Afzalpur | ಮೂಲಸೌಕರ್ಯ ಕಲ್ಪಿಸಲು ಆಗ್ರಹಿಸಿ ಪುರಸಭೆ ಎದುರು ವಾರ್ಡ್ ನಿವಾಸಿಗಳ ಪ್ರತಿಭಟನೆ

ಅಫಜಲಪುರ: ಪಟ್ಟಣದ ವಾರ್ಡ್ ನಂ. 17ರಲ್ಲಿ ಮೂಲಸೌಕರ್ಯಗಳ ಕೊರತೆಯನ್ನು ತಕ್ಷಣ ನಿವಾರಿಸಬೇಕೆಂದು ಆಗ್ರಹಿಸಿ ವಾರ್ಡ್ ನಿವಾಸಿಗಳು, ವಿಶೇಷವಾಗಿ ಮಹಿಳೆಯರು, ಸೋಮವಾರ ಪುರಸಭೆ ಕಚೇರಿ ಎದುರು ಪ್ರತಿಭಟನೆ ನಡೆಸಿ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ವಾರ್ಡ್‌ನಲ್ಲಿ ಸಾರ್ವಜನಿಕ ಶೌಚಾಲಯ, ಸಮರ್ಪಕ ಚರಂಡಿ ವ್ಯವಸ್ಥೆ, ರಸ್ತೆ, ಬೀದಿ ದೀಪ ಹಾಗೂ ಕುಡಿಯುವ ನೀರಿನಂತಹ ಮೂಲಭೂತ ಸೌಲಭ್ಯಗಳ ಕೊರತೆಯಿಂದ ನಿವಾಸಿಗಳು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಹಲವು ಬಾರಿ ಮನವಿ ಸಲ್ಲಿಸಿದ್ದರೂ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಪ್ರತಿಭಟನೆ ವೇಳೆ ನಿವಾಸಿಗಳು ಕೆಲಕಾಲ ಪುರಸಭೆ ಕಚೇರಿಯ ಮುಖ್ಯ ದ್ವಾರವನ್ನು ಬಂದ್ ಮಾಡಿ ಆಕ್ರೋಶ ವ್ಯಕ್ತಪಡಿಸಿದರು. ಇದರಿಂದ ಅಧಿಕಾರಿಗಳು ಹಾಗೂ ಸಿಬ್ಬಂದಿ ಕೆಲಕಾಲ ಕಚೇರಿಯೊಳಗೇ ಉಳಿಯಬೇಕಾದ ಪರಿಸ್ಥಿತಿ ನಿರ್ಮಾಣವಾಯಿತು. ಬಳಿಕ ಅಧಿಕಾರಿಗಳು ಪ್ರತಿಭಟನಾಕಾರರೊಂದಿಗೆ ಮಾತುಕತೆ ನಡೆಸಿದ ನಂತರ ಪರಿಸ್ಥಿತಿ ತಿಳಿಯಾಯಿತು.
ಭರವಸೆಗೆ ತೃಪ್ತರಾಗದ ವಾರ್ಡ್ ನಿವಾಸಿಗಳು, “ಕಚೇರಿಯಲ್ಲಿ ಕುಳಿತು ಭರವಸೆ ನೀಡುವುದರಿಂದ ಸಮಸ್ಯೆಗಳು ಬಗೆಹರಿಯುವುದಿಲ್ಲ. ಸ್ಥಳಕ್ಕೆ ಬಂದು ವಾಸ್ತವ ಸ್ಥಿತಿ ಪರಿಶೀಲಿಸಬೇಕು” ಎಂದು ಅಧಿಕಾರಿಗಳನ್ನು ವಾರ್ಡ್‌ಗೆ ಕರೆದುಕೊಂಡು ಹೋದರು. ಅಲ್ಲಿ ಚರಂಡಿ, ರಸ್ತೆ, ಕುಡಿಯುವ ನೀರು ಹಾಗೂ ಬೀದಿ ದೀಪ ಸೇರಿದಂತೆ ವಿವಿಧ ಸಮಸ್ಯೆಗಳನ್ನು ಸ್ಥಳದಲ್ಲೇ ತೋರಿಸಿ ತಕ್ಷಣ ಪರಿಹಾರ ಕಲ್ಪಿಸುವಂತೆ ಒತ್ತಾಯಿಸಿದರು.
ಸ್ಥಳ ಪರಿಶೀಲಿಸಿದ ಅಧಿಕಾರಿಗಳು ಸಮಸ್ಯೆಗಳನ್ನು ಶೀಘ್ರದಲ್ಲೇ ಬಗೆಹರಿಸಲು ಅಗತ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. ಆದರೆ, ಒಂದು ವಾರದೊಳಗೆ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಲ್ಪಿಸದಿದ್ದರೆ ಪುರಸಭೆ ಕಚೇರಿ ಎದುರು ಮತ್ತೊಮ್ಮೆ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ವಾರ್ಡ್ ನಿವಾಸಿಗಳು ಎಚ್ಚರಿಕೆ ನೀಡಿದರು.
ಪ್ರತಿಭಟನೆಯಲ್ಲಿ ಶಾಂತಾ ಶಿವಣಗಿ, ಧಾನು ಪತಾಟೆ, ಶಶಿಕಾಂತ ಶಿವಣಗಿ, ಸಿದ್ದು ರಾಣಿ, ಶಾಂತು ಅಂಜುಟಗಿ, ಬಸವರಾಜ ಸೇರಿದಂತೆ ವಾರ್ಡ್‌ನ ಅನೇಕ ಮಹಿಳೆಯರು ಹಾಗೂ ನಿವಾಸಿಗಳು ಭಾಗವಹಿಸಿದ್ದರು.






