Aland | ವರದಕ್ಷಿಣೆ ಸಮಾಜಕ್ಕೆ ಕಳಂಕ; ನಿರ್ಮೂಲನೆಗೆ ಎಲ್ಲರೂ ಕೈಜೋಡಿಸಿ: ರಾಜು ಚವ್ಹಾಣ

ಆಳಂದ : ವರದಕ್ಷಿಣೆ ಎಂಬುದು ಸಂಪ್ರದಾಯದ ಹೆಸರಿನಲ್ಲಿ ಬೆಳೆದು ಬಂದಿರುವ ಸಾಮಾಜಿಕ ಪಿಡುಗಾಗಿದ್ದು, ಹೆಣ್ಣುಮಕ್ಕಳನ್ನು ಹಣದ ಅಳತೆಯಲ್ಲಿ ನೋಡುವ ಮನೋಭಾವ ಸಮಾಜಕ್ಕೆ ಕಳಂಕವಾಗಿದೆ ಎಂದು ಬಂಜಾರಾ ಕ್ರಾಂತಿದಳದ ರಾಜ್ಯಾಧ್ಯಕ್ಷ ರಾಜು ಜೆ. ಚವ್ಹಾಣ ಹೇಳಿದರು.
ಪಟ್ಟಣದ ಹಳೆ ಚೆಕ್‌ಪೋಸ್ಟ್ ಸಮೀಪದ ರಾಯಲ್ ಪ್ಯಾಲೇಸ್ ಫಂಕ್ಷನ್ ಹಾಲ್‌ನಲ್ಲಿ ವರದಕ್ಷಿಣೆ ಮುಕ್ತ ತಾಲೂಕು ಬಂಜಾರಾ ಸಮಾಜ ವೇದಿಕೆ ಆಯೋಜಿಸಿದ್ದ ‘ವರದಕ್ಷಣೆ ಮುಕ್ತ ಬಂಜಾರಾ ಸಮಾಜ’ ಮಹಾ ಸಂಕಲ್ಪ ಬೃಹತ್ ಸಮಾವೇಶವನ್ನು ಉದ್ದೇಶಿಸಿ ಅವರು ಮಾತನಾಡಿದರು.
ಬಂಜಾರಾ ಸಮಾಜವು ಸಂಸ್ಕೃತಿ, ಪರಂಪರೆ ಹಾಗೂ ಸ್ವಾಭಿಮಾನದ ಸಂಕೇತವಾಗಿದೆ. ಸಮಾಜದ ಅಭಿವೃದ್ಧಿಗೆ ಶಿಕ್ಷಣ, ಸ್ವಾವಲಂಬನೆ, ಮಹಿಳಾ ಸಬಲೀಕರಣ ಹಾಗೂ ಸಾಮಾಜಿಕ ಐಕ್ಯತೆ ಅತ್ಯಗತ್ಯವಾಗಿದೆ. ಮಹಿಳೆಯರಿಗೆ ಗೌರವ ನೀಡುವ ಸಮಾಜವೇ ನಿಜವಾದ ಅಭಿವೃದ್ಧಿ ಹೊಂದಿದ ಸಮಾಜವಾಗುತ್ತದೆ. ಹೆಣ್ಣು-ಗಂಡು ಸಮಾನತೆ ಮನೆಮನೆಗಳಲ್ಲಿ ಆರಂಭವಾದಾಗ ಮಾತ್ರ ಸಾಮಾಜಿಕ ಪರಿವರ್ತನೆ ಸಾಧ್ಯ. ಸಮಾಜ ಕೈಗೊಂಡಿರುವ ವರದಕ್ಷಣೆ ನಿರ್ಮೂಲನೆ, ಸರಳ ವಿವಾಹ ಸೇರಿದಂತೆ ವಿವಿಧ ನಿರ್ಣಯಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲು ಎಲ್ಲರೂ ಮುಂದಾಗಬೇಕು ಎಂದು ಕರೆ ನೀಡಿದರು.
ಜಿಲ್ಲಾ ಮುಖಂಡ ಕೆ.ಟಿ. ರಾಠೋಡ ಮಾತನಾಡಿ, ವರದಕ್ಷಿಣೆ ನಿರ್ಮೂಲನೆ, ಸರಳ ವಿವಾಹ ಹಾಗೂ ಮಹಿಳೆಯರಿಗೆ ಗೌರವದ ಸ್ಥಾನ ಕಲ್ಪಿಸುವ ಇಂತಹ ಕಾರ್ಯಕ್ರಮಗಳು ಸಮಾಜಕ್ಕೆ ದಾರಿದೀಪವಾಗಿವೆ. ಇತಿಹಾಸದಲ್ಲಿ ಮಹಿಳೆಯರ ಮೇಲಿನ ಶೋಷಣೆ, ಬಾಲ್ಯ ವಿವಾಹ ಸೇರಿದಂತೆ ಹಲವು ಅನಿಷ್ಠ ಪದ್ಧತಿಗಳ ವಿರುದ್ಧ ಸಮಾಜ ಹೋರಾಟ ನಡೆಸಿದೆ. ಈಗ ಮಹಿಳೆಯರಿಗೆ ಶಿಕ್ಷಣ, ಉದ್ಯೋಗ ಹಾಗೂ ಆರ್ಥಿಕ ಸ್ವಾವಲಂಬನೆ ಕಲ್ಪಿಸುವ ಮೂಲಕ ಸಮಾಜವನ್ನು ಪ್ರಗತಿಯತ್ತ ಕೊಂಡೊಯ್ಯುವ ಸಂಕಲ್ಪ ಮಾಡಲಾಗಿದೆ ಎಂದು ಹೇಳಿದರು.
ಸಾನ್ನಿಧ್ಯ ವಹಿಸಿದ್ದ ಶ್ರೀ ಮುರಾಹರಿ ಮಹಾರಾಜ್, ಲಾಡಚಿಂಚೋಳಿ ತಾಂಡಾದ ಶ್ರೀ ಸುನೀಲ ಮಹಾರಾಜ್ ಹಾಗೂ ಕಲಬುರಗಿಯ ಶರಣಿ ಲತಾದೇವಿ ಅವರು ಆಶೀರ್ವಚನ ನೀಡಿ, ಐಕ್ಯತೆ, ಸರಳ ಜೀವನ, ಶಿಕ್ಷಣ ಹಾಗೂ ಸ್ವಾವಲಂಬನೆಯ ಮಾರ್ಗವನ್ನು ಸಮಾಜ ಅನುಸರಿಸುವಂತೆ ಕರೆ ನೀಡಿದರು.
ಬಂಜಾರಾ ಭೂವಿ, ಕೊಂಚ ಕೊರಮ ಸಂಘದ ಶ್ಯಾಮರಾವ್ ಪವಾರ, ನ್ಯಾಯವಾದಿ ಸಂಘದ ಅಧ್ಯಕ್ಷ ಕಮಲ ರಾಠೋಡ, ಸೀತಾರಾಮ ರಾಠೋಡ, ಸುಭಾಷ ರಾಠೋಡ ಕೊರಳ್ಳಿ, ಗಂಗಾರಾಮ ಪವಾರ, ಮಾಣಿಕ ಜಾಧವ, ಸತೀಷ ಚವ್ಹಾಣ ಅನೇಕರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ವರದಕ್ಷಣೆ ಮುಕ್ತ ಬಂಜಾರ ವೇದಿಕೆಯ ಭೋಜು ಆಡೆ, ಠಾಕೂರಸಿಂಗ್ ರಾಠೋಡ, ಕಂಟು ರಾಠೋಡ, ಶಿವಾಜಿ ಹೊದಲೂರ, ಸಂತೋಷ ಪವಾರ, ರಮೇಶ ರಾಠೋಡ, ಕೋಟೇಶ ರಾಠೋಡ, ಅನೀಮ ರಾಠೋಡ, ಕಿಶನ ರಾಠೋಡ, ಮನ್ನು ರಾಠೋಡ, ದಗಡು ಪವಾರ, ಸಜ್ಜನ ಚವ್ಹಾಣ ಸೇರಿ ೫೦ ತಾಂಡಾಗಳಿoದ ಸಾವಿರ ಮಹಿಳೆಯರು ಪುರುಷರು ಭಾಗವಹಿಸಿದ್ದರು. ಲಂಬಾಣಿ ತರುಣ ಸಂಘದ ಅಧ್ಯಕ್ಷ ಶಿವಾಜಿ ರಾಠೋಡ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
ವೇದಿಕೆಯಲ್ಲಿ ವಿವಿಧ ತಾಂಡಾಗಳಿಂದ ಆಗಮಿಸಿದ್ದ ಕಾರಬಾರಿಗಳಿಗೆ ಸಭೆಯ ನಿರ್ಣಯ ಪುಸ್ತಕಗಳನ್ನು ನೀಡಿ ಸನ್ಮಾನಿಸಿ ಗೌರವಿಸಲಾಯಿತು.






