ಆಳಂದ | ಬಿ.ಆರ್.ಪಾಟೀಲ್ ಶಿಷ್ಠಾಚಾರ ಪಾಲಿಸಿ ಇನ್ನೊಬ್ಬರಿಗೆ ಬೋಧಿಸಲಿ : ಮುತ್ತಣ್ಣ ಬೀಳಗಿ

ಆಳಂದ : ಸಾರ್ವಜನಿಕ ಜೀವನದಲ್ಲಿ ಇರುವವರು ಶಿಷ್ಟಾಚಾರ, ಸಂಸ್ಕಾರ ಹಾಗೂ ಗೌರವಯುತ ನಡೆ-ನುಡಿಗಳನ್ನು ಪಾಲಿಸುವುದು ಅತ್ಯಂತ ಮುಖ್ಯವಾಗಿದೆ. ಈ ನಿಟ್ಟಿನಲ್ಲಿ ಶಾಸಕ ಬಿ.ಆರ್.ಪಾಟೀಲ್ ಮೊದಲು ತಾವು ಪಾಲಿಸಿ ಇತರರಿಗೆ ಮಾದರಿಯಾಗಲಿ ಎಂದು ಭೂಸನೂರ ಗ್ರಾಮ ಪಂಚಾಯಿತಿ ಅಧ್ಯಕ್ಷ ಮುತ್ತಣ್ಣ ಬೀಳಗಿ ಅಭಿಪ್ರಾಯಪಟ್ಟಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಇತ್ತೀಚಿನ ದಿನಗಳಲ್ಲಿ ಶಾಸಕ ಬಿ.ಆರ್.ಪಾಟೀಲ್ ಸಾರ್ವಜನಿಕ ವೇದಿಕೆಗಳಲ್ಲಿ ಬಳಸುತ್ತಿರುವ ಪದಪ್ರಯೋಗಗಳು ಹಾಗೂ ಹೇಳಿಕೆಗಳು ಸಮಾಜದಲ್ಲಿ ಅಸಮಾಧಾನ ಉಂಟುಮಾಡುತ್ತಿವೆ ಎಂದು ಆರೋಪಿಸಿದರು.
ಶಾಸಕ ಬಿ.ಆರ್. ಪಾಟೀಲ ಜಾತಿವಾದಿ ರಾಜಕಾರಣಿಯಾಗಿದ್ದು, ತಾವು ಪರಿಶಿಷ್ಟ ವರ್ಗಕ್ಕೆ ಸೇರಿದವರಾಗಿರುವುದರಿಂದ ಉದ್ದೇಶಪೂರ್ವಕವಾಗಿ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳ ಶಂಕುಸ್ಥಾಪನಾ ಕಾರ್ಯಕ್ರಮಗಳಲ್ಲಿ ತಮ್ಮ ಹೆಸರು ಕೈಬಿಟ್ಟಿದ್ದಾರೆ ಎಂದು ಅವರು ಆಪಾದಿಸಿದರು.
ಇತ್ತೀಚೆಗೆ ಭೂಸನೂರ ಸಹಕಾರಿ ಸಕ್ಕರೆ ಕಾರ್ಖಾನೆಯಿಂದ ಭೂಸನೂರ ಗ್ರಾಮದವರೆಗೆ ಹಾಗೂ ಭೂಸನೂರ ಬಸವೇಶ್ವರ ಚೌಕದಿಂದ ಭೂಸನೂರ ತಾಂಡಾದವರೆಗೆ ರಸ್ತೆ ಸುಧಾರಣೆ ಕಾಮಗಾರಿಗಳ ಶಂಕುಸ್ಥಾಪನಾ ಕಾರ್ಯಕ್ರಮದಲ್ಲಿ ಶಿಷ್ಟಾಚಾರಕ್ಕಾಗಿಯಾದರೂ ತಮ್ಮ ಹೆಸರು ಹಾಕಿಲ್ಲ. ಜೊತೆಗೆ ಕಾರ್ಯಕ್ರಮಕ್ಕೂ ಆಹ್ವಾನ ನೀಡಿಲ್ಲ ಎಂದು ಮುತ್ತಣ್ಣ ಬೀಳಗಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.






