ಆಳಂದ | ಐಐಆರ್‌ಎಫ್ ಶ್ರೇಯಾಂಕ 2026 : ಕೇಂದ್ರೀಯ ವಿವಿಗೆ 16ನೆಯ ಸ್ಥಾನ

ಆಳಂದ: ಪ್ರತಿಷ್ಠಿತ ಐಐಆರ್‌ಎಫ್ ಅಂತರರಾಷ್ಟ್ರೀಯ ಸಾಂಸ್ಥಿಕ ಶ್ರೇಯಾಂಕ ಚೌಕಟ್ಟು (IIRF - International Institutional Ranking Framework) 2026ರ ಶ್ರೇಯಾಂಕ ಪಟ್ಟಿಯಲ್ಲಿ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ (ಸಿಯುಕೆ) 16ನೇ ಸ್ಥಾನ ಪಡೆದು ಶಿಕ್ಷಣ ಕ್ಷೇತ್ರದಲ್ಲಿ ಮಹತ್ವದ ಸಾಧನೆ ಮಾಡಿದೆ. ಕಳೆದ ವರ್ಷ 32ನೇ ಸ್ಥಾನದಲ್ಲಿದ್ದ ಸಿಯುಕೆ ಈ ವರ್ಷ 16ನೇ ಸ್ಥಾನಕ್ಕೆ ಏರುವ ಮೂಲಕ ಗಮನಾರ್ಹ ಸಾಧನೆ ಮಾಡಿದೆ.
ದೇಶದ ಉನ್ನತ ಶಿಕ್ಷಣ ಸಂಸ್ಥೆಗಳ ಕಾರ್ಯಕ್ಷಮತೆಯನ್ನು ಮೌಲ್ಯಮಾಪನ ಮಾಡಿ ವಾರ್ಷಿಕ ಶ್ರೇಯಾಂಕ ಪ್ರಕಟಿಸುವ ಪ್ರತಿಷ್ಠಿತ ಸಂಸ್ಥೆಯಾದ ಐ.ಐ.ಆರ್.ಎಫ್ ಪ್ರಕಟಿಸಿರುವ ಈ ಶ್ರೇಯಾಂಕದಲ್ಲಿ ಸಿಯುಕೆ ಸಾಧಿಸಿರುವ ಪ್ರಗತಿಯು ವಿಶ್ವವಿದ್ಯಾಲಯದ ಶೈಕ್ಷಣಿಕ ಗುಣಮಟ್ಟ, ಹೊಸ ಸಂಶೋಧನೆಗಳು, ನವೋದ್ಯಮ ಹಾಗೂ ಕೌಶಲ್ಯ ಸೇರಿದಂತೆ ವಿವಿಯ ಸಮಗ್ರ ಅಭಿವೃದ್ಧಿಗೆ ನೀಡುತ್ತಿರುವ ಆದ್ಯತೆಯನ್ನು ಇದು ಪ್ರತಿಬಿಂಬಿಸುತ್ತದೆ.
ಈ ಸಾಧನೆಯ ಕುರಿತು ಸಂತಸ ವ್ಯಕ್ತಪಡಿಸಿದ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ.ಬಟ್ಟು ಸತ್ಯನಾರಾಯಣ ಅವರು, ವಿಶ್ವವಿದ್ಯಾಲಯದ ಬೋಧಕ, ಬೋಧಕೇತರ ಸಿಬ್ಬಂದಿ ಹಾಗೂ ಎಲ್ಲ ವಿದ್ಯಾರ್ಥಿಗಳಿಗೆ ಈ ಸಂದರ್ಭದಲ್ಲಿ ಅಭಿನಂದನೆ ಸಲ್ಲಿಸಿದ್ದಾರೆ.
"ಐಐಐಎಫ್ ಶ್ರೇಯಾಂಕದಲ್ಲಿ ವಿಶ್ವವಿದ್ಯಾಲಯವು ಗಮನಾರ್ಹ ಪ್ರಗತಿ ಸಾಧಿಸಿರುವುದು ನಮ್ಮ ಬೋಧಕ-ಬೋಧಕೇತರ ವೃಂದ, ಸಂಶೋಧನಾ ವಿದ್ಯಾರ್ಥಿಗಳು, ವಿದ್ಯಾರ್ಥಿಗಳ ಪರಿಶ್ರಮ ಮತ್ತು ನಿಷ್ಠೆಗೆ ದೊರೆತ ಮಾನ್ಯತೆಯಾಗಿದೆ” ಎಂದು ಅವರು ಹೇಳಿದರು.
ಈ ಸಾಧನೆಯು ನಮ್ಮ ವಿವಿಯಲ್ಲಿ ಮತ್ತಷ್ಟು ಬೋಧನೆ, ಹೊಸ ಹೊಸ ಸಂಶೋಧನೆ, ನವೋದ್ಯಮ ಹಾಗೂ ಕೌಶಲ್ಯ ಆಧಾರಿತ ಶಿಕ್ಷಣ, ಸಮಾಜಮುಖಿ ಕಾರ್ಯಗಳಲ್ಲಿ ತೊಡಗಲು ನಮ್ಮನ್ನು ಪ್ರೇರೇಪಿಸುತ್ತದೆ ಎಂದು ಕುಲಪತಿಗಳು ಹೇಳಿದ್ದಾರೆ.
ನಮ್ಮ ವಿಶ್ವವಿದ್ಯಾಲಯವು ದೇಶದ ಪ್ರಮುಖ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾಗಿ ಹೊರಹೊಮ್ಮುತ್ತಿರುವುದು ಸಂತಸ ಸಂಗತಿ ಎಂದು ಕುಲಪತಿಗಳು ಹೇಳಿದ್ದಾರೆ. ಐಕ್ಯೂಎಸಿ ನಿರ್ದೇಶಕ ಪ್ರೊ.ಅಮರೆಂದ್ರ ಮತ್ಸ ಮತ್ತು ವಿವಿಯ ಸ್ರೇಯಾಂಕ ವಿಭಾಗದ ಸಂಯೋಜಕ ಡಾ. ಗುರುರಾಜ ಮುಕರಂಬಿಯವರ ಕಾರ್ಯವನ್ನು ಮಾನ್ಯ ಕುಲಪತಿಗಳು ಸ್ಲಾಗಿಸಿದ್ದಾರೆ. ಕುಲಸಚಿವರಾದ ಪ್ರೊ.ಆರ್.ಆರ್.ಬಿರಾದಾರ, ಎಲ್ಲಾ ಡೀನರು, ಮುಖ್ಯಸ್ಥರು ವಿವಿಯ ಈ ಸಾಧನೆಗೆ ಹರ್ಷ ವ್ಯಕ್ತಪಡಿಸಿದ್ದಾರೆ.






