Aland | ನಿನ್ನೆಯ ಪ್ರತಿಭಟನೆಗೂ ವೀರಶೈವ ಮಹಾಸಭೆಗೂ ಸಂಬಂಧವಿಲ್ಲ: ಸಮಾಜದ ಮುಖಂಡರ ಸ್ಪಷ್ಟನೆ

ಆಳಂದ: ಪಟ್ಟಣದಲ್ಲಿ ನಿನ್ನೆ ನಡೆದ ಪ್ರತಿಭಟನೆಗೂ ಅಖಿಲ ಭಾರತ ವೀರಶೈವ ಮಹಾಸಭೆಗೂ ಯಾವುದೇ ಸಂಬಂಧವಿಲ್ಲ. ಅದು ಮಹಾಸಭೆಯ ಅಧಿಕೃತ ಪ್ರತಿಭಟನೆಯಲ್ಲ. ಬದಲಾಗಿ, ಮಹಾಸಭೆಯಲ್ಲಿ ಗುರುತಿಸಿಕೊಂಡಿರುವ ಕೆಲವು ಕಾಂಗ್ರೆಸ್ ಬೆಂಬಲಿತ ವ್ಯಕ್ತಿಗಳು ತಮ್ಮ ವೈಯಕ್ತಿಕ ರಾಜಕೀಯ ನಿಲುವಿನ ಹಿನ್ನೆಲೆಯಲ್ಲಿ ನಡೆಸಿದ ಪ್ರತಿಭಟನೆಯಾಗಿದೆ ಎಂದು ಆಳಂದ ಸಕಲ ವೀರಶೈವ ಲಿಂಗಾಯತ ಸಮಾಜದ ಮುಖಂಡರು ಸ್ಪಷ್ಟಪಡಿಸಿದ್ದಾರೆ.
ಗುರುವಾರ ಪಟ್ಟಣದಲ್ಲಿ ಸುದ್ದಿಗೋಷ್ಠಿ ನಡೆಸಿದ ಮುಖಂಡರು, ಅಖಿಲ ಭಾರತ ವೀರಶೈವ ಮಹಾಸಭೆ ಯಾವುದೇ ಒಂದು ರಾಜಕೀಯ ಪಕ್ಷಕ್ಕೆ ಸೀಮಿತವಾದ ಸಂಘಟನೆಯಲ್ಲ. ಅದು ಸಮಸ್ತ ವೀರಶೈವ ಲಿಂಗಾಯತ ಸಮಾಜದ ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ಹಿತಾಸಕ್ತಿಗಳನ್ನು ಪ್ರತಿನಿಧಿಸುವ ಸಂಘಟನೆಯಾಗಿದೆ. ಹೀಗಾಗಿ ಕೆಲವರು ತಮ್ಮ ವೈಯಕ್ತಿಕ ಮತ್ತು ರಾಜಕೀಯ ಅಭಿಪ್ರಾಯಗಳನ್ನು ಮಹಾಸಭೆಯ ಅಧಿಕೃತ ನಿಲುವು ಎಂಬಂತೆ ಬಿಂಬಿಸುವುದು ಸರಿಯಲ್ಲ ಎಂದು ಆಕ್ಷೇಪಿಸಿದರು.
ಮಹಾಸಭೆಯ ಹೆಸರಿನಲ್ಲಿ ಯಾವುದೇ ಪ್ರತಿಭಟನೆ ಅಥವಾ ಕಾರ್ಯಕ್ರಮ ನಡೆಸಬೇಕಾದರೆ ಸಂಘಟನೆಯ ಅಧಿಕೃತ ಅನುಮತಿ, ನಿರ್ಣಯ ಹಾಗೂ ಪದಾಧಿಕಾರಿಗಳ ಒಮ್ಮತ ಅಗತ್ಯ. ಕೆಲವರ ರಾಜಕೀಯ ಹಿತಾಸಕ್ತಿಗಾಗಿ ಇಡೀ ಸಮಾಜದ ಸಂಘಟನೆಯನ್ನು ಬಳಸಿಕೊಳ್ಳುವುದು ಸಮಾಜದ ಒಗ್ಗಟ್ಟಿನ ದೃಷ್ಟಿಯಿಂದ ಸೂಕ್ತವಲ್ಲ ಎಂದು ಅಭಿಪ್ರಾಯಪಟ್ಟರು.
ವೀರಶೈವ ಲಿಂಗಾಯತ ಸಮಾಜದಲ್ಲಿ ರಾಜಕೀಯ ಭಿನ್ನಾಭಿಪ್ರಾಯಗಳಿರುವುದು ಸಹಜ. ಆದರೆ ಸಮಾಜದ ಸಂಘಟನೆಗಳನ್ನು ರಾಜಕೀಯ ಸಂಘರ್ಷದ ವೇದಿಕೆಯನ್ನಾಗಿ ಮಾಡಬಾರದು. ಸಮಾಜದ ಗೌರವ, ಐಕ್ಯತೆ ಮತ್ತು ಸ್ವಾಭಿಮಾನಕ್ಕೆ ಧಕ್ಕೆಯಾಗದಂತೆ ಎಲ್ಲರೂ ಜವಾಬ್ದಾರಿಯಿಂದ ನಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.
ನಿನ್ನೆಯ ಪ್ರತಿಭಟನೆಯನ್ನು ಅಖಿಲ ಭಾರತ ವೀರಶೈವ ಮಹಾಸಭೆಯ ಅಧಿಕೃತ ಪ್ರತಿಭಟನೆ ಎಂದು ಪರಿಗಣಿಸಬಾರದು. ಅದು ಪ್ರತಿಭಟನೆಯಲ್ಲಿ ಭಾಗವಹಿಸಿದ ವ್ಯಕ್ತಿಗಳ ವೈಯಕ್ತಿಕ ಹಾಗೂ ರಾಜಕೀಯ ನಿಲುವಿಗೆ ಸಂಬಂಧಿಸಿದ ವಿಚಾರವಾಗಿದ್ದು, ಆಳಂದದ ಸಮಸ್ತ ವೀರಶೈವ ಲಿಂಗಾಯತ ಸಮಾಜದ ಅಭಿಪ್ರಾಯವೆಂದು ಬಿಂಬಿಸಬಾರದು ಎಂದು ಒತ್ತಾಯಿಸಿದರು.
ಇದೇ ವೇಳೆ, ನ. 23ರಂದು ಆಳಂದ ಸಕಲ ವೀರಶೈವ ಲಿಂಗಾಯತ ಸಮಾಜದ ವತಿಯಿಂದ ಹಮ್ಮಿಕೊಂಡಿರುವ ಪ್ರತಿಭಟನೆಗೆ ತಮ್ಮ ಹಾಗೂ ಸಮಾಜದ ಎಲ್ಲ ಉಪಪಂಗಡಗಳ ಸಂಪೂರ್ಣ ಬೆಂಬಲವಿದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಹಿರಿಯ ಮುಖಂಡರಾದ ವೀರಣ್ಣ ಮಂಗಾಣೆ, ಅಣ್ಣಾರಾವ ಪಾಟೀಲ ಕವಲಗಾ, ಮಹಾದೇವಪ್ಪ ಪಾಟೀಲ, ಮಲ್ಲಿಕಾರ್ಜುನ ಕಂದಗೂಳೆ, ರಮೇಶ ಬಿರಾದಾರ, ಜಗದೀಶ ಬಿರಾದಾರ, ಶರಣಗೌಡ ಪಾಟೀಲ ದೇವಂತಗಿ, ಮಲ್ಲಿಕಾರ್ಜುನ ಸಾವಳಗಿ, ಶಿವಪ್ರಕಾಶ ಹೀರಾ, ಸಿದ್ದು ಪಾಟೀಲ ಶಕಾಪೂರ, ಲಕ್ಷ್ಮೀಪುತ್ರ ಹೇಮಾಜಿ, ಈರಣ್ಣ ಮೇತ್ರಿ, ಶಿವಪುತ್ರ ನಡಗೇರಿ ಸೇರಿದಂತೆ ಇತರರು ಉಪಸ್ಥಿತರಿದ್ದರು.






