Afzalpur | ಎರಡು ಪ್ರತ್ಯೇಕ ಸರಗಳ್ಳತನ ಪ್ರಕರಣ : ಮೂವರು ಅಂತರರಾಜ್ಯ ಕಳ್ಳರ ಬಂಧನ, 40 ಗ್ರಾಂ ಚಿನ್ನಾಭರಣ ವಶ

ಅಫಜಲಪುರ: ದೇವಲ ಗಾಣಗಾಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ಎರಡು ಪ್ರತ್ಯೇಕ ಸರಗಳ್ಳತನ ಪ್ರಕರಣಗಳನ್ನು ಭೇದಿಸಿರುವ ಪೊಲೀಸರು, ಮೂವರು ಅಂತರರಾಜ್ಯ ಕಳ್ಳರನ್ನು ಬಂಧಿಸಿ, ಅವರಿಂದ 40 ಗ್ರಾಂ ತೂಕದ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ.
ಬಂಧಿತರನ್ನು ಸೋಲಾಪುರ ರಸ್ತೆಯ ಜೋಪಡಿಪಟ್ಟಿ ನಿವಾಸಿಗಳಾದ ಭಗತ್ ಸಿಂಗ್ ಅಶೋಕ ಸಾಳುಂಕೆ, ಬಾದಲ್ ಅಶೋಕ ಸಾಳುಂಕೆ ಹಾಗೂ ಅಭಿಮನ್ಯು ಅರ್ಜುನ ಡಾಂಗೆ ಎಂದು ಗುರುತಿಸಲಾಗಿದೆ.
2025ರ ನವೆಂಬರ್ 5ರಂದು ದೇವಲ ಗಾಣಗಾಪುರ ಬಸ್ ನಿಲ್ದಾಣದಲ್ಲಿ ಅಶ್ವಿನಿ ಎಂಬ ಮಹಿಳೆಯ 20 ಗ್ರಾಂ ತೂಕದ ಚಿನ್ನದ ತಾಳಿ ಸರ ಕಳವಾಗಿದ್ದು, ಈ ಸಂಬಂಧ ದೇವಲ ಗಾಣಗಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಇದೇ ರೀತಿ, 2026ರ ಫೆಬ್ರವರಿ 16ರಂದು ದೇವಲ ಗಾಣಗಾಪುರ ಗ್ರಾಮದ ಸಂಗಮದ ಭೀಮಾ ನದಿ ದಂಡೆಯಲ್ಲಿ ಕಲ್ಯಾಣ ಕಾರ್ಯಕ್ರಮಕ್ಕೆ ಬಂದಿದ್ದ ಕಲಾವತಿ ಅವರ 20 ಗ್ರಾಂ ತೂಕದ ತಾಳಿ ಸರ, 10 ಗ್ರಾಂ ತಾಳೆಗುಂಡು ಹಾಗೂ 10 ಗ್ರಾಂ ಜೋರಮಾಳ ಸೇರಿದಂತೆ ಒಟ್ಟು 40 ಗ್ರಾಂ ತೂಕದ ಚಿನ್ನಾಭರಣಗಳನ್ನು ಕಳ್ಳರು ದೋಚಿ ಪರಾರಿಯಾಗಿದ್ದರು.
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಜಿಲ್ಲಾ ಪೊಲೀಸ್ ಅಧೀಕ್ಷಕ ಅಡ್ಡೂರು ಶ್ರೀನಿವಾಸು ಹಾಗೂ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಮಹೇಶ್ ಮೇಘಣ್ಣನವರ್ ಅವರ ಮಾರ್ಗದರ್ಶನದಲ್ಲಿ ವಿಶೇಷ ತನಿಖಾ ತಂಡ ರಚಿಸಲಾಗಿತ್ತು.
ಡಿವೈಎಸ್ಪಿ ತಮ್ಮರಾಯ ಪಾಟೀಲ್ ಹಾಗೂ ಅಫಜಲಪುರ ವೃತ್ತದ ಸಿಪಿಐ ಲಖನ್ ಮಸಗುಪ್ಪಿ ಅವರ ನೇತೃತ್ವದಲ್ಲಿ ದೇವಲ ಗಾಣಗಾಪುರ ಠಾಣೆಯ ಪಿಎಸ್‌ಐ ಸಂಗೀತಾ ಸಿಂಧೆ ಮತ್ತು ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾದರು.
ಬಂಧಿತರಿಂದ ಒಟ್ಟು 40 ಗ್ರಾಂ ತೂಕದ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಪ್ರಕರಣದ ಕುರಿತು ಪೊಲೀಸರು ಹೆಚ್ಚಿನ ತನಿಖೆ ಮುಂದುವರಿಸಿದ್ದಾರೆ.






