Aland | ಮಹಿಳಾ ಪತ್ರಕರ್ತೆಗೆ ಅವಮಾನ ಆರೋಪ: ತನಿಖೆಗೆ ಆಗ್ರಹ

ಆಳಂದ: ದೆಹಲಿಯ ಜಂತರ್‌ಮಂತರ್‌ನಲ್ಲಿ ಚುನಾವಣಾ ಆಯುಕ್ತರ ವಿರುದ್ಧ ನಡೆಯುತ್ತಿರುವ ವಿದ್ಯಾರ್ಥಿಗಳ ಪ್ರತಿಭಟನೆಯ ವೇಳೆ ಪೊಲೀಸ್ ಅಧಿಕಾರಿಗಳಿಗೆ ಪ್ರಶ್ನೆ ಕೇಳುತ್ತಿದ್ದ ಮಹಿಳಾ ಪತ್ರಕರ್ತೆಯೊಂದಿಗೆ ಲೈಂಗಿಕವಾಗಿ ಅವಮಾನಕರವಾಗಿ ವರ್ತಿಸಲಾಗಿದೆ ಎಂಬ ಆರೋಪ ಕೇಳಿಬಂದಿದ್ದು, ಈ ಕುರಿತು ಸಂಬಂಧಿಸಿದ ಸಹ ಪೊಲೀಸ್ ಆಯುಕ್ತರ ವಿರುದ್ಧ ಸಮಗ್ರ ತನಿಖೆ ನಡೆಸಿ ತಕ್ಷಣ ಕಠಿಣ ಕ್ರಮ ಕೈಗೊಳ್ಳಬೇಕು. ಮುಂದಿನ ದಿನಗಳಲ್ಲಿ ವರದಿಗಾರಿಕೆಗಾಗಿ ಕಾರ್ಯನಿರ್ವಹಿಸುವ ಪತ್ರಕರ್ತರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಆಳಂದ ತಾಲೂಕು ಘಟಕದ ವತಿಯಿಂದ ರಾಜ್ಯಪಾಲರಿಗೆ ಸಲ್ಲಿಸಿದ ಮನವಿಯಲ್ಲಿ ಒತ್ತಾಯಿಸಲಾಗಿದೆ.
ಈ ಕುರಿತು ಬುಧವಾರ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಶಿವಲಿಂಗ ತೇಲ್ಕರ್ ಅವರ ನೇತೃತ್ವದಲ್ಲಿ ಪದಾಧಿಕಾರಿಗಳು ಹಾಗೂ ಸದಸ್ಯರು ತಾಲೂಕು ಅಭಿವೃದ್ಧಿ ಸೌಧದ ಕಚೇರಿ ಎದುರು ತೆರಳಿ ತಹಶೀಲ್ದಾರ್ ಅಣ್ಣಾರಾವ ಪಾಟೀಲ ಅವರಿಗೆ ಮನವಿ ಸಲ್ಲಿಸಿದರು. ಮನವಿಯನ್ನು ತಹಶೀಲ್ದಾರ್ ಮೂಲಕ ರಾಜ್ಯಪಾಲರಿಗೆ ರವಾನಿಸಲಾಯಿತು.
ಪತ್ರಕರ್ತರು ತಮ್ಮ ಕರ್ತವ್ಯದ ಸಂದರ್ಭದಲ್ಲಿ ಪ್ರಶ್ನೆಗಳನ್ನು ಕೇಳಿ ಮಾಹಿತಿ ಸಂಗ್ರಹಿಸುವುದು ಹಾಗೂ ಘಟನೆಗಳನ್ನು ವರದಿ ಮಾಡುವ ಹಕ್ಕು ಹೊಂದಿದ್ದಾರೆ. ಪತ್ರಕರ್ತರ ಕರ್ತವ್ಯಕ್ಕೆ ಯಾವುದೇ ರೀತಿಯಲ್ಲಿ ಅಡ್ಡಿಯಾಗದಂತೆ ಹಾಗೂ ಅವರ ಸುರಕ್ಷತೆ ಮತ್ತು ಗೌರವಕ್ಕೆ ಧಕ್ಕೆಯಾಗದಂತೆ ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
ಈ ಸಂದರ್ಭದಲ್ಲಿ ಪತ್ರಕರ್ತರ ಸಂಘದ ಗೌರವಾಧ್ಯಕ್ಷ ಪ್ರಭಾಕರ ಸಲಗರೇ, ಉಪಾಧ್ಯಕ್ಷರಾದ ಶಾಂತಪ್ಪ ಕೋರೆ ಹಾಗೂ ಪ್ರಭುಗೌಡ ಪಾಟೀಲ, ಕಾರ್ಯದರ್ಶಿ ಪ್ರಕಾಶ ಜಂಗಲೆ, ಸಹಕಾರ್ಯದರ್ಶಿ ಡಾ. ರಾಜಕುಮಾರ ಹಿರೇಮಠ, ಡಿ.ಎಂ. ಪಾಟೀಲ, ಹನುಮಂತ ಕುಲಕರ್ಣಿ, ಜಗದೀಶ ಕೋರೆ, ಅವಿನಾಶ ದೇವನೂರ, ಮಹೇಶ್ ಸಾಖರೆ, ಬಾಬುರಾವ ಅರುಣೋದಯ, ಬಾಬುರಾವ ಮಡ್ಡೆ, ಸುನೀಲ ಪಾಟೀಲ ಸೇರಿದಂತೆ ಹಲವರು ಉಪಸ್ಥಿತರಿದ್ದರು.






