Aland | ಕಾಮಗಾರಿ ನಡೆಸದೆ ನಕಲಿ ಬಿಲ್ ಸೃಷ್ಟಿಸಿ ಹಣ ದುರುಪಯೋಗ ಆರೋಪ: ಕ್ರಮಕ್ಕೆ ಆಗ್ರಹ

ಆಳಂದ: ತಾಲೂಕಿನ ಕಿಣ್ಣಿಸುಲ್ತಾನ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿತಲಿ ಗ್ರಾಮದಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ (ಎಂಜಿಎನ್‌ಆರ್‌ಇಜಿಎ) ಅಡಿಯಲ್ಲಿ ಮಂಜೂರಾದ ಸಿ.ಸಿ. ರಸ್ತೆ ಕಾಮಗಾರಿ ಪೂರ್ಣಗೊಳಿಸದೆ ನಕಲಿ ಬಿಲ್ ಸೃಷ್ಟಿಸಿ 1.39 ಲಕ್ಷ ರೂ. ಹಣ ದುರುಪಯೋಗಪಡಿಸಿಕೊಂಡಿರುವ ಆರೋಪ ಕೇಳಿಬಂದಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ದಲಿತ ಸೇನೆ ವತಿಯಿಂದ ತಾಲೂಕು ಪಂಚಾಯಿತಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.
ದಲಿತ ಸೇನೆ ತಾಲೂಕು ಅಧ್ಯಕ್ಷ ಪಿಂಟು ಎಸ್. ಸಾಲೇಗಾಂವ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ನೂರಾರು ಕಾರ್ಯಕರ್ತರು ಪಾಲ್ಗೊಂಡು, ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
2024–25ನೇ ಸಾಲಿನಲ್ಲಿ ಚಿತಲಿ ಗ್ರಾಮದ ಭಾಗ್ಯವಂತಿ ಗುಡಿಯಿಂದ ಕೋಳಿ ಸಮಾಜದ ಸಮುದಾಯ ಭವನದವರೆಗೆ ಸಿ.ಸಿ. ರಸ್ತೆ ನಿರ್ಮಾಣ ಕಾಮಗಾರಿಗೆ ಮಂಜೂರಾತಿ ನೀಡಲಾಗಿತ್ತು. ಆದರೆ, ಕಾಮಗಾರಿ ಕೈಗೊಳ್ಳದೇ ಇದ್ದರೂ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಗುತ್ತಿಗೆದಾರರು ಶಾಮೀಲಾಗಿ ಬೋಗಸ್ ಬಿಲ್ ಸೃಷ್ಟಿಸಿ 1.39 ಲಕ್ಷ ರೂ. ಹಣ ಪಡೆದುಕೊಂಡಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಕಾಮಗಾರಿ ನಡೆದಿರುವುದಾಗಿ ತೋರಿಸಲು ಬೋಗಸ್ ಜಿಪಿಎಸ್ ಛಾಯಾಚಿತ್ರಗಳನ್ನು ದಾಖಲಿಸಿ ಹಣ ಬಿಡುಗಡೆ ಮಾಡಲಾಗಿದೆ ಎಂದು ಆರೋಪಿಸಿದ ಅವರು, ಕಾಮಗಾರಿಯ ಕ್ರಿಯಾ ಯೋಜನೆ, ಅಂದಾಜುಪಟ್ಟಿ, ದೃಢೀಕರಣ ಪ್ರತಿ ಹಾಗೂ ಜಿಪಿಎಸ್ ಛಾಯಾಚಿತ್ರಗಳಿಗೆ ಸಂಬಂಧಿಸಿದ ದಾಖಲೆಗಳನ್ನು ತಾಲೂಕು ಪಂಚಾಯಿತಿ ಅಧಿಕಾರಿಗಳಿಗೆ ಸಲ್ಲಿಸಿದ ಮನವಿಗೆ ಲಗತ್ತಿಸಿದರು.
ಬೋಗಸ್ ಬಿಲ್ ಸೃಷ್ಟಿಸಿರುವ ಆರೋಪಕ್ಕೆ ಸಂಬಂಧಿಸಿದಂತೆ ಪಿಡಿಒ ಹಾಗೂ ಜೆಇ ಅವರನ್ನು ಅಮಾನತುಗೊಳಿಸಬೇಕು. ಸಂಬಂಧಪಟ್ಟ ಗುತ್ತಿಗೆದಾರರ ಪರವಾನಗಿಯನ್ನು ಕಪ್ಪುಪಟ್ಟಿಗೆ ಸೇರಿಸಬೇಕು. ದುರುಪಯೋಗವಾಗಿರುವ ಹಣವನ್ನು ಸರ್ಕಾರಕ್ಕೆ ವಾಪಸ್ ಜಮಾ ಮಾಡಿಸಬೇಕು ಹಾಗೂ ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಅಭಿವೃದ್ಧಿ ಕಾಮಗಾರಿಗಳು ಕಾಗದದಲ್ಲೇ? :
ಗ್ರಾಮ ಪಂಚಾಯಿತಿಗೆ ಸರ್ಕಾರ ಪ್ರತಿವರ್ಷ ಲಕ್ಷಾಂತರ ರೂಪಾಯಿ ಅನುದಾನ ನೀಡುತ್ತಿದ್ದರೂ, ಹಲವು ಅಭಿವೃದ್ಧಿ ಕಾಮಗಾರಿಗಳು ಸಮರ್ಪಕವಾಗಿ ನಡೆಯುತ್ತಿಲ್ಲ. ಇದರಿಂದ ಗ್ರಾಮಸ್ಥರು ಮೂಲಭೂತ ಸೌಕರ್ಯಗಳ ಕೊರತೆಯಿಂದ ಪರದಾಡುವಂತಾಗಿದೆ ಎಂದು ಪ್ರತಿಭಟನಾಕಾರರು ದೂರಿದರು.
ಪ್ರತಿಭಟನೆಯಲ್ಲಿ ಯುವ ಘಟಕ ಸಂಘಟನಾ ಕಾರ್ಯದರ್ಶಿ, ಪ್ರಧಾನ ಕಾರ್ಯದರ್ಶಿ, ಕಾರ್ಯಾಧ್ಯಕ್ಷರು, ಉಪಾಧ್ಯಕ್ಷ ಶಿವಲಿಂಗಪ್ಪ ಚನ್ನಗುಂಡ, ಶಶಿಕಾಂತ ಕವಲಗಾ, ವಿ.ಒ. ಅಧ್ಯಕ್ಷ ಗೌತಮ ಪದಾರ, ಯುವ ಘಟಕ ಅಧ್ಯಕ್ಷ ಯೂಸುಫ್ ಅನ್ಸಾರಿ, ವಲಯ ಅಧ್ಯಕ್ಷರಾದ ರಾಘವೇಂದ್ರ ಹೆಬಳಿ, ದೇವಾ.ಕೆ. ದೊಡಮನಿ ಸೇರಿದಂತೆ ದಲಿತ ಸೇನೆಯ ಹಲವು ಮುಖಂಡರು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.






