ಹಝ್ರತ್ ಸೈಯದ್ ಮುಹಮ್ಮದ್ ಅಲಿ ಅಲ್ ಹುಸೈನಿ ಅವರಿಗೆ ಅಲ್-ಅಮೀನ್ ಪ್ರಶಸ್ತಿ

ಬೆಂಗಳೂರು: ಅಲ್-ಅಮೀನ್ ಎಜುಕೇಷನಲ್ ಸೊಸೈಟಿಯ ಸಂಸ್ಥಾಪಕರ ದಿನಾಚರಣೆ–2026ರ ಅಂಗವಾಗಿ ನೀಡಲಾಗುವ ಪ್ರತಿಷ್ಠಿತ ʼಅಲ್-ಅಮೀನ್ ಆಲ್ ಇಂಡಿಯಾ ಕಮ್ಯೂನಿಟಿ ಲೀಡರ್‌ಶಿಪ್ ಅವಾರ್ಡ್–2026ʼ ಅನ್ನು ಹಝ್ರತ್ ಖಾಜಾ ಬಂದಾ ನವಾಜ್ (ರ.ಅ.) ಅವರ ದರ್ಗಾದ ಸಜ್ಜಾದಾ ನಶೀನ್, ಕರ್ನಾಟಕ ರಾಜ್ಯ ವಕ್ಫ್ ಮಂಡಳಿ ಅಧ್ಯಕ್ಷರು, ಖಾಜಾ ಬಂದಾ ನವಾಜ್ ವಿಶ್ವವಿದ್ಯಾಲಯದ ಕುಲಪತಿಗಳು ಹಾಗೂ ಖಾಜಾ ಎಜುಕೇಷನ್ ಸೊಸೈಟಿ ಅಧ್ಯಕ್ಷರಾದ ಹಜರತ್ ಹಾಫಿಜ್ ಡಾ. ಸೈಯದ್ ಮುಹಮ್ಮದ್ ಅಲಿ ಅಲ್ ಹುಸೈನಿ ಅವರಿಗೆ ಪ್ರದಾನ ಮಾಡಲಾಯಿತು.
ಶಿಕ್ಷಣ, ಸಮುದಾಯ ಅಭಿವೃದ್ಧಿ ಹಾಗೂ ಸಾಮಾಜಿಕ ಸೇವಾ ಕ್ಷೇತ್ರಗಳಲ್ಲಿ ಗಣನೀಯ ಕೊಡುಗೆ ನೀಡಿದ ಗಣ್ಯರನ್ನು ಗುರುತಿಸಿ ಅಲ್-ಅಮೀನ್ ಎಜುಕೇಷನಲ್ ಸೊಸೈಟಿಯು ಪ್ರತಿವರ್ಷ ತನ್ನ ಸಂಸ್ಥಾಪಕರ ದಿನಾಚರಣೆಯ ಸಂದರ್ಭದಲ್ಲಿ ಈ ಪ್ರಶಸ್ತಿಯನ್ನು ನೀಡುತ್ತಿದೆ.
ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅಲ್-ಅಮೀನ್ ಎಜುಕೇಷನಲ್ ಸೊಸೈಟಿಯ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಸದಸ್ಯರು ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
ಸಂಸ್ಥಾಪಕರ ದಿನಾಚರಣೆಯ ಅಂಗವಾಗಿ ಮಾತನಾಡಿದ ಗಣ್ಯರು, ಹಝ್ರತ್ ಹಾಫಿಝ್ ಡಾ. ಸೈಯದ್ ಮುಹಮ್ಮದ್ ಅಲಿ ಅಲ್ ಹುಸೈನಿ ಅವರ ಶೈಕ್ಷಣಿಕ ಹಾಗೂ ಸಾಮಾಜಿಕ ಸೇವೆಗಳನ್ನು ಪ್ರಶಂಸಿಸಿದರು. ಸಮುದಾಯದ ಶೈಕ್ಷಣಿಕ ಮತ್ತು ಸಾಮಾಜಿಕ ಅಭಿವೃದ್ಧಿಗಾಗಿ ಅವರು ನಿರಂತರವಾಗಿ ಕೈಗೊಳ್ಳುತ್ತಿರುವ ಕಾರ್ಯಗಳನ್ನು ಶ್ಲಾಘಿಸಿದರು.
ಸಮುದಾಯದ ಸಬಲೀಕರಣ, ಶಿಕ್ಷಣದ ಪ್ರಗತಿ ಹಾಗೂ ಸಾಮಾಜಿಕ ಸೇವೆಯ ಕ್ಷೇತ್ರದಲ್ಲಿ ಸಲ್ಲಿಸಿರುವ ಸೇವೆಯನ್ನು ಪರಿಗಣಿಸಿ ಈ ಗೌರವ ನೀಡಿರುವುದು ವಿಶೇಷವಾಗಿದೆ.






