ಅಫಜಲಪುರ | 20 ವರ್ಷಗಳ ಬಳಿಕ ಭೀಮಾ ಏತ ನೀರಾವರಿಯ ನೀರು ಬಿಡುಗಡೆ : ರೈತರ ಸಂತಸ

ಅಫಜಲಪುರ: ತಾಲೂಕಿನ ನೀರಾವರಿ ವಂಚಿತ ಹಾಗೂ ಸತತ ಬರಗಾಲಕ್ಕೆ ತುತ್ತಾಗುತ್ತಿದ್ದ ಅತನೂರ, ಭೋಗನಳ್ಳಿ, ಅಂಕಲಗಿ, ಸಿದನೂರ, ಬಾದನಳ್ಳಿ ಸೇರಿದಂತೆ ಅನೇಕ ಹಳ್ಳಿಗಳಿಗೆ ಭೀಮಾ ಏತ ನೀರಾವರಿ ಕಾಲುವೆ ಮೂಲಕ ನೀರು ಹರಿಸಿರುವುದರಿಂದ ಈ ಭಾಗದ ರೈತರಲ್ಲಿ ಸಂತಸ ಮೂಡಿಸಿದೆ.
ಸಿಂದನೂರ ಗ್ರಾಮದ ಕಾಲುವೆಗೆ ಕಳೆದ ಎರಡು ದಿನಗಳಿಂದ ಭೀಮಾ ಏತ ನೀರು ಹರಿಯುತ್ತಿದ್ದು, ಇದರಿಂದ ಸುತ್ತಮುತ್ತಲಿನ ರೈತರಿಗೆ ದುಪ್ಪಟ್ಟು ಖುಷಿಯಾಗಿದೆ.
ಈ ಕುರಿತು ರೈತ ಮುಖಂಡರಾದ ಲತೀಪ್ ಪಟೇಲ ಹಾಗೂ ಮೆಹಬೂಬ್ ನದಾಫ್ ಮಾತನಾಡಿ, ಅನೇಕ ವರ್ಷಗಳ ಕಾಲ ಕಾಲುವೆಗಳಿದ್ದರೂ ನಮ್ಮ ಗ್ರಾಮಗಳಿಗೆ ನೀರು ಹರಿದಿರಲಿಲ್ಲ. ಇದೀಗ ಕಾಲುವೆಗಳಿಗೆ ನೀರು ಬಂದಿರುವುದು ನಮ್ಮೂರಿನ ರೈತರಿಗೆ ಹೊಸ ಆಶಾಭಾವನೆ ತಂದಿದೆ ಎಂದರು.
ಆದರೆ, ವರ್ಷಗಳ ಕಾಲ ಕಾಲುವೆಗಳಲ್ಲಿ ಹೂಳು ತುಂಬಿರುವುದರಿಂದ ನೀರು ಸರಗವಾಗಿ ಹರಿಯಲು ಅಡಚಣೆಯಾಗುತ್ತಿದೆ. ಸಂಬಂಧಪಟ್ಟ ಅಧಿಕಾರಿಗಳು ತಕ್ಷಣವೇ ಹೂಳೆತ್ತುವ ಕಾಮಗಾರಿ ಕೈಗೊಂಡು ನೀರು ಸುಗಮವಾಗಿ ಹರಿಯಲು ಕ್ರಮ ವಹಿಸಬೇಕು ಎಂದು ಅವರು ಮನವಿ ಮಾಡಿದರು.
ತಾಲೂಕು ಪ್ರಾಂತ ರೈತ ಸಂಘದ ಅಧ್ಯಕ್ಷ ಶ್ರೀಮಂತ ಬಿರಾದಾರ ಮಾತನಾಡಿ, ಭೀಮಾ ಏತ ನೀರಾವರಿ ಯೋಜನೆ ಆರಂಭವಾಗಿ 20 ವರ್ಷಗಳಾದರೂ ಬಳೂಂಡಗಿ ಏತ ನೀರಾವರಿ ಕಾಲುವೆ ವ್ಯಾಪ್ತಿಯ 32 ಹಳ್ಳಿಗಳು ಹಾಗೂ ಅಳ್ಳಗಿ (ಬಿ) ಏತ ನೀರಾವರಿ ಕಾಲುವೆ ವ್ಯಾಪ್ತಿಯ 11 ಗ್ರಾಮಗಳಲ್ಲಿ ಹಲವಾರು ಹಳ್ಳಿಗಳಿಗೆ ನೀರು ಹರಿದಿರಲಿಲ್ಲ. ಅಧಿಕಾರಿಗಳ ನಿರ್ಲಕ್ಷ್ಯ ಹಾಗೂ ಜನಪ್ರತಿನಿಧಿಗಳ ಇಚ್ಛಾಶಕ್ತಿಯ ಕೊರತೆಯಿಂದ ಈ ಪರಿಸ್ಥಿತಿ ಉಂಟಾಗಿತ್ತು. ಆದರೆ, ರೈತರ ಹೋರಾಟದಿಂದ ಅಂತು ಇಂತು ಈಗಾದರೂ ನೀರು ಹರಿದಿದೆ ಎಂಬುದೇ ಸಮಾಧಾನಕರ ವಿಷಯ. ರೈತರು ನೀರನ್ನು ಸದ್ಬಳಕೆ ಮಾಡಿಕೊಂಡು ಆರ್ಥಿಕವಾಗಿ ಮುನ್ನಡೆಯಬೇಕು ಎಂದು ಕರೆ ನೀಡಿದರು.
ಭೀಮಾ ಏತ ನೀರಾವರಿ ಯೋಜನೆಯ ಸಹಾಯಕ ಅಭಿಯಂತರ ಸುಧೀರ ಸಂಗಾಣಿ ಮಾತನಾಡಿ, ಸಿದನೂರ ಗ್ರಾಮದ ಕಾಲುವೆಗಳಿಗೆ ಬಳೂಂಡಗಿ ಕಾಲುವೆಯಿಂದ ನೀರು ಹರಿಸಲಾಗಿದೆ. ರೈತರು ನೀರನ್ನು ಸರಿಯಾಗಿ ಸದ್ಬಳಕೆ ಮಾಡಿಕೊಳ್ಳಬೇಕು ಮತ್ತು ಬರುವ ಮಾರ್ಚ ತಿಂಗಳವರಿಗೂ ಕಾಲುವೆಯಲ್ಲಿ ನೀರು ಹರಿಸಲಾಗುವುದು ಹಾಗೂ ಶೀಘ್ರದಲ್ಲೇ ಈ ಭಾಗದ ಇನ್ನೂ ಅನೇಕ ಹಳ್ಳಿಗಳ ಕಾಲುವೆಗಳಿಗೆ ನೀರು ಹರಿಸಲಾಗುವುದು ಹಾಗೂ ಕಾಲುವೆ ಹೂಳೆತ್ತುವ ಕಾಮಗಾರಿ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಭೀಮಾ ಏತ ನೀರಾವರಿ ಯೋಜನೆ ಸಹಾಯಕ ಇಂಜಿನಿಯರ ಸಾಯಿಬಣ್ಣ ಕೆ.ಎಸ್. ಗ್ರಾಮ ಪಂಚಾಯತ್ ಸದಸ್ಯ ಲತೀಪ್ ಕಲ್ಬುರ್ಗಿ, ಶಿವಾನಂದ ಹೇರೂರ, ಲಕ್ಷ್ಮೀಪುತ್ರ ನಿಂಬಾಳ, ಪುಂಡಲಿಕ್ ಗೌಂಡಿ, ಶೆಬ್ಬಿಕ್ ಸೇಡಂ ಸೇರಿದಂತೆ ರೈತರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.







