Aland | ಭೂಸನೂರು ಎನ್‌ಎಸ್‌ಎಲ್ ಸಕ್ಕರೆ ಕಾರ್ಖಾನೆಯಲ್ಲಿ ಬೆಂಕಿ ಅವಘಡ

ಆಳಂದ: ಪ್ರಸಕ್ತ ಸಾಲಿನ ಕಬ್ಬು ನುರಿಸುವ ಹಂಗಾಮಿಗೆ ಸಿದ್ಧತೆ ಮಾಡಿಕೊಂಡಿದ್ದ ಭೂಸನೂರು ಎನ್‌ಎಸ್‌ಎಲ್ ಸಕ್ಕರೆ ಕಾರ್ಖಾನೆಯಲ್ಲಿ ಮಂಗಳವಾರ ಬೆಂಕಿ ಅವಘಡ ಸಂಭವಿಸಿದೆ. ಕಾರ್ಖಾನೆ ಆವರಣದಲ್ಲಿ ಸಂಗ್ರಹಿಸಿಟ್ಟಿದ್ದ ಕಬ್ಬಿನ ಸಿಪ್ಪೆ, ಬೆಲ್ಟ್ ಹಾಗೂ ಇತರ ಸಲಕರಣೆಗಳು ಬೆಂಕಿಗೆ ಆಹುತಿಯಾಗಿವೆ.
ಕಳೆದ ಹಂಗಾಮಿನಲ್ಲಿ ಕಬ್ಬು ಅರೆದ ಬಳಿಕ ಉಳಿದ ಸಿಪ್ಪೆಯನ್ನು ಕಾರ್ಖಾನೆ ಆವರಣದಲ್ಲಿ ಸಂಗ್ರಹಿಸಿಡಲಾಗಿತ್ತು. ಮಂಗಳವಾರ ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡಿದ್ದು, ವಿಷಯ ತಿಳಿದ ಕಾರ್ಖಾನೆ ಅಧಿಕಾರಿಗಳು ಅಗ್ನಿಶಾಮಕ ಠಾಣೆಗೆ ಮಾಹಿತಿ ನೀಡಿದ್ದಾರೆ.
ಕೂಡಲೇ ಆಳಂದ ಅಗ್ನಿಶಾಮಕ ಠಾಣೆಯ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸಲು ಪ್ರಯತ್ನಿಸಿದರು. ಆದರೆ, ಬೆಂಕಿಯ ತೀವ್ರತೆ ಹೆಚ್ಚಿದ್ದ ಹಿನ್ನೆಲೆಯಲ್ಲಿ ಕಲಬುರಗಿಯಿಂದ ಮೂರು ಅಗ್ನಿಶಾಮಕ ವಾಹನಗಳನ್ನು ಕರೆಸಲಾಯಿತು. ರಾತ್ರಿ 9 ಗಂಟೆಯವರೆಗೆ ಸತತ ಕಾರ್ಯಾಚರಣೆ ನಡೆಸಿದ ಸಿಬ್ಬಂದಿ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾದರು. ಬೆಂಕಿಯಿಂದ ಕಬ್ಬಿನ ಸಿಪ್ಪೆಯ ಜತೆಗೆ ಕಾರ್ಖಾನೆಯ ಬೆಲ್ಟ್ ಹಾಗೂ ಇತರ ಸಲಕರಣೆಗಳು ಸುಟ್ಟು ಕರಕಲಾಗಿವೆ.
ಆಳಂದ ಅಗ್ನಿಶಾಮಕ ಠಾಣೆಯ ಮಲ್ಲಿಕಾರ್ಜುನ ಹಾಗೂ ಕಲಬುರಗಿಯ ವಿಶ್ವನಾಥ ಅವರ ನೇತೃತ್ವದಲ್ಲಿ ಶಿವರಾಜ, ಸಿದ್ದಪ್ಪ, ಭೀಮಾಶಂಕರ, ಕಲ್ಲಪ್ಪ, ರಮೇಶ, ಸಿದ್ದರಾಮ, ಇಬ್ರಾಹಿಂ ಸೇರಿದಂತೆ ಸುಮಾರು 24 ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
ಬೆಂಕಿ ಅವಘಡದಿಂದ ಹಾನಿಗೊಳಗಾದ ವಸ್ತುಗಳ ಸಮೀಕ್ಷೆ ನಡೆಸಿ, ನಷ್ಟದ ವರದಿ ಸಿದ್ಧಪಡಿಸಿದ ಬಳಿಕ ದೂರು ನೀಡಲಾಗುವುದು ಎಂದು ಕಾರ್ಖಾನೆಯ ಆಡಳಿತ ಮಂಡಳಿ ತಿಳಿಸಿದೆ.






