Aland | ನಿಂಬರ್ಗಾ ಜಿ.ಪಂ. ಕ್ಷೇತ್ರದ ಟಿಕೆಟ್ ವಿಶಾಲಾ ತೇಲ್ಕರ್ಗೆ ನೀಡಲು ಆಗ್ರಹ

ಆಳಂದ: ನಿಂಬರ್ಗಾ ಜಿಲ್ಲಾ ಪಂಚಾಯಿತಿ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಲು ಪ್ರಬಲ ಆಕಾಂಕ್ಷಿಯಾಗಿರುವ ವಿಶಾಲಾ ಎಸ್. ತೇಲ್ಕರ್ ಅವರಿಗೆ ಪಕ್ಷದ ಬಿ-ಫಾರಂ ನೀಡಬೇಕು ಎಂದು ಧಂಗಾಪುರ ಗ್ರಾಮದ ಮುಖಂಡರು ಹಾಗೂ ಗ್ರಾಮಸ್ಥರು ಶಾಸಕ ಬಿ.ಆರ್. ಪಾಟೀಲ ಅವರನ್ನು ಒತ್ತಾಯಿಸಿದ್ದಾರೆ.
ಶುಕ್ರವಾರ ಶಾಸಕ ಬಿ.ಆರ್. ಪಾಟೀಲ ಅವರ ನಿವಾಸಕ್ಕೆ ತೆರಳಿದ ಗ್ರಾಮಸ್ಥರ ನಿಯೋಗ, ಈ ಬಾರಿ ನಿಂಬರ್ಗಾ ಜಿಲ್ಲಾ ಪಂಚಾಯಿತಿ ಕ್ಷೇತ್ರ ಮೀಸಲಾಗಿರುವ ಹಿನ್ನೆಲೆಯಲ್ಲಿ ವಿಶಾಲಾ ಎಸ್. ತೇಲ್ಕರ್ ಅವರಿಗೆ ಪಕ್ಷದ ಟಿಕೆಟ್ ನೀಡಬೇಕು ಎಂದು ಮನವಿ ಸಲ್ಲಿಸಿತು.
ಧಂಗಾಪುರ ಗ್ರಾಮಕ್ಕೆ ಹಲವು ವರ್ಷಗಳಿಂದ ಜಿಲ್ಲಾ ಪಂಚಾಯಿತಿ ಸ್ಥಾನ ದೊರೆತಿಲ್ಲ. ವಿಶಾಲಾ ತೇಲ್ಕರ್ ಅವರು ಈ ಹಿಂದೆ ಗ್ರಾಮ ಪಂಚಾಯಿತಿ ಸದಸ್ಯೆಯಾಗಿ ಉತ್ತಮವಾಗಿ ಕಾರ್ಯನಿರ್ವಹಿಸಿದ್ದು, ಗ್ರಾಮದ ಮೂಲಭೂತ ಸೌಲಭ್ಯಗಳ ಅಭಿವೃದ್ಧಿಗೆ ಸ್ಪಂದಿಸಿದ್ದಾರೆ. ಅಲ್ಲದೆ, ಕಡಗಂಚಿ ಗ್ರಾಮವು ಅವರ ತವರುಮನೆಯಾಗಿರುವುದರಿಂದ ಅಲ್ಲಿನ ಮತದಾರರ ಬೆಂಬಲವೂ ದೊರೆಯಲಿದೆ. ನಿಂಬರ್ಗಾ, ಮಾಡಿಯಾಳ ಸೇರಿದಂತೆ ಕ್ಷೇತ್ರದ ವ್ಯಾಪ್ತಿಯ ಎಲ್ಲ ಗ್ರಾಮಗಳಲ್ಲಿಯೂ ಅವರಿಗೆ ಉತ್ತಮ ಜನಬೆಂಬಲವಿದೆ. ಹೀಗಾಗಿ ಮುಂಬರುವ ಚುನಾವಣೆಯಲ್ಲಿ ಸ್ಪರ್ಧಿಸಲು ಅವರಿಗೆ ಪಕ್ಷದ ಬಿ-ಫಾರಂ ನೀಡಬೇಕು ಎಂದು ಗ್ರಾಮಸ್ಥರು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಆಳಂದ ಸಹಕಾರಿ ಸಕ್ಕರೆ ಕಾರ್ಖಾನೆಯ ಅಧ್ಯಕ್ಷ ಗುರುಲಿಂಗ ಜಂಗಮ ಪಾಟೀಲ, ಕೆಎಂಎಫ್ ನಿರ್ದೇಶಕ ಈರಣ್ಣ ಝಳಕಿ, ಗುರುಭೀಮರಾವ ಆಳಂದ, ಈರಣ್ಣ ಅಂಗಡಿ, ಗುಂಡಪ್ಪ ಆಳಂದ, ವೀರೇಂದ್ರ ಶೆಗಜಿ, ಚಂದ್ರಶೇಖರ ಶೆಗಜಿ, ರೇವಣಸಿದ್ದಪ್ಪ ಕಪ್ಪರಗಿ, ಶರಣಬಸಪ್ಪ ಕಾಂಬಳೆ, ಈರಣ್ಣ ಪೂಜಾರಿ, ಕಲ್ಯಾಣಿ ಪಡಸಾವಳಗಿ, ಕೃಷ್ಣ ಕಾಂಬಳೆ, ಯಲ್ಲಪ್ಪ ಮನಗಿನಿ, ಅಮೃತ್ ಮೆಲಕೇರಿ, ವಿಠಲ ಪಟ್ಟಣ, ಮಲ್ಲು ಕೊರಳಿ, ಶರಣಬಸಪ್ಪ ಕೋರೆ, ಗುಂಡಪ್ಪ ಮೇಲಕೆರಿ ಹಾಗೂ ರುಕ್ಮೋ ದಿನ್ ಅಕ್ಕಲಕೋಟ ಸೇರಿದಂತೆ ಹಲವಾರು ಗ್ರಾಮಸ್ಥರು ಉಪಸ್ಥಿತರಿದ್ದರು.






