Aland | ನರೋಣಾ ವಲಯ ಕ್ರೀಡಾಕೂಟ: ಶ್ರೀಚಂದ ಸರ್ಕಾರಿ ಶಾಲಾ ವಿದ್ಯಾರ್ಥಿಗಳ ಸಾಧನೆ

ಆಳಂದ: ಎಲೆಮರೆ ಕಾಯಿಯಂತೆ ಪ್ರಚಾರದಿಂದ ದೂರ ಉಳಿದಿದ್ದ ಶ್ರೀಚಂದ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳು ಸಾರ್ವಜನಿಕ ಶಿಕ್ಷಣ ಇಲಾಖೆ 2026-27ನೇ ಸಾಲಿನ ನರೋಣಾ ವಲಯ ಮಟ್ಟದ ಕ್ರೀಡಾಕೂಟದಲ್ಲಿ ವಿವಿಧ ಸ್ಪರ್ಧೆಗಳಲ್ಲಿ ಪ್ರಥಮ ಸ್ಥಾನ ಪಡೆದು ತಾಲೂಕು ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ ಎಂದು ದೈಹಿಕ ಶಿಕ್ಷಣ ಶಿಕ್ಷಕ ಶ್ರೀಶೈಲ ದೇವರಾಯ ತಿಳಿಸಿದ್ದಾರೆ.
ಪಟ್ಟಣದ ಸಾರ್ವಜನಿಕ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ನರೋಣಾ ವಲಯಮಟ್ಟದ ಕ್ರೀಡಾಕೂಟದಲ್ಲಿ 14 ವರ್ಷದೊಳಗಿನ ಶ್ರೀಚಂದ ಸರ್ಕಾರಿ ಪ್ರೌಢಶಾಲೆಯ ಬಾಲಕಿಯರ ಹಾಗೂ ಬಾಲಕರ ಕಬ್ಬಡಿ ತಂಡಗಳು ಪ್ರಥಮ ಸ್ಥಾನ ಪಡೆದಿವೆ. ಅಲ್ಲದೆ, ಬಾಲಕ ಹಾಗೂ ಬಾಲಕಿಯರ ಥ್ರೋಬಾಲ್‌ನಲ್ಲೂ ಎರಡೂ ತಂಡಗಳು ಪ್ರಥಮ ಸ್ಥಾನ ಪಡೆದುಕೊಂಡಿವೆ.
ಓಟದ ಸ್ಪರ್ಧೆಯಲ್ಲಿ 200 ಮೀಟರ್ ಓಟದಲ್ಲಿ ಚೈತ್ರಾ ಪ್ರಥಮ ಸ್ಥಾನ ಪಡೆದರೆ, ಅಂಬಿಕಾ ದ್ವಿತೀಯ ಸ್ಥಾನ ಪಡೆದಿದ್ದಾರೆ. 400 ಮೀಟರ್ ಹಾಗೂ 600 ಮೀಟರ್ ಓಟದಲ್ಲೂ ಶಾಲೆಯ ವಿದ್ಯಾರ್ಥಿಗಳು ದ್ವಿತೀಯ ಸ್ಥಾನ ಪಡೆದು ತಾಲೂಕು ಮಟ್ಟಕ್ಕೆ ಆಯ್ಕೆಯಾಗಿದ್ದಾರೆ ಎಂದು ಅವರು ತಿಳಿಸಿದರು.
17 ವರ್ಷದೊಳಗಿನ ವಿಭಾಗದಲ್ಲಿಯೂ ಶಾಲೆಯ ಬಾಲಕಿಯರ ಹಾಗೂ ಬಾಲಕರ ಕಬ್ಬಡಿ ತಂಡಗಳು ಪ್ರಥಮ ಸ್ಥಾನ ಪಡೆದಿವೆ. ಬಾಲಕರ ಥ್ರೋಬಾಲ್‌ನಲ್ಲಿ ಪ್ರಥಮ ಸ್ಥಾನ, 4×400 ಮೀಟರ್ ಬಾಲಕರ ರಿಲೇಯಲ್ಲಿ ಪ್ರಥಮ ಸ್ಥಾನ ಹಾಗೂ 4×100 ಮೀಟರ್ ಬಾಲಕಿಯರ ರಿಲೇಯಲ್ಲಿ ದ್ವಿತೀಯ ಸ್ಥಾನ ಲಭಿಸಿದೆ.
100 ಮೀಟರ್ ಓಟದಲ್ಲಿ ಶ್ರೀಕಾಂತ ಹಾಗೂ ದಿವ್ಯಾ ದ್ವಿತೀಯ ಸ್ಥಾನ ಪಡೆದರೆ, 400 ಮೀಟರ್ ಓಟದಲ್ಲಿ ಸೃಷ್ಟಿ ದ್ವಿತೀಯ ಸ್ಥಾನ ಪಡೆದಿದ್ದಾರೆ. 3 ಸಾವಿರ ಮೀಟರ್ ಓಟದಲ್ಲಿ ದಿವ್ಯಾ ಪ್ರಥಮ ಸ್ಥಾನ ಹಾಗೂ ಜಾವೆಲಿನ್ ಎಸೆತದಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾರೆ ಎಂದು ಶ್ರೀಶೈಲ ದೇವರಾಯ ತಿಳಿಸಿದ್ದಾರೆ.
ವಿದ್ಯಾರ್ಥಿಗಳು ಕ್ರೀಡಾಂಗಣದಲ್ಲಿ ತಮ್ಮ ಸಾಧನೆಯನ್ನು ಸಂಭ್ರಮಿಸಿದರು. ದೈಹಿಕ ಶಿಕ್ಷಣ ಶಿಕ್ಷಣಾಧಿಕಾರಿ ಅರವಿಂದ ಭಾಸಗಿ, ಪ್ರಾಥಮಿಕ ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ಮಹಾದೇವ ಗುಣಕಿ, ಪ್ರೌಢಶಾಲೆ ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ದತ್ತು ಬಡಿಗೇರ ಹಾಗೂ ಶಿಕ್ಷಕ ಶರಣಬಸಪ್ಪ ವಡಗಾಂವ ಅವರು ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ನೀಡಿ ಗೌರವಿಸಿದರು.
ವಿದ್ಯಾರ್ಥಿಗಳ ಸಾಧನೆಗೆ ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ಅನಿಲಕುಮಾರ ಮೇತ್ರೆ, ಮುಖ್ಯ ಶಿಕ್ಷಕಿ ಸುನಿತಾ ಸಂಗಪ್ಪ ಲೋಣಿ, ದೈಹಿಕ ಶಿಕ್ಷಣ ಶಿಕ್ಷಕ ಶ್ರೀಶೈಲ ದೇವರಾಯ ಸೇರಿದಂತೆ ಶಾಲಾ ಸಿಬ್ಬಂದಿ ಹಾಗೂ ಗ್ರಾಮಸ್ಥರು ಹರ್ಷ ವ್ಯಕ್ತಪಡಿಸಿ, ಮುಂದಿನ ಹಂತದ ಸ್ಪರ್ಧೆಗಳಲ್ಲಿ ಹೆಚ್ಚಿನ ಸಾಧನೆ ಮಾಡುವಂತೆ ಶುಭ ಹಾರೈಸಿದ್ದಾರೆ.






