Aland | ದೀಪಾವಳಿವರೆಗೆ ಕಬ್ಬಿನ ಬೆಳೆಗಳಿಗೆ ಪ್ರತಿದಿನ 8ರಿಂದ 10 ಗಂಟೆ ನೀರು ಹರಿಸಲು ಸುಭಾಷ್ ಗುತ್ತೇದಾರ ಮನವಿ

ಆಳಂದ: ದೀಪಾವಳಿ ಹಬ್ಬದವರೆಗೆ ಅಮರ್ಜಾ ಜಲಾಶಯದ ವ್ಯಾಪ್ತಿಯ ಕಬ್ಬಿನ ಬೆಳೆಗಳಿಗೆ ಪ್ರತಿದಿನ ಕನಿಷ್ಠ 8ರಿಂದ 10 ಗಂಟೆಗಳ ಕಾಲ ನೀರು ಹರಿಸಲು ಕ್ರಮ ಕೈಗೊಳ್ಳುವಂತೆ ಮಾಜಿ ಶಾಸಕ ಸುಭಾಷ್ ಆರ್.ಗುತ್ತೇದಾರ ಅವರು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದ್ದಾರೆ.
ಈ ಕುರಿತು ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿರುವ ಅವರು, ಕಲಬುರಗಿ ಜಿಲ್ಲೆಯ ಆಳಂದ ತಾಲೂಕು ಸೇರಿದಂತೆ ಅಮರ್ಜಾ ಜಲಾಶಯದ ನೀರಾವರಿ ವ್ಯಾಪ್ತಿಯಲ್ಲಿ ರೈತರು ಹೆಚ್ಚಿನ ಪ್ರಮಾಣದಲ್ಲಿ ಕಬ್ಬು ಬೆಳೆದಿದ್ದಾರೆ. ಪ್ರಸ್ತುತ ಕಬ್ಬಿನ ಬೆಳೆ ಬೆಳವಣಿಗೆಯ ನಿರ್ಣಾಯಕ ಹಂತದಲ್ಲಿದ್ದು, ಸಮರ್ಪಕವಾಗಿ ನೀರು ಪೂರೈಕೆಯಾಗದಿದ್ದರೆ ಬೆಳೆ ಒಣಗುವ ಹಾಗೂ ಇಳುವರಿ ಕುಂಠಿತಗೊಳ್ಳುವ ಆತಂಕ ರೈತರನ್ನು ಕಾಡುತ್ತಿದೆ ಎಂದು ತಿಳಿಸಿದ್ದಾರೆ.
ಈಗಾಗಲೇ ಮಳೆಯ ಕೊರತೆ ಹಾಗೂ ಕೃಷಿ ಚಟುವಟಿಕೆಗಳಿಗೆ ಸಂಬಂಧಿಸಿದ ವಿವಿಧ ಸಮಸ್ಯೆಗಳಿಂದ ರೈತರು ಸಂಕಷ್ಟ ಎದುರಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಕಬ್ಬಿನ ಬೆಳೆಗೆ ಅಗತ್ಯ ಪ್ರಮಾಣದ ನೀರು ದೊರೆಯದಿದ್ದರೆ ರೈತರು ಆರ್ಥಿಕ ನಷ್ಟ ಅನುಭವಿಸಬೇಕಾಗುತ್ತದೆ. ಆದ್ದರಿಂದ, ವಿಶೇಷವಾಗಿ ದೀಪಾವಳಿ ಹಬ್ಬದವರೆಗೆ ಕಬ್ಬಿನ ಬೆಳೆಗಳಿಗೆ ನಿರಂತರವಾಗಿ ಅಗತ್ಯ ಪ್ರಮಾಣದ ನೀರು ಪೂರೈಸುವುದು ಅತ್ಯಂತ ಅವಶ್ಯಕವಾಗಿದೆ ಎಂದು ಅವರು ಹೇಳಿದ್ದಾರೆ.
ರೈತರ ಹಿತದೃಷ್ಟಿಯಿಂದ ಅಮರ್ಜಾ ಜಲಾಶಯದ ವ್ಯಾಪ್ತಿಯ ಕಬ್ಬಿನ ಬೆಳೆಗಳಿಗೆ ದೀಪಾವಳಿ ಹಬ್ಬದವರೆಗೆ ಪ್ರತಿದಿನ ಕನಿಷ್ಠ 8ರಿಂದ 10 ಗಂಟೆಗಳ ಕಾಲ ನೀರು ಹರಿಸುವಂತೆ ಸಂಬಂಧಪಟ್ಟ ನೀರಾವರಿ ಇಲಾಖೆಯ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಬೇಕು ಎಂದು ಮನವಿ ಮಾಡಿದ್ದಾರೆ.
ಅಲ್ಲದೆ, ನೀರು ಪೂರೈಕೆಯಲ್ಲಿ ಯಾವುದೇ ವ್ಯತ್ಯಯವಾಗದಂತೆ ಅಗತ್ಯ ಕ್ರಮ ಕೈಗೊಂಡು ರೈತರ ಬೆಳೆಗಳನ್ನು ಸಂರಕ್ಷಿಸಲು ಜಿಲ್ಲಾಡಳಿತ ತುರ್ತು ಗಮನಹರಿಸಬೇಕು. ರೈತರ ಕೃಷಿ ಬದುಕು ಹಾಗೂ ಆರ್ಥಿಕ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ತಮ್ಮ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿ, ಕೂಡಲೇ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸುಭಾಷ್ ಆರ್. ಗುತ್ತೇದಾರ ಅವರು ಜಿಲ್ಲಾಧಿಕಾರಿಗಳನ್ನು ಆಗ್ರಹಿಸಿದ್ದಾರೆ.






