Aland | ನಶಾಮುಕ್ತ ಭಾರತ ನಿರ್ಮಾಣಕ್ಕೆ ಕೈಜೋಡಿಸಿ: ಸುವರ್ಣ ಆರ್.ಚಿಂಚನಸೂರ

ಆಳಂದ : ಮಾದಕ ವ್ಯಸನಗಳು ವ್ಯಕ್ತಿಯ ಆರೋಗ್ಯ, ಕುಟುಂಬದ ನೆಮ್ಮದಿ ಹಾಗೂ ಸಮಾಜದ ಶಾಂತಿಯನ್ನು ಹಾಳು ಮಾಡುವ ಮಾರಕ ಪಿಡುಗಾಗಿದ್ದು, ಯುವಜನರು ಯಾವುದೇ ರೀತಿಯ ದುಶ್ಚಟಗಳಿಗೆ ಬಲಿಯಾಗದೆ ಶಿಕ್ಷಣ, ಸಂಸ್ಕಾರ ಮತ್ತು ಸಾಮಾಜಿಕ ಜವಾಬ್ದಾರಿಗಳತ್ತ ಗಮನಹರಿಸಿ ನಶಾಮುಕ್ತ ಭಾರತ ನಿರ್ಮಾಣಕ್ಕೆ ಕೈಜೋಡಿಸಬೇಕು ಎಂದು ಕೃಷ್ಣಾ ಗ್ರಾಮೀಣ ಬ್ಯಾಂಕ್ (ಕೆಜಿಬಿ) ಸ್ಥಳೀಯ ಶಾಖೆಯ ವ್ಯವಸ್ಥಾಪಕಿ ಸುವರ್ಣ ಆರ್. ಚಿಂಚನಸೂರ ಕರೆ ನೀಡಿದರು.
ಪಟ್ಟಣದ ಸರ್ಕಾರಿ ಬಾಲಕರ ಪದವಿಪೂರ್ವ ಕಾಲೇಜಿನಲ್ಲಿ ಕೃಷ್ಣಾ ಗ್ರಾಮೀಣ ಬ್ಯಾಂಕ್ ಸ್ಥಳೀಯ ಶಾಖೆಯ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ‘ನಶಾಮುಕ್ತ ಭಾರತ ಅಭಿಯಾನ’ ಹಾಗೂ ‘ವಿಕಸಿತ ಭಾರತ ಗುರುತು ಅಭಿಯಾನ’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ದೇಶದ ಅಭಿವೃದ್ಧಿ ಮತ್ತು ಪ್ರಗತಿಯಲ್ಲಿ ಯುವ ಸಮುದಾಯದ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ವಿದ್ಯಾರ್ಥಿಗಳು ತಮ್ಮ ಜೀವನದ ಅಮೂಲ್ಯ ಸಮಯವನ್ನು ದುಶ್ಚಟಗಳಿಗೆ ವ್ಯರ್ಥ ಮಾಡದೇ ಜ್ಞಾನ ಸಂಪಾದನೆ, ಕೌಶಲ್ಯ ವೃದ್ಧಿ ಹಾಗೂ ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಲು ಬಳಸಿಕೊಳ್ಳಬೇಕು. ನಶಾಮುಕ್ತ ಸಮಾಜವೇ ಆರೋಗ್ಯವಂತ ಮತ್ತು ಸದೃಢ ರಾಷ್ಟ್ರದ ಅಡಿಪಾಯವಾಗಿದ್ದು, ಪ್ರತಿಯೊಬ್ಬ ವಿದ್ಯಾರ್ಥಿಯೂ ಈ ಅಭಿಯಾನದ ರಾಯಭಾರಿಯಾಗಿ ಕಾರ್ಯನಿರ್ವಹಿಸಬೇಕೆಂದು ಅವರು ಸಲಹೆ ನೀಡಿದರು.
ಮಾದಕ ವಸ್ತುಗಳ ಸೇವನೆಯಿಂದ ಆರೋಗ್ಯ ಸಮಸ್ಯೆಗಳಷ್ಟೇ ಅಲ್ಲದೆ ಆರ್ಥಿಕ, ಸಾಮಾಜಿಕ ಹಾಗೂ ಮಾನಸಿಕ ಸಂಕಷ್ಟಗಳು ಉಂಟಾಗುತ್ತವೆ. ಇದರಿಂದ ವ್ಯಕ್ತಿಯ ಭವಿಷ್ಯ ಹಾಳಾಗುವ ಜೊತೆಗೆ ಕುಟುಂಬ ಮತ್ತು ಸಮಾಜಕ್ಕೂ ದುಷ್ಪರಿಣಾಮ ಉಂಟಾಗುತ್ತದೆ. ಆದ್ದರಿಂದ ವಿದ್ಯಾರ್ಥಿಗಳು ತಮ್ಮ ಸ್ನೇಹಿತರು, ಕುಟುಂಬ ಸದಸ್ಯರು ಹಾಗೂ ಸಮಾಜದಲ್ಲಿ ಜಾಗೃತಿ ಮೂಡಿಸುವ ಮೂಲಕ ನಶಾಮುಕ್ತ ಭಾರತದ ಕನಸನ್ನು ನನಸಾಗಿಸಲು ಮುಂದಾಗಬೇಕು ಎಂದು ತಿಳಿಸಿದರು.
ಅಭಿಯಾನಗಳ ಮೂಲಕ ವಿದ್ಯಾರ್ಥಿಗಳಲ್ಲಿ ದೇಶಭಕ್ತಿ, ಸಾಮಾಜಿಕ ಕಾಳಜಿ ಹಾಗೂ ಆರೋಗ್ಯಕರ ಜೀವನಶೈಲಿಯ ಬಗ್ಗೆ ಅರಿವು ಮೂಡಿಸಲಾಗುತ್ತಿದೆ. ವಿಕಸಿತ ಭಾರತದ ಗುರಿ ಸಾಧನೆಗೆ ಶಿಸ್ತು, ಶಿಕ್ಷಣ, ಕಠಿಣ ಪರಿಶ್ರಮ ಹಾಗೂ ಉತ್ತಮ ನಾಗರಿಕ ಮೌಲ್ಯಗಳು ಅತ್ಯಗತ್ಯವಾಗಿದ್ದು, ಯುವಜನರು ಇವುಗಳನ್ನು ಅಳವಡಿಸಿಕೊಳ್ಳುವ ಮೂಲಕ ರಾಷ್ಟ್ರ ನಿರ್ಮಾಣದಲ್ಲಿ ಸಕ್ರಿಯ ಪಾತ್ರವಹಿಸಬೇಕು ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಪಂಡಿತರಾವ್ ಎನ್. ಪಾಟೀಲ ಮಾತನಾಡಿ, ಯುವಕರು ದೇಶದ ಭವಿಷ್ಯದ ಶಕ್ತಿಯಾಗಿದ್ದು, ಸಮಾಜದಲ್ಲಿ ಸಕಾರಾತ್ಮಕ ಬದಲಾವಣೆ ತರಬಲ್ಲ ಸಾಮರ್ಥ್ಯ ಹೊಂದಿದ್ದಾರೆ. ವಿದ್ಯಾರ್ಥಿಗಳು ಮಾದಕ ವ್ಯಸನಗಳಿಂದ ದೂರವಿದ್ದು ಜ್ಞಾನ, ನೈತಿಕತೆ ಮತ್ತು ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಂಡಾಗ ಮಾತ್ರ ವಿಕಸಿತ ಭಾರತ ನಿರ್ಮಾಣ ಸಾಧ್ಯವಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ಶಾಂತಕುಮಾರ ಜಿಂಕಪಳ್ಳಿ, ಶಶಿಕಾಂತ ಮೇತ್ರಿ, ಅಂಬರಾಯ, ಎಫ್‌ಡಿಎ ಸಂತೋಷಕುಮಾರ ಚಂದಾಪೂರ, ಎಸ್‌ಡಿಎ ಶರಣಬಸಪ್ಪ ವಿಭೂತಿ ಪಾಟೀಲ, ಗ್ರಂಥಪಾಲಕಿ ಸಭೋಧಿನಿ, ಕೆಜೆಬಿ ಶಾಖೆಯ ಕ್ಷೇತ್ರಾಧಿಕಾರಿ ಭೋಮಾ ಚನಸ್, ಚರನ್‌ಕುಮಾರ, ರುಕ್ಮಣಿ, ಸೋಮಯ್ಯಾ, ರವಿ ಎಸ್. ಜವಲಿ ಸೇರಿದಂತೆ ಕಾಲೇಜಿನ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ವೀರಯ್ಯಾ ಸ್ವಾಮಿ ತಡಕಲ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.






