ಆಳಂದ | ಸರ್ಕಾರದ ಮೂರು ವರ್ಷದ ಸಾಧನೆ ಶೂನ್ಯ : ಸುಭಾಷ ಗುತ್ತೇದಾರ

ಆಳಂದ : ತುಮಕೂರಿನಲ್ಲಿ ಕಾಂಗ್ರೆಸ್ ಸರ್ಕಾರ ಆಯೋಜಿಸಿರುವ ಸಾಧನಾ ಸಮಾವೇಶವನ್ನು ಪ್ರಶ್ನಿಸಿರುವ ಮಾಜಿ ಶಾಸಕ ಸುಭಾಷ್ ಆರ್. ಗುತ್ತೇದಾರ ಅವರು, “ಮೂರು ವರ್ಷದಲ್ಲಿ ಸರ್ಕಾರ ಸಾಧನೆ ಮಾಡಿದೇನು?” ಎಂದು ಟೀಕಿಸಿದ್ದಾರೆ.
ಪತ್ರಿಕಾ ಹೇಳಿಕೆ ನೀಡಿರುವ ಅವರು, ಬಿಜೆಪಿ ಸರ್ಕಾರದ ಅವಧಿಯಲ್ಲಿ ಜಾರಿಗೊಂಡ ಯೋಜನೆಗಳನ್ನು ಈಗಿನ ಕಾಂಗ್ರೆಸ್ ಸರ್ಕಾರ ತನ್ನ ಸಾಧನೆಗಳೆಂದು ಬಿಂಬಿಸಿಕೊಳ್ಳುತ್ತಿದೆ ಎಂದು ಆರೋಪಿಸಿದರು.
ಹುಬ್ಬಳ್ಳಿಯಲ್ಲಿ ಆಯೋಜಿಸಿದ್ದ ಹಕ್ಕುಪತ್ರ ವಿತರಣೆ ಕಾರ್ಯಕ್ರಮವೂ ಬಿಜೆಪಿ ಸರ್ಕಾರದ ಅವಧಿಯ ನಿರ್ಧಾರವಾಗಿತ್ತು. ಹಿಂದಿನ ಸರ್ಕಾರದ ಕೆಲಸಗಳನ್ನು ತಮ್ಮ ಕೆಲಸವೆಂದು ಜನರಿಗೆ ತೋರಿಸುವ ಪ್ರಯತ್ನ ನಡೆಯುತ್ತಿದೆ ಎಂದು ದೂರಿದರು.
ಪರಿಣಾಮಕಾರಿಯಾದ ವಿರೋಧ ಪಕ್ಷವಾಗಿ ಬಿಜೆಪಿ ಕಾರ್ಯನಿರ್ವಹಿಸುತ್ತಿದೆ. ಬಿಜೆಪಿ ಹೋರಾಟ ಮಾಡಿರದಿದ್ದರೆ ವಾಲ್ಮೀಕಿ ಹಗರಣದಲ್ಲಿ ಸಚಿವರ ರಾಜೀನಾಮೆ ಸಾಧ್ಯವಾಗುತ್ತಿರಲಿಲ್ಲ ಎಂದು ಹೇಳಿದರು.
ಈ ಸರ್ಕಾರಕ್ಕೆ ಭಂಡತನವಿದ್ದು, ವಿರೋಧ ಪಕ್ಷದ ಹೋರಾಟಕ್ಕೂ ಸ್ಪಂದಿಸುವ ಮನೋಭಾವ ಇಲ್ಲ. ಆದರೆ ರಾಜ್ಯದ ಜನರು ಎಲ್ಲವನ್ನು ಗಮನಿಸುತ್ತಿದ್ದಾರೆ. ಈ ರೀತಿಯ ರಾಜಕೀಯ ಹೆಚ್ಚು ದಿನ ನಡೆಯುವುದಿಲ್ಲ ಎಂದು ಎಚ್ಚರಿಸಿದರು.
ಆಳಂದ ತಾಲೂಕಿನಲ್ಲಿ ಅಂತರ್ಜಲ ಮಟ್ಟ ಕುಸಿದಿದ್ದು, ಕೆರೆ-ಕುಂಟೆಗಳು ಬತ್ತಿವೆ. ಜನರು ಹಾಗೂ ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ. “ಶಿರಪೂರ ಮಾದರಿ ನೀರಾವರಿ ಮಾಡಿದ್ದೇವೆ” ಎಂದು ಹೇಳಿಕೊಳ್ಳುವ ಶಾಸಕ ಬಿ.ಆರ್. ಪಾಟೀಲ ಅವರಿಗೆ ಪ್ರಸ್ತುತ ಪರಿಸ್ಥಿತಿಯ ಅರಿವಿದೆಯೇ ಎಂದು ಪ್ರಶ್ನಿಸಿದರು.






