Aland | ಉದ್ಯೋಗ ಯಶಸ್ಸಿಗೆ ಪಠ್ಯಜ್ಞಾನ ಮಾತ್ರವಲ್ಲ, ಮೃದು ಕೌಶಲ್ಯವೂ ಅಗತ್ಯ: ಸಿಯುಕೆ ಕುಲಪತಿ

ಆಳಂದ : ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಪದವಿ ಅಥವಾ ಅಂಕಗಳು ಮಾತ್ರ ಯಶಸ್ಸಿನ ಮಾನದಂಡವಲ್ಲ. ಸಂವಹನ, ನಾಯಕತ್ವ, ತಂಡದೊಂದಿಗೆ ಕಾರ್ಯನಿರ್ವಹಣೆ ಹಾಗೂ ಸಮಸ್ಯೆ ಪರಿಹಾರ ಕೌಶಲ್ಯಗಳನ್ನು ಬೆಳೆಸಿಕೊಂಡಾಗಲೇ ವಿದ್ಯಾರ್ಥಿಗಳು ಉದ್ಯೋಗ ಕ್ಷೇತ್ರದಲ್ಲಿ ಯಶಸ್ಸು ಸಾಧಿಸಬಹುದು ಎಂದು ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ (ಸಿಯುಕೆ) ಕುಲಪತಿ ಪ್ರೊ. ಬಟ್ಟು ಸತ್ಯನಾರಾಯಣ ಹೇಳಿದರು.
ವಿಶ್ವ ಯುವ ಕೌಶಲ್ಯ ದಿನ–2026 ಅಂಗವಾಗಿ “ಭವಿಷ್ಯಕ್ಕಾಗಿ ಕೌಶಲ್ಯಗಳು” ಧ್ಯೇಯದಡಿ ಸಿಯುಕೆಯಲ್ಲಿ ಆಯೋಜಿಸಿದ್ದ “ಧ್ವನಿ, ಕ್ರಿಯಾಪದ ಮತ್ತು ದೃಶ್ಯಗಳು: ಭಾಷೆ ಮತ್ತು ಮೃದು ಕೌಶಲ್ಯಗಳು” ವಿಷಯದ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಶೈಕ್ಷಣಿಕ ಸಾಧನೆಯ ಜೊತೆಗೆ ಸಂವಹನ, ಸಮಯ ನಿರ್ವಹಣೆ, ಸೃಜನಶೀಲತೆ, ಹೊಂದಾಣಿಕೆ, ಸಹಾನುಭೂತಿ ಹಾಗೂ ನಾಯಕತ್ವದಂತಹ ಗುಣಗಳನ್ನು ವಿದ್ಯಾರ್ಥಿಗಳು ಬೆಳೆಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ವಿಶ್ವವಿದ್ಯಾಲಯದ ಸಾಫ್ಟ್ ಸ್ಕಿಲ್ ಡೆವಲಪ್‌ಮೆಂಟ್ ಸೆಂಟರ್‌ನ ತರಬೇತಿಗಳನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಸಾಫ್ಟ್ ಸ್ಕಿಲ್ ಡೆವಲಪ್‌ಮೆಂಟ್ ಸೆಂಟರ್ ನಿರ್ದೇಶಕಿ ಡಾ. ಸುಷ್ಮಾ ಎಚ್. ಮಾತನಾಡಿ, ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನ ಹಾಗೂ ಉದ್ಯೋಗಾರ್ಹತೆ ಹೆಚ್ಚಿಸುವ ಉದ್ದೇಶದಿಂದ ವಿವಿಧ ತರಬೇತಿ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ ಎಂದರು.
ಮಾನವಿಕ ಮತ್ತು ಭಾಷಾ ನಿಕಾಯದ ಡೀನ್ ಪ್ರೊ. ವಿಕ್ರಮ್ ವಿಸಾಜಿ, ನಿರಂತರ ಓದು ಮತ್ತು ಅಭ್ಯಾಸದಿಂದ ಭಾಷಾ ಪ್ರಾವೀಣ್ಯತೆ ವೃದ್ಧಿಯಾಗುತ್ತದೆ ಎಂದು ತಿಳಿಸಿದರು. ಸಮಾಜ ಮತ್ತು ವರ್ತನಾ ವಿಜ್ಞಾನ ನಿಕಾಯದ ಡೀನ್ ಪ್ರೊ. ಪವಿತ್ರಾ ಆಲೂರ್, ಜೀವನಪರ್ಯಂತ ಕಲಿಕೆಯ ಮನೋಭಾವ ಬೆಳೆಸಿಕೊಳ್ಳುವಂತೆ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಕಾರ್ಯಾಗಾರದಲ್ಲಿ ಭಾಷಾ ಪ್ರಾವೀಣ್ಯತೆ, ಸಾರ್ವಜನಿಕ ಭಾಷಣ, ವೃತ್ತಿಪರ ಸಂವಹನ, ತಂಡದೊಂದಿಗೆ ಕಾರ್ಯನಿರ್ವಹಣೆ ಹಾಗೂ ಉದ್ಯೋಗ ಕೌಶಲ್ಯಗಳ ಕುರಿತು ತಜ್ಞರ ಉಪನ್ಯಾಸ, ಸಂವಾದ ಹಾಗೂ ಪ್ರಾಯೋಗಿಕ ತರಬೇತಿ ನಡೆಯಿತು.
ಈ ಸಂದರ್ಭದಲ್ಲಿ ಆಂಗ್ಲ ಮತ್ತು ವಿದೇಶಿ ಭಾಷಾ ವಿಭಾಗದ ಮುಖ್ಯಸ್ಥ ಪ್ರೊ. ಬಸವರಾಜ ಡೋಣೂರ ಸೇರಿದಂತೆ ವಿವಿಧ ನಿಕಾಯಗಳ ಡೀನರು, ವಿಭಾಗಗಳ ಮುಖ್ಯಸ್ಥರು, ಅಧ್ಯಾಪಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.






