Aland | ಬಸವ ತತ್ವ ಇಂದಿನ ಅಶಾಂತ ವಿಶ್ವಕ್ಕೆ ದಾರಿದೀಪ: ಬಸವ ಜಯಮೃತ್ಯುಂಜಯ ಶ್ರೀ

ಆಳಂದ: ಬಸವಣ್ಣನವರು ಕಟ್ಟಿದ ಕಲ್ಯಾಣ ರಾಜ್ಯದ ಮಾದರಿ ಇಂದಿಗೂ ಜಗತ್ತಿನ ಮೆಚ್ಚುಗೆಗೆ ಪಾತ್ರವಾಗಿದ್ದು, ಕಾಯಕ, ದಾಸೋಹ, ಸಮಾನತೆ ಹಾಗೂ ಬಂಧುತ್ವದ ಮೌಲ್ಯಗಳ ಮೂಲಕ ಅವರು ನಿರ್ಮಿಸಿದ ಮಾನವೀಯ ನಾಗರಿಕತೆ ಇಂದಿನ ಯುದ್ಧ ಮತ್ತು ಅಶಾಂತಿಗ್ರಸ್ತ ವಿಶ್ವಕ್ಕೆ ದಾರಿದೀಪವಾಗಿದೆ ಎಂದು ಕೂಡಲಸಂಗಮ ಪಂಚಮಸಾಲಿ ಪೀಠದ ಪ್ರಥಮ ಜಗದ್ಗುರು ಶ್ರೀ ಬಸವ ಜಯಮೃತ್ಯುಂಜಯ ಮಹಾಸ್ವಾಮಿಗಳು ಪ್ರತಿಪಾದಿಸಿದರು.
ಪಟ್ಟಣದಲ್ಲಿ ಬಸವ ಜಯಂತಿ ನಿಮಿತ್ತ ಆಯೋಜಿಸಲಾಗಿದ್ದ ಬಸವ ಸಂಗಮ ಶೋಭಾಯಾತ್ರೆ ಹಾಗೂ ಶ್ರೀರಾಮ್ ಮಾರುಕಟ್ಟೆ ಮೈದಾನದಲ್ಲಿ ನಡೆದ ಬೃಹತ್ ಸಮಾರಂಭದಲ್ಲಿ ಮಾತನಾಡಿದ ಅವರು, ಬಸವಾದಿ ಶರಣರ ವಚನ ಸಾಹಿತ್ಯ ಕೇವಲ ಧಾರ್ಮಿಕ ಪಠ್ಯವಲ್ಲ, ಅದು ಮಾನವ ಜನಾಂಗದ ಅಂತರಂಗ ಶುದ್ಧಿಗೆ ಮಾರ್ಗದರ್ಶಿಯಾಗಿದೆ ಎಂದು ಹೇಳಿದರು.
ಕಲ್ಯಾಣ ಕರ್ನಾಟಕ ಪ್ರದೇಶದ ಭೌತಿಕ ಅಭಿವೃದ್ಧಿಗೆ ಸಂವಿಧಾನದ 371(ಜೆ) ವಿಧಿ ನೆರವಾಗಿದ್ದು, ಸ್ವಾತಂತ್ರ್ಯ ಹೋರಾಟದಲ್ಲಿ ಎ.ವಿ. ಪಾಟೀಲ್, ಭೀಮಣ್ಣ ಖಂಡ್ರೆ ಮೊದಲಾದ ಮಹನೀಯರ ತ್ಯಾಗ-ಬಲಿದಾನ ಈ ನೆಲಕ್ಕೆ ಸಿಕ್ಕ ಅಮೂಲ್ಯ ಕಾಣಿಕೆಯಾಗಿದೆ ಎಂದು ಸ್ಮರಿಸಿದ ಮಹಾಸ್ವಾಮಿಗಳು, ಭೌತಿಕ ಪ್ರಗತಿಗೆ 371(ಜೆ) ಕಲಂ ಆಧಾರಸ್ತಂಭವಾದರೆ, ಅಂತರಂಗದ ಅಭಿವೃದ್ಧಿಗೆ 770 ಶರಣರ ವಚನ ಸಾಹಿತ್ಯವೇ ಆತ್ಮದ ಕಲಂ ಎಂದು ಅರ್ಥಪೂರ್ಣವಾಗಿ ಪ್ರತಿಪಾದಿಸಿದರು.
ಅಜ್ಞಾನದಿಂದ ಸುಜ್ಞಾನದತ್ತ, ಮೌಢ್ಯದಿಂದ ವೈಚಾರಿಕತೆಯತ್ತ ಸಾಗುವ ಪ್ರಕ್ರಿಯೆಯೇ ನಿಜವಾದ ಅಂತರಂಗ ಕ್ರಾಂತಿ ಎಂದ ಅವರು, ಬಸವಣ್ಣನವರು ಭೌತಿಕ ಬದುಕಿನ ಜೊತೆಗೆ ಆತ್ಮಾವಲೋಕನಕ್ಕೂ ಮಹತ್ವ ನೀಡಿದ್ದು, ಅದಕ್ಕಾಗಿಯೇ ವಚನ ಧರ್ಮವನ್ನು ಜನಸಾಮಾನ್ಯರ ಭಾಷೆಯಲ್ಲಿ ನೀಡಿದ್ದಾರೆ ಎಂದು ಹೇಳಿದರು.
ಜಗತ್ತಿನ ಅನೇಕ ರಾಷ್ಟ್ರಗಳು ಬಸವ ತತ್ವಕ್ಕೆ ಮೆಚ್ಚುಗೆ ವ್ಯಕ್ತಪಡಿಸುತ್ತಿರುವ ಈ ಸಂದರ್ಭದಲ್ಲಿ ಬಸವಣ್ಣನವರು ನಿಜವಾದ ವಿಶ್ವನಾಯಕ ಎಂದು ಬಣ್ಣಿಸಿದ ಅವರು, ಒಟ್ಟಾಗಿ ಬದುಕುವ ಪಾಠವನ್ನು ಬಸವಣ್ಣ ಶತಮಾನಗಳ ಹಿಂದೆಯೇ ಜಗತ್ತಿಗೆ ಕಲಿಸಿದ್ದಾರೆ ಎಂದರು.
ಡಾ. ಬಿ.ಆರ್. ಅಂಬೇಡ್ಕರ್ ಅವರಿಗೆ ಸಕಾಲದಲ್ಲಿ ಬಸವ ತತ್ವ ಸಮರ್ಪಕವಾಗಿ ತಲುಪಿದ್ದರೆ, ಬುದ್ಧ ತತ್ವ ಮತ್ತು ಬಸವ ತತ್ವ ಒಂದಾಗಿ ಭಾರತ ಇನ್ನಷ್ಟು ಶಕ್ತಿಶಾಲಿಯಾಗುತ್ತಿತ್ತು. ಇನ್ನೂ ಕಾಲ ಮಿಂಚಿಲ್ಲ. “ಬುದ್ಧ-ಬಸವ-ಭಾರತ” ಸಮನ್ವಯದ ಮೂಲಕ ಬಲಿಷ್ಠ ಭಾರತ ನಿರ್ಮಿಸಲು ಎಲ್ಲರೂ ಕೈಜೋಡಿಸಬೇಕು ಎಂದು ಕರೆ ನೀಡಿದರು.
ಭಾರತದ ಮೂಲ ಕೃಷಿಕನ ಜೀವನ ಹಸನಾಗಿಸಲು ಕಾಯಕ-ದಾಸೋಹ ತತ್ವವನ್ನು ಕೇವಲ ಆಚರಣೆಗೆ ಸೀಮಿತಗೊಳಿಸದೆ ದೈನಂದಿನ ಜೀವನದಲ್ಲಿ ಅನುಷ್ಠಾನಕ್ಕೆ ತರಬೇಕಾಗಿದೆ. ಸರ್ಕಾರ ಭೌತಿಕ ಅಭಿವೃದ್ಧಿಗೆ ಶ್ರಮಿಸುವಂತೆ ಸಮಾಜವೂ ತನ್ನ ಮನಸ್ಸಿನ ಅಭಿವೃದ್ಧಿಗೆ ಶ್ರಮಿಸಬೇಕಾಗಿದೆ ಎಂದು ತಿಳಿಸಿದರು.
ಕಾರವಾರದ ಅತ್ತಿವೇರಿ ಬಸವಧಾಮದ ಬಸವೇಶ್ವರಿ ಮಾತಾಜಿ ಮಾತನಾಡಿ, ಬಸವಣ್ಣನವರು ತಮ್ಮ ಶ್ರೀಮಂತಿಕೆಯನ್ನು ಜನಸಾಮಾನ್ಯರ, ದೀನ ದಲಿತರ ಸಾಮಾಜಿಕ ನ್ಯಾಯಕ್ಕಾಗಿ ಬಳಸಿದರು. ದುಶ್ಚಟಗಳಿಂದ ದೂರವಿದ್ದು ಇಷ್ಟಲಿಂಗ, ಕಾಯಕ ಹಾಗೂ ವಚನ ಸಾಹಿತ್ಯದ ಮಾರ್ಗದಲ್ಲಿ ಸಾಗಬೇಕು ಎಂದರು.
ಪಡಸಾವಳಿ ಡೋಣಗಾಂವ ಮಠದ ಡಾ. ಶಂಭುಲಿಂಗ ಶಿವಾಚಾರ್ಯರು, ಕಡಗಂಚಿ ಕಟ್ಟಿಮಠದ ಶ್ರೀ ವೀರಭದ್ರ ಶಿವಾಚಾರ್ಯರು ಹಾಗೂ ಗೋಳಾ ಮಠದ ಶ್ರೀಗಳು ಬಸವ ತತ್ವಗಳ ಮಹತ್ವವನ್ನು ವಿವರಿಸಿದರು.
ವೇದಿಕೆಯಲ್ಲಿ ಹೋದಲೂರಿನ ಋಷಬೇಂದ್ರ ಶ್ರೀ, ಮಾಡಿಯಾಳ, ನಿಂಬರಗಾ, ಬಂಗರಗಾ, ಮರೋಣ ಸೇರಿದಂತೆ ವಿವಿಧ ಮಠಗಳ ಶ್ರೀಗಳು ಉಪಸ್ಥಿತರಿದ್ದರು.
ಉತ್ಸವ ಸಮಿತಿ ಅಧ್ಯಕ್ಷ ಆನಂದ ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು. ವೈಜನಾಥ ಝಳಕಿ ಹಾಗೂ ಸೋಮಶೇಖರ ಮುಲಗೆ ನಿರೂಪಿಸಿದರು. ಶರಣು ಕುಮಸಿ ವಂದಿಸಿದರು.
ಈ ಮೊದಲು ನಡೆದ ಬಸವ ಸಂಗಮ ಶೋಭಾಯಾತ್ರೆ ತುಂತುರು ಮಳೆಯ ನಡುವೆಯೂ ಅಭೂತಪೂರ್ವ ವೈಭವದಿಂದ ನೆರವೇರಿತು. ಲಿಂಗಾಯತ ಭವನದಲ್ಲಿರುವ ಶ್ರೀ ಬಸವೇಶ್ವರರ ಪ್ರತಿಮೆಗೆ ಪೂಜೆ ಸಲ್ಲಿಸಿ ಜಿಡಗಾ ಮಠದ ಷಡಕ್ಷರಿ ಶಿವಯೋಗಿ ಡಾ. ಮುರುಘರಾಜೇಂದ್ರ ಮಹಾಸ್ವಾಮಿಗಳು ಹಾಗೂ ಕೂಡಲಸಂಗಮ ಪೀಠದ ಜಗದ್ಗುರು ಬಸವ ಜಯಮೃತ್ಯುಂಜಯ ಮಹಾಸ್ವಾಮಿಗಳ ಸಾನ್ನಿಧ್ಯದಲ್ಲಿ ಶೋಭಾಯಾತ್ರೆಗೆ ಚಾಲನೆ ನೀಡಲಾಯಿತು.
ಬಸ್ ನಿಲ್ದಾಣ ಮುಖ್ಯರಸ್ತೆ ಮಾರ್ಗವಾಗಿ ಶ್ರೀರಾಮ್ ಮಾರುಕಟ್ಟೆ ಮೈದಾನದವರೆಗೆ ಸಾಗಿದ ಮೆರವಣಿಗೆಯಲ್ಲಿ ಕುಂಭ-ಕಳಸ ಹೊತ್ತ ಮಹಿಳೆಯರು, ಜಾನಪದ ನೃತ್ಯ ತಂಡಗಳು, ಡೊಳ್ಳು ಕುಣಿತ, ಮಂಗಳ ವಾದ್ಯಗಳು ವಿಶೇಷ ಆಕರ್ಷಣೆಯಾಗಿದ್ದವು. ಬೀದಿಬದಿಯಲ್ಲಿ ನಿಂತು ಜನರು ಹೂಮಳೆ ಸುರಿಸಿ ಬಸವಣ್ಣನ ಜಯಘೋಷ ಮೊಳಗಿಸಿದರು.
ಮಾದನಪಹಿಪ್ಪರಗಿ ಮಠದ ಅಭಿನವ ಶಿವಲಿಂಗ ಮಹಾಸ್ವಾಮಿಗಳು, ನರೋಣ ಗುರುಮಾಂತ ಮಹಾಸ್ವಾಮಿಗಳು, ಸಿದ್ದೇಶ್ವರ ಶಿವಾಚಾರ್ಯರು ಸೇರಿದಂತೆ ಅನೇಕ ಮಠಾಧೀಶರು ಹಾಗೂ ಗಣ್ಯರು ಭಾಗವಹಿಸಿದ್ದರು.
ಮಾಜಿ ಶಾಸಕ ಸುಭಾಷ್ ಗುತ್ತೇದಾರ್, ಕೆಎಂಎಫ್ ಅಧ್ಯಕ್ಷ ಆರ್.ಕೆ. ಪಾಟೀಲ್, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಹರ್ಷಾನಂದ ಗುತ್ತೇದಾರ್, ಬಿಜೆಪಿ ಜಿಲ್ಲಾಧ್ಯಕ್ಷ ಅಶೋಕ್ ಬಗಲಿ, ಅರುಣಕುಮಾರ ಪಾಟೀಲ ಸೇರಿದಂತೆ ಹಲವಾರು ಮುಖಂಡರು ಉಪಸ್ಥಿತರಿದ್ದರು.
ಪ್ರಚಾರ ಸಮಿತಿ ಅಧ್ಯಕ್ಷ ನಾಗರಾಜು ಶೇಗಜಿ, ನ್ಯಾಯವಾದಿ ಬಾಬಾಸಾಹೇಬ್ ಪಾಟೀಲ್, ಶ್ರೀಶೈಲ್ ಖಜೂರಿ, ಮಹೇಶ ಗೌಳಿ, ಮಲ್ಲಪ್ಪ ಹತ್ತರಕ್ಕಿ, ಗೌರಿ ಚಿಟ್ಕೋಟಿ, ಅಶೋಕ ಹತರಕಿ ತಂಬಕವಾಡಿ, ಗುರುಶರಣ ಪಾಟೀಲ ಕೊರಳ್ಳಿ, ಮಲ್ಲಿಕಾರ್ಜುನ ಕಂದಗುಳೆ, ಮಲ್ಲಿಕಾರ್ಜುನ ಸಾರವಾಡ, ದತ್ತ, ರಾಜ್ ಗುತ್ತೇದಾರ್, ರೇವಣಸಿದ್ಧಪ್ಪ ನಾಗೂರೆ, ಲಿಂಗರಾಜ್ ಪಾಟೀಲ್ ಕೆರ್, ಮಹೇಶ ಗೌಳಿ, ಬಸವರಾಜ ಕೆರೂರ, ಉದ್ಯಮಿ ಶ್ರೀಶೈಲ ಸುತಾರ ಮುನ್ನೊಳ್ಳಿ, ರಾಜಶೇಖರ ಯಂಕಚAಚಿ, ಮಲ್ಲಿಕಾರ್ಜುನ ತಡಕಲ್ ಸೇರಿದಂತೆ ಅನೇಕ ಗಣ್ಯರು, ಕಾರ್ಯಕರ್ತರು ಮತ್ತು ಅಭಿಮಾನಿಗಳು, ಮಹಿಳೆಯರು ಭಾಗವಹಿಸಿದ್ದರು.






