ಕಟ್ಟಕಡೆಯ ವ್ಯಕ್ತಿಯನ್ನೂ ಮುಖ್ಯವಾಹಿನಿಗೆ ತರುವುದೇ ಸರಕಾರದ ನೀತಿ : ಸಚಿವ ಪ್ರಿಯಾಂಕ್ ಖರ್ಗೆ

ಕಲಬುರಗಿ: ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಗೌರವಯುತವಾದ ಬದುಕು ನೀಡಿ ಮುಖ್ಯವಾಹಿನಿಗೆ ತರಬೇಕು ಎನ್ನುವುದು ಸರ್ಕಾರ ನೀತಿ ನಿಯಮಗಳಲ್ಲಿ ಅಡಕವಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.
2022-23 ನೇ ಸಾಲಿನ ಮಹಾತ್ಮಾಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ಆಳಂದ ತಾಲ್ಲೂಕಿನ ಅಳಂಗಾ ಗ್ರಾಮದಲ್ಲಿ 59 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಗ್ರಾಮ ಪಂಚಾಯತ್ ( ರಾಜೀವಗಾಂಧಿ ಸೇವಾ ಕೇಂದ್ರ) ಕಟ್ಟಡದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
ರಾಜ್ಯ ಸರ್ಕಾರ ವಾರ್ಷಿಕ 54,000 ಕೋಟಿ ರೂ. ಹಣ ಖರ್ಚು ಮಾಡಿ ಗ್ಯಾರಂಟಿ ಯೋಜನೆಗಳ ಮೂಲಕ ಸ್ವಾಭಿಮಾನದ ಬದುಕು ಕಲ್ಪಿಸಿದೆ. ರಾಜಕೀಯ ಪಕ್ಷ, ಜಾತಿ, ಧರ್ಮ ಹೊರತುಪಡಿಸಿ ರಾಜ್ಯದಲ್ಲಿ ಇರುವ ಪ್ರತಿಯೊಬ್ಬ ಫಲಾನುಭವಿಗಳು ಗ್ಯಾರಂಟಿ ಯೋಜನೆಗಳ ಲಾಭಪಡೆದುಕೊಳ್ಳುತ್ತಿದ್ದಾರೆ. ಆದರೂ ನಮ್ಮ ರಾಜಕೀಯ ವಿರೋಧಿಗಳು ನಮ್ಮನ್ನು ಟೀಕಿಸುತ್ತಿದ್ದಾರೆ ಎಂದು ಸಚಿವರು ಅಸಮಾಧಾನ ವ್ಯಕ್ತಪಡಿಸಿದರು.
ಇಲಾಖೆಯ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ 13 ಕೋಟಿ ಮಾನವ ದಿನಗಳ ಸೃಜನೆ ಮಾಡಿದ್ದೆವೆ. 27 ಲಕ್ಷ ಕುಟುಂಬಗಳ 48 ಲಕ್ಷ ಕಾರ್ಮಿಕರಿಗೆ ಉದ್ಯೋಗ ಒದಗಿಸಲಾಗಿದೆ. ನರೇಗಾ ಯೋಜನೆಯಡಿಯಲ್ಲಿ ಕೆಲಸ ಮಾಡುವ ಮಹಿಳೆಯರ ಚಿಕ್ಕ ಮಕ್ಕಳ ಪಾಲನೆ ಪೋಷಣೆ ಮಾಡಲು ರಾಜ್ಯಾದ್ಯಂತ 3,768 ಕೂಸಿನ ಮನೆ ನಿರ್ಮಾಣ ಮಾಡಿದ್ದೇವೆ. ಅಲ್ಲಿ 50,000 ಚಿಕ್ಕಮಕ್ಕಳನ್ನು ಪೋಷಿಸಲಾಗುತ್ತಿದೆ ಎಂದು ಪ್ರಿಯಾಂಕ್ ಖರ್ಗೆ ಹೇಳಿದರು.
ಗ್ರಾಮೀಣ ಭಾಗದ ಯುವಕರಿಗೆ ಓದಿನ ಅವಶ್ಯಕತೆ ಅರಿವು ಮೂಡಿಸಲು ಗ್ರಾಮೀಣ ಭಾಗದಲ್ಲಿ ಸುಮಾರು 5,770 ಅರಿವು ಕೇಂದ್ರ ( ಗ್ರಂಥಾಲಯ)ಗಳನ್ನು ಸ್ಥಾಪಿಸಲಾಗಿದ್ದು, ಈ ಎಲ್ಲ ಗ್ರಂಥಾಲಯಗಳಲ್ಲಿ ಸುಮಾರು 50 ಲಕ್ಷ ಯುವಕ ಯುವತಿಯರು ನೋಂದಣಿ ಮಾಡಿಕೊಂಡಿದ್ದಾರೆ. ಗ್ರಾಮೀಣ ಭಾಗದ 11.20 ಲಕ್ಷ ನಿವೇಶನಗಳನ್ನ ತೆರಿಗೆ ವ್ಯಾಪ್ತಿಗೆ ತಂದಿರುವುದರಿಂದ ಇದೂವರೆಗೆ 1,300 ಕೋಟಿ ರೂ. ತೆರಿಗೆ ವಸೂಲಾಗಿದ್ದು, ಆ ಹಣವನ್ನು ಗ್ರಾಮೀಣ ಭಾಗದ ಅಭಿವೃದ್ಧಿಗೆ ಬಳಸಿಕೊಳ್ಳಲಾಗುತ್ತದೆ ಎಂದರು.
ಆಳಂದ ಮತಕ್ಷೇತ್ರದ ಸರ್ವಾಂಗೀಣ ಅಭಿವೃದ್ದಿಗಾಗಿ ತಾವು ಶಾಸಕರೊಂದಿಗೆ ಶ್ರಮಿಸುವುದಾಗಿ ಸಚಿವರು ಭರವಸೆ ನೀಡಿದರು.
ರೈತರಿಗೆ ಬೆಳೆ ವಿಮೆಯಾಗಿ 657 ಕೋಟಿ ರೂ. ಜಿಲ್ಲೆಗೆ ಬಂದಿದ್ದು, ಅದರಲ್ಲಿ 225 ಕೋಟಿ ರೂ. ಬೆಳೆ ವಿಮೆ ಆಳಂದ ತಾಲೂಕಿಗೆ ಬಂದಿದೆ. ಈ ಸಾಲಿನಲ್ಲಿ 77,000 ರೈತರು ಬೆಳೆ ವಿಮೆ ಮಾಡಿಸಿಕೊಂಡಿದ್ದಾರೆ. ಕೇಂದ್ರದ ಅನುದಾನದ ಜೊತೆಗೆ ರಾಜ್ಯ ಸರ್ಕಾರ ಪ್ರತಿ ಹೆಕ್ಟೇರ ಗೆ ರೂ 8,500 ನೀಡುತ್ತದೆ ಎಂದರು.
ಯೋಜನಾ ಆಯೋಗದ ಉಪಾಧ್ಯಕ್ಷ ಹಾಗೂ ಶಾಸಕ ಬಿ.ಆರ್.ಪಾಟೀಲ್ ಮಾತನಾಡಿ, ಕೇಂದ್ರ ಸರ್ಕಾರ ರಾಜ್ಯದ ರೈತರಿಗೆ ಪರಿಹಾರ ಒದಗಿಸುವಲ್ಲಿ ಅನ್ಯಾಯ ಮಾಡುತ್ತಿದೆ. ಪಕ್ಕದ ಮಹಾರಾಷ್ಟ್ರಕ್ಕೆ ಹೋಲಿಸಿದರೆ ನಮ್ಮ ರಾಜ್ಯಕ್ಕೆ ಕಡಿಮೆ ಪರಿಹಾರ ನೀಡಿದೆ ಎಂದು ಆರೋಪಿಸಿದರು.
ವೇದಿಕೆಯ ಮೇಲೆ ಎಂಎಲ್ಸಿ ತಿಪ್ಪಣ್ಣಪ್ಪ ಕಮಕನೂರು, ಅಳಂಗಾ ಗ್ರಾಮ ಪಂಚಾಯತ್ ಅಧ್ಯಕ್ಷೆ ರಾಣಿ ರಾಜೇಂದ್ರ ಜಾಧವ್, ಜೆಸ್ಕಾಂ ಅಧ್ಯಕ್ಷ ಪ್ರವಿಣ್ ಹರವಾಳ್ , ಜಿಲ್ಲಾಧಿಕಾರಿ ಫೌಝಿಯಾ ತರನ್ನುಮ್, ಸಿಇಓ ಭಂವರ್ ಸಿಂಗ್ ಮೀನಾ, ಎಸ್ ಪಿ ಶ್ರೀನಿವಾಸಲು ಅಡ್ಡೂರು ಸೇರಿದಂತೆ ಹಲವರಿದ್ದರು.







