Aland | ಧೈರ್ಯವೀರ ಭೈರಪ್ಪಗೌಡ ಭೂಸನೂರ ಮೂರ್ತಿ ಲೋಕಾರ್ಪಣೆ

ಆಳಂದ : ತಾಲೂಕಿನ ಭೂಸನೂರ ಗ್ರಾಮದ ನೀಲಾಂಬಿಕಾ ಕಲ್ಯಾಣ ಮಂಟಪದಲ್ಲಿ ಗುರುವಾರ ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆ ಹಾಗೂ ಹೈದರಾಬಾದ್ ಕರ್ನಾಟಕ ವಿಮೋಚನಾ ಹೋರಾಟದ ಧೈರ್ಯವೀರ ಭೈರಪ್ಪಗೌಡ ಭೂಸನೂರ ಅವರ ಮೂರ್ತಿ ಲೋಕಾರ್ಪಣೆ ಕಾರ್ಯಕ್ರಮ ಶ್ರದ್ಧಾಭಕ್ತಿಯಿಂದ ನಡೆಯಿತು.
ಮೂರ್ತಿಯನ್ನು ಅನಾವರಣಗೊಳಿಸಿ ಮಾತನಾಡಿದ ಆಳಂದ ಶಾಸಕ ಬಿ.ಆರ್. ಪಾಟೀಲ್, ಕಲ್ಯಾಣ ಕರ್ನಾಟಕ ಭಾಗದಲ್ಲಿ ಅನೇಕರು ರಜಾಕರರ ವಿರುದ್ಧ ಧೈರ್ಯದಿಂದ ಹೋರಾಡಿದ್ದು, ಅವರ ತ್ಯಾಗ, ಸಾಹಸ ಮತ್ತು ಹೋರಾಟದ ಇತಿಹಾಸವನ್ನು ಇಂದಿನ ಯುವಪೀಳಿಗೆಗೆ ಪರಿಚಯಿಸುವ ಕಾರ್ಯವಾಗಬೇಕು ಎಂದು ಹೇಳಿದರು.
ಮಾಜಿ ಶಾಸಕ ಸುಭಾಷ ಆರ್. ಗುತ್ತೇದಾರ ಮಾತನಾಡಿ, ಬಾಲ್ಯದಿಂದಲೇ ಧೈರ್ಯವನ್ನು ಮೈಗೂಡಿಸಿಕೊಂಡಿದ್ದ ಭೈರಪ್ಪಗೌಡ ಭೂಸನೂರ ಅವರು ಯೌವನದಲ್ಲಿಯೇ ರಜಾಕರರ ವಿರುದ್ಧ ಪ್ರತಿರೋಧ ಸಂಘಟಿಸಿ ಯುವಕರಲ್ಲಿ ಸ್ವಾತಂತ್ರ್ಯ ಹೋರಾಟದ ಕಿಚ್ಚು ಹಚ್ಚಿದ್ದರು ಎಂದು ಸ್ಮರಿಸಿದರು.
ಭೈರಪ್ಪಗೌಡ ಭೂಸನೂರ ಅವರ ಸಂಘಟನಾ ಶಕ್ತಿ ಮತ್ತು ಹೋರಾಟದ ನೆನಪುಗಳು ಇಂದಿಗೂ ಈ ಭಾಗದ ಜನರ ಮನದಲ್ಲಿ ಜೀವಂತವಾಗಿವೆ. ಎತ್ತರದ ನಿಲುವು, ಗಂಭೀರ ವ್ಯಕ್ತಿತ್ವ ಹಾಗೂ ನಿರ್ಭೀತ ಸ್ವಭಾವಕ್ಕೆ ಹೆಸರಾಗಿದ್ದ ಅವರು, ತಮ್ಮ ಕುಟುಂಬದ ಮೇಲೆ ರಜಾಕರರಿಂದ ನಡೆದ ಅಹಿತಕರ ಘಟನೆಯ ಬಳಿಕ ಹೋರಾಟಕ್ಕೆ ಧುಮುಕಿದ ಧೀರರಾಗಿದ್ದರು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಭೂಸನೂರಿನ ಶ್ರೀ ಬಸವಲಿಂಗ ಶಿವಾಚಾರ್ಯರು, ದೇವಂತಗಿಯ ಶ್ರೀ ರೇಣುಕಾಚಾರ್ಯ ಶಿವಾಚಾರ್ಯರು, ಚಿಣಗೇರಿಯ ಶ್ರೀ ವೀರಮಹಾಂತ ಶಿವಾಚಾರ್ಯರು, ಚಲಗೇರಾದ ಶ್ರೀ ಶಾಂತವೀರ ಶಿವಾಚಾರ್ಯರು ಹಾಗೂ ಬೆಳಮಗಿಯ ಅಮರಜ್ಯೋತಿ ಭಂತೆಜೀ ಸಾನಿಧ್ಯ ವಹಿಸಿದ್ದರು.
ಧೈರ್ಯವೀರ ಭೈರಪ್ಪಗೌಡ ಭೂಸನೂರ ಅವರ ಹೋರಾಟದ ಬದುಕಿನ ಕುರಿತು ಶ್ರೀಶೈಲ ನಾಯಿಕೋಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಆಕಾಶವಾಣಿ ಕಲಾವಿದ ಶಂಕರ ಹೂಗಾರ ಅವರ ತಂಡದಿಂದ ಸಂಗೀತ ಕಾರ್ಯಕ್ರಮ ನಡೆಯಿತು.
ಭೂಸನೂರ ಗ್ರಾಮದ ಮುಖಂಡ ಹಾಗೂ ಭೈರಪ್ಪಗೌಡರ ಮರಿಮೊಮ್ಮಗ ಸುನೀಲ್ ಪಾಟೀಲ್ ಅವರ ನೇತೃತ್ವದಲ್ಲಿ ಮೂರ್ತಿ ಪ್ರತಿಷ್ಠಾಪನಾ ಕಾರ್ಯ ನೆರವೇರಿತು. ಇದೇ ಸಂದರ್ಭದಲ್ಲಿ ಹಲವು ಗಣ್ಯರು ಮೂರ್ತಿಗೆ ಪುಷ್ಪನಮನ ಸಲ್ಲಿಸಿ ಗೌರವ ಅರ್ಪಿಸಿದರು.
ಕಾರ್ಯಕ್ರಮದಲ್ಲಿ ದಲಿತ ಸೇನೆಯ ರಾಜ್ಯಾಧ್ಯಕ್ಷ ಹಣಮಂತ ಯಳಸಂಗಿ, ಸಮಾಜ ಸೇವಕ ಡಾ.ಫಾರೂಕ್ ಮಣ್ಣೂರ, ಜಿಲ್ಲಾ ಪಂಚಾಯತ್ ಮಾಜಿ ಉಪಾಧ್ಯಕ್ಷ ಹರ್ಷಾ ಗುತ್ತೇದಾರ, ಸುರೇಶ ಸಜ್ಜನ, ಪಿಕೆಪಿಎಸ್ ಅಧ್ಯಕ್ಷ ಬಾಬುಗೌಡ ಪಾಟೀಲ, ಕೃಷಿಕ ಸಮಾಜದ ಅಧ್ಯಕ್ಷ ಗುರುಶರಣ ಪಾಟೀಲ, ವೀರಣ್ಣ ಮಂಗಾಣೆ, ಜಗನ್ನಾಥ ಶೇಗಜಿ, ಅಶೋಕ ಗುತ್ತೇದಾರ, ಮಲ್ಲಣ್ಣ ನಾಗೂರೆ, ಶರಣು ಬೀ., ರಾಜಶೇಖರ ಮಲ್ಲಶೆಟ್ಟಿ, ಮಲ್ಲಿಕಾರ್ಜುನ ಕಂದಗೂಳೆ, ಕಲ್ಯಾಣರಾವ ಪಾಟೀಲ, ರಾಜಶೇಖರ ಯಂಕಂಚಿ, ಗುರುಶಾಂತ ಪಾಟೀಲ, ರಾಜಶೇಖರ ಪಾಟೀಲ ಜಿಡಗಾ, ಶಂಕರರಾವ ದೇಶಮುಖ, ಲಿಂಗರಾಜ ಪಾಟೀಲ ಝಳಗಿ, ಸಿದ್ದಲಿಂಗ ಮಲ್ಲಶೆಟ್ಟಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಗಣ್ಯರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.






