Aland | ಸಿಯುಕೆಯ ಮೂವರು ಸಂಶೋಧನಾ ವಿದ್ಯಾರ್ಥಿಗಳಿಗೆ ಪಿಎಚ್‌ಡಿ ಪದವಿ

ಆಳಂದ: ತಾಲೂಕಿನ ಕಡಗಂಚಿ ಬಳಿಯ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ (ಸಿಯುಕೆ) ಭೌತ ವಿಜ್ಞಾನಗಳ ಹಾಗೂ ಭೂ-ವಿಜ್ಞಾನ ನಿಕಾಯಗಳ ಮೂವರು ಸಂಶೋಧನಾ ವಿದ್ಯಾರ್ಥಿಗಳು ತಮ್ಮ ಸಂಶೋಧನಾ ಮಹಾಪ್ರಬಂಧಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ಹಿನ್ನೆಲೆಯಲ್ಲಿ ವಿಶ್ವವಿದ್ಯಾಲಯವು ಅವರಿಗೆ ಪಿಎಚ್.ಡಿ. ಪದವಿ ಘೋಷಿಸಿದೆ.
ಭೌತ ವಿಜ್ಞಾನಗಳ ನಿಕಾಯದ ಗಣಿತಶಾಸ್ತ್ರ ವಿಭಾಗದ ಸಂಶೋಧನಾ ವಿದ್ಯಾರ್ಥಿನಿ ಅತಿರಾ ವಿ.ಎಸ್. ಅವರು “ಇನ್ವೆಸ್ಟಿಗೇಷನ್ ಆನ್ ಕಂಟ್ರೋಲ್ಯಾಬಿಲಿಟಿ ಆ್ಯಂಡ್ ಅಬ್ಸರವ್ಯಾಬಿಲಿಟಿ ಪ್ರಾಪರ್ಟಿಸ್ ಇನ್ ಎ ಕ್ಲಾಸ್ ಆಫ್ ಹೆಟೆರೋಜೀನಿಯಸ್ ಮಲ್ಟಿ ಏಜೆಂಟ್ ಸಿಸ್ಟಮ್ಸ್” ವಿಷಯದ ಕುರಿತು ಸಲ್ಲಿಸಿದ ಮಹಾಪ್ರಬಂಧಕ್ಕೆ ಪಿಎಚ್.ಡಿ. ಪದವಿ ಪಡೆದಿದ್ದಾರೆ. ಗಣಿತಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಪ್ರೊ. ಜಿ. ಜನಾರ್ಧನ ರೆಡ್ಡಿ ಅವರ ಮಾರ್ಗದರ್ಶನದಲ್ಲಿ ಅವರು ಸಂಶೋಧನೆ ನಡೆಸಿದ್ದರು.
ಭೂ-ವಿಜ್ಞಾನ ನಿಕಾಯದ ಭೂಗೋಳಶಾಸ್ತ್ರ ವಿಭಾಗದ ಸಂಶೋಧನಾ ವಿದ್ಯಾರ್ಥಿನಿ ಇರ್ಷಾದ ರ‍್ಯಾಲ್ ಅವರು “ಅಸೆಸ್ಮೆಂಟ್ ಆಫ್ ಸ್ಪೇಸ್ ಆ್ಯಂಡ್ ಚಾಲೆಂಜಸ್ ಇನ್ ಸಾಲಿಡ್ ವೇಸ್ಟ್ ಮ್ಯಾನೇಜ್ಮೆಂಟ್ ಇನ್ ಕಲಬುರಗಿ ಸಿಟಿ ಯೂಸಿಂಗ್ ಜಿಐಎಸ್” ವಿಷಯದ ಕುರಿತು ಸಲ್ಲಿಸಿದ ಮಹಾಪ್ರಬಂಧಕ್ಕೆ ಪಿಎಚ್.ಡಿ. ಪದವಿ ಪಡೆದಿದ್ದಾರೆ. ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಬಿ. ಮಹಾಲಿಂಗಂ ಅವರ ಮಾರ್ಗದರ್ಶನದಲ್ಲಿ ಅವರು ಸಂಶೋಧನೆ ಕೈಗೊಂಡಿದ್ದರು.
ಇದೇ ವಿಭಾಗದ ಸಂಶೋಧನಾ ವಿದ್ಯಾರ್ಥಿ ಹರೆಕೃಷ್ಣ ಮನ್ನಾ ಅವರು “ಚಾಲೆಂಜಸ್ ಆಫ್ ಅರ್ಬನ್ ಲ್ಯಾಂಡ್‌ಸ್ಕೇಪ್ ಮಾರ್ಫಾಲಜಿ ಆ್ಯಂಡ್ ಇಟ್ಸ್ ಅಸೋಸಿಯೇಷನ್ ವಿತ್ ಅರ್ಬನ್ ಎನ್ವಿರಾನ್‌ಮೆಂಟ್, ಹೆಲ್ತ್ ಆ್ಯಂಡ್ ವೆಲ್‌ಬೀಯಿಂಗ್: ಎ ಕೇಸ್ ಸ್ಟಡಿ ಆಫ್ ಆನ್ ಇಂಡಸ್ಟ್ರಿಯಲ್ ಸಿಟಿ–ಅಸನ್ಸೋಲ್, ವೆಸ್ಟ್ ಬೆಂಗಾಲ್” ವಿಷಯದ ಕುರಿತು ಸಲ್ಲಿಸಿದ ಮಹಾಪ್ರಬಂಧಕ್ಕೆ ಪಿಎಚ್.ಡಿ. ಪದವಿ ಪಡೆದಿದ್ದಾರೆ. ಭೂಗೋಳಶಾಸ್ತ್ರ ವಿಭಾಗದ ಸಹ ಪ್ರಾಧ್ಯಾಪಕ ಡಾ. ಸಂಜಿತ್ ಸರ್ಕಾರ ಅವರ ಮಾರ್ಗದರ್ಶನದಲ್ಲಿ ಸಂಶೋಧನೆ ನಡೆಸಿದ್ದರು.
ಪಿಎಚ್.ಡಿ. ಪದವಿ ಪಡೆದ ಮೂವರು ಸಂಶೋಧನಾ ವಿದ್ಯಾರ್ಥಿಗಳು ಹಾಗೂ ಅವರ ಮಾರ್ಗದರ್ಶಕರನ್ನು ಸಿಯುಕೆಯ ಕುಲಪತಿ ಪ್ರೊ. ಬಟ್ಟು ಸತ್ಯನಾರಾಯಣ ಅಭಿನಂದಿಸಿದ್ದಾರೆ. ಸಂಶೋಧನಾ ಕ್ಷೇತ್ರದಲ್ಲಿ ಮತ್ತಷ್ಟು ಸಾಧನೆ ಮಾಡುವುದರೊಂದಿಗೆ ಶೈಕ್ಷಣಿಕ ಹಾಗೂ ವೃತ್ತಿಪರ ಜೀವನದಲ್ಲಿ ಯಶಸ್ಸು ಗಳಿಸಲಿ ಎಂದು ಶುಭ ಹಾರೈಸಿದ್ದಾರೆ.






