು ಸೇವೆ ಸಲ್ಲಿಸಿದ ವಿವಿಧ ಶಾಲೆಗಳ ಮುಖ್ಯ ಶಿಕ್ಷಕರು, ಸಿಬ್ಬಂದಿ ವರ್ಗ, ಗ್ರಾಮಸ್ಥರು ಹಾಗೂ ಶಿಕ್ಷಣ ಇಲಾಖೆಯ ಅಧಿಕಾರಿಗಳು ಉತ್ತಮ ಸಹಕಾರ ನೀಡಿದ್ದಾರೆ. ಅವರೆಲ್ಲರ ಸಹಕಾರದಿಂದಲೇ ನನ್ನ ವೃತ್ತಿಜೀವನವನ್ನು ಯಶಸ್ವಿಯಾಗಿ ಪೂರ್ಣಗೊಳಿಸಲು ಸಾಧ್ಯವಾಯಿತು ಎಂದು ತಮ್ಮ ಸೇವಾ ಅವಧಿಯ ಅನುಭವಗಳನ್ನು ಹಂಚಿಕೊಂಡರು.
ಜೇವರ್ಗಿ ತಾಲೂಕಿನ ಶಿಕ್ಷಣ ಸಂಯೋಜಕ ಲಕ್ಷ್ಮಣ ಝಳಕಿ ಮಾತನಾಡಿ, ಶಿಕ್ಷಕ ಗಿರೇಪ್ಪ ಕನ್ನೂರ ಅವರು ಕೇವಲ ವಿದ್ಯಾರ್ಥಿಗಳಿಗೆ ಮಾತ್ರವಲ್ಲದೆ, ಸಹೋದ್ಯೋಗಿಗಳು ಹಾಗೂ ಸಮಾಜಕ್ಕೂ ಸದಾ ಮಾರ್ಗದರ್ಶನ ನೀಡುತ್ತಿದ್ದರು. ಅವರ ಸೇವಾ ಮನೋಭಾವ ಮತ್ತು ವ್ಯಕ್ತಿತ್ವ ಇತರ ಶಿಕ್ಷಕರಿಗೆ ಮಾದರಿಯಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಗುರುಶಾಂತಯ್ಯ ಹಿರೇಮಠ, ವಿಠ್ಠಲ ಮಿರಗಿ, ಹಿರೋಜರಾಯ ಪಾಟೀಲ್ ಹಾಗೂ ಮಲ್ಲಿಕಾರ್ಜುನ ಹುಗ್ಗಿ ಮಾತನಾಡಿ, ಗಿರೇಪ್ಪ ಕನ್ನೂರ ಅವರ ಸುದೀರ್ಘ ಶಿಕ್ಷಕ ಸೇವೆಯನ್ನು ಸ್ಮರಿಸಿದರು.
ಈ ಸಂದರ್ಭದಲ್ಲಿ ರಾಮಲಿಂಗಯ್ಯ ಮಠ, ಮಾಣಿಕರಾವ ಕುಲಕರ್ಣಿ, ಶಿವಾನಂದ ರೇವೂರ, ಗುರುಸಿದ್ದಯ್ಯ ನಂದಿಮಠ, ಗುರಪ್ಪ ಕಾಳಿ, ಮಾರುತಿ ಸುತಾರ, ಸಂಗಮನಾಥ ಗುಣಾರಿ, ಇಬ್ರಾಹಿಂ ಚೌಧರಿ, ಕಾಳಪ್ಪ ಸುತಾರ, ಯಲ್ಲಪ್ಪ ಪ್ಯಾಟಿ, ದೇಸು ಚವ್ಹಾಣ, ಶಂಕರ ನಾವಿ, ನಾರಾಯಣ ಅಂಬೂರೆ, ದ್ಯಾವಮ್ಮ ನಾಯ್ಕೋಡಿ, ಗಂಗಾಧರ ಐಕೂರ, ಬಸವರಾಜ ವಾಘಮಾರೆ, ರೇಣುಕಾ ಢಾಂಗೆ, ಶೋಭಾ ಜಗನ್ನಾಥ ಮೋರೆ, ಗುರುಲಿಂಗಪ್ಪ ಪ್ರಧಾನಿ, ಅಶೋಕ ದೇಸಾಯಿ, ಖಾಜಪ್ಪ ಪ್ಯಾಟಿ ಹಾಗೂ ಬಸವರಾಜ ಕುಂಬಾರ ಸೇರಿದಂತೆ ಹಲವರು ಉಪಸ್ಥಿತರಿದ್ದರು.






