ಜನಜೀವನ ಬದಲಾವಣೆಗೆ AI, ʼಇಂಟರ್ನೆಟ್ ಆಫ್ ಥಿಂಗ್ಸ್ʼ ಕಾರಣ: ಪ್ರೊ. ಪಾಟೀಲ್

ಕಲಬುರಗಿ: ಕೃತಕ ಬುದ್ಧಿಮತ್ತೆ (ಎಐ) ಮತ್ತು ಇಂಟರ್ನೆಟ್ ಆಫ್ ಥಿಂಗ್ಸ್ (ಐಒಟಿ) ಕ್ಷೇತ್ರದಲ್ಲಿ ಆಗಿರುವ ಪ್ರಗತಿಯು ಇಂಜಿನಿಯರಿಂಗ್ ಕ್ಷೇತ್ರದಲ್ಲಿ ಮತ್ತು ಮೂಲಸೌಕರ್ಯ ಸೌಲಭ್ಯಗಳನ್ನು ಸುಧಾರಿಸುವ ಮೂಲಕ ಸಾಮಾನ್ಯ ಜನರ ಜೀವನವನ್ನು ಸುಧಾರಿಸುವಲ್ಲಿ ಒಂದು ಪ್ರಮುಖ ಬದಲಾವಣೆಯಾಗಿದೆ ಎಂದು ಹಿರಿಯ ಕೃಷಿ ವಿಜ್ಞಾನಿ ಮತ್ತು ಧಾರವಾಡದ ಕೃಷಿ ವಿಜ್ಞಾನ ವಿಶ್ವವಿದ್ಯಾಲಯದ (ಯುಎಎಸ್) ಉಪಕುಲಪತಿ ಪ್ರೊಫೆಸರ್ ಪಿ. ಎಲ್. ಪಾಟೀಲ್ ಹೇಳಿದರು.
ಕಲಬುರಗಿ ನಗರದ ಡಾ. ಶರಣಬಸವಪ್ಪ ಅಪ್ಪಾಜಿ ಅನುಭವ ಮಂಟಪದಲ್ಲಿ ಭಾನುವಾರ ನಡೆದ ಶರಣಬಸವ ವಿಶ್ವವಿದ್ಯಾಲಯದ 7ನೇ ಘಟಿಕೋತ್ಸವ ಭಾಷಣದಲ್ಲಿ ಪ್ರೊ. ಪಾಟೀಲ್ ಮಾತನಾಡಿ, ಕೃತಕ ಬುದ್ಧಿಮತ್ತೆಯು ಸಂಕೀರ್ಣ ವ್ಯವಸ್ಥೆಗಳನ್ನು ವಿನ್ಯಾಸಗೊಳಿಸುವ, ಅಭಿವೃದ್ಧಿಪಡಿಸುವ ಮತ್ತು ನಿಯೋಜಿಸುವ ವಿಧಾನವನ್ನು ಪರಿವರ್ತಿಸಿದೆ. ಎಐ ನಿಂದ ರಚಿಸಲಾದ ಬುದ್ಧಿವಂತ ಮೂಲಸೌಕರ್ಯವು ಸಮಸ್ಯೆ ಪರಿಹರಿಸುವ ವಿಧಾನಗಳನ್ನು ಕ್ರಾಂತಿಗೊಳಿಸಿದೆ ಎಂದರು.
ಐಒಟಿ ಪರಸ್ಪರ ಸರಾಗವಾಗಿ ಸಂವಹನ ನಡೆಸಬಹುದಾದ ಅಂತರ್‍ಸಂಪರ್ಕಿತ ವ್ಯವಸ್ಥೆಗಳ ರಚನೆಗೆ ಅನುವು ಮಾಡಿಕೊಟ್ಟಿದೆ. ಸ್ಮಾರ್ಟ್ ಸಿಟಿಗಳು, ಸ್ಮಾರ್ಟ್ ಮನೆಗಳು ಮತ್ತು ಸಾರಿಗೆ ಜಾಲದ ಅಭಿವೃದ್ಧಿಗೆ ಐಒಟಿ ಸಹಾಯ ಮಾಡಿದೆ. ವಿಶ್ವವಿದ್ಯಾಲಯದಿಂದ ಹೊರಬರುವ ಇಂಜಿನಿಯರಿಂಗ್ ಪದವೀಧರರು ನಾವೀನ್ಯತೆಗಾಗಿ ಹಲವಾರು ಅವಕಾಶಗಳನ್ನು ಹೊಂದಿರುವ ಐಒಟಿ ಸಾಮಥ್ರ್ಯವನ್ನು ಅರ್ಥಮಾಡಿಕೊಳ್ಳಬೇಕು. ಅದರ ಶಕ್ತಿಯನ್ನು ಬಳಸಿಕೊಳ್ಳಬಹುದಾದ ಪರಿಹಾರಗಳನ್ನು ಅಭಿವೃದ್ಧಿಪಡಿಸಬೇಕು, ಸುರಕ್ಷಿತ ಸಂವಹನ ಪ್ರೋಟೋಕಾಲ್‍ಗಳನ್ನು ಅಭಿವೃದ್ಧಿಪಡಿಸಲು ಇಂಧನ ಸಾಮರ್ಥ ವ್ಯವಸ್ಥೆಗಳನ್ನು ವಿನ್ಯಾಸಗೊಳಿಸಬೇಕು. ಹೆಚ್ಚಿನ ವೇಗದ ಡೇಟಾ ವರ್ಗಾವಣೆ ಮತ್ತು ವ್ಯಾಪಕ ಸಂಪರ್ಕದೊಂದಿಗೆ 5ಜಿ ತಂತ್ರಜ್ಞಾನವು ಆರೋಗ್ಯ ರಕ್ಷಣೆ, ಹಣಕಾಸು, ಕೃಷಿ, ಮನರಂಜನೆ ಮತ್ತು ಇತರ ಕ್ಷೇತ್ರಗಳು ಸೇರಿದಂತೆ ಕೈಗಾರಿಕೆಗಳಲ್ಲಿ ಕ್ರಾಂತಿಯನ್ನುಂಟುಮಾಡಲು ಸಜ್ಜಾಗಿದೆ ಎಂದು ಅವರು ಹೇಳಿದರು.
ಎಐ, ಐಒಟಿ, 5ಜಿ, ಮೆಟೀರಿಯಲ್ ಸೈನ್ಸ್ ಮತ್ತು ಸೈಬರ್ ಭದ್ರತೆಯಲ್ಲಿನ ಪ್ರಗತಿಯೊಂದಿಗೆ, ಇಂಜಿನಿಯರ್‍ಗಳಿಗೆ ಅನೇಕ ಅವಕಾಶಗಳಿವೆ. “ಇಂಜಿನಿಯರ್‍ಗಳಾಗಿ, ಮಾನವೀಯತೆಗೆ ಉತ್ತಮ ಭವಿಷ್ಯವನ್ನು ಸೃಷ್ಟಿಸಲು ಈ ತಂತ್ರಜ್ಞಾನಗಳ ಶಕ್ತಿಯನ್ನು ಬಳಸಿಕೊಳ್ಳುವುದು ನಿಮ್ಮ ಜವಾಬ್ದಾರಿಯಾಗಿದೆ” ಎಂದರು.
“ದಶಕಗಳಿಂದ ಭಾರತೀಯ ಇಂಜಿನಿಯರ್‍ಗಳು ಮತ್ತು ಕಂಪ್ಯೂಟರ್ ವಿಜ್ಞಾನಿಗಳು ಅಮೇರಿಕದ ನಾವೀನ್ಯತೆಗಳ ಬೆನ್ನೆಲುಬಾಗಿದ್ದಾರೆ” ಎಂದರು.
ಶರಣಬಸವೇಶ್ವರ ಸಂಸ್ಥಾನದ 8ನೇ ಮಹಾದಾಸೋಹ ಪೀಠಾಧಿಪತಿಗಳಾದ ಲಿಂಗೈಕ್ಯ ಡಾ. ಶರಣಬಸವಪ್ಪ ಅಪ್ಪಾಜಿ ಶಿಕ್ಷಣ ಮತ್ತು ಸಾಮಾಜಿಕ ಕಾರ್ಯ ಕ್ಷೇತ್ರದಲ್ಲಿ ನೀಡಿದ ಕೊಡುಗೆಯನ್ನು ಶ್ಲಾಘಿಸಿದ ಪ್ರೊ. ಪಾಟೀಲ್, “ಶರಣಬಸವ ವಿಶ್ವವಿದ್ಯಾಲಯದ ಕುಲಾಧಿಪತಿಗಳಾದ ಡಾ. ದಾಕ್ಷಾಯಿಣಿ ಅವ್ವಾಜಿ ಅವರು ತಮ್ಮ ಚಾಣಾಕ್ಷತೆ ಮತ್ತು ದೂರದೃಷ್ಟಿಯ ಚಿಂತನೆಯೊಂದಿಗೆ ಭವಿಷ್ಯದ ದೃಷ್ಟಿಕೋನ ಹಾಗೂ ಪ್ರಾಯೋಗಿಕ ನಿರ್ಧಾರಗಳ ಮೂಲಕ ಶರಣಬಸವ ವಿಶ್ವವಿದ್ಯಾಲಯವನ್ನು ಗಮ್ಯಸ್ಥಾನದತ್ತ ಮುನ್ನಡೆಸುತ್ತಿದ್ದಾರೆ” ಎಂದು ತಮ್ಮ ಘಟಿಕೋತ್ಸವ ಭಾಷಣದಲ್ಲಿ ಹೇಳಿದರು.







