Aland | ಧರ್ಮಸ್ಥಳ ಸಂಸ್ಥೆಯಿoದ ಸಾವಳೇಶ್ವರ ಶಾಲೆಯಲ್ಲಿ ಸಸಿನೆಡುವ ಕಾರ್ಯಕ್ರಮ
ಪರಿಸರ ಸಂರಕ್ಷಣೆಗೆ ವಿದ್ಯಾರ್ಥಿಗಳು ಮುಂಚೂಣಿಗೆ ಬರಬೇಕು: ಓಂಕೇಶ್

ಆಳಂದ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ (ರಿ) ತಾಲೂಕು ಶಾಖೆಯ ವತಿಯಿಂದ ಸಾವಳೇಶ್ವರ ಮುರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಸಾಮಾಜಿಕ ಅರಣ್ಯೀಕರಣ ಹಾಗೂ ಗಿಡನಾಟಿ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ಸಂಸ್ಥೆಯ ತಾಲೂಕು ಯೋಜನಾಧಿಕಾರಿ ಓಂಕೇಶ್ ಮಾತನಾಡಿ, ಪರಿಸರ ರಕ್ಷಣೆ ಕೇವಲ ಸರ್ಕಾರದ ಜವಾಬ್ದಾರಿಯಲ್ಲ, ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಿದೆ ಎಂದು ಹೇಳಿದರು.
ಪ್ರಸ್ತುತ ಪರಿಸರ ಮಾಲಿನ್ಯ, ಅರಣ್ಯ ನಾಶ ಹಾಗೂ ಹವಾಮಾನ ವೈಪರೀತ್ಯಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಪ್ರತಿಯೊಬ್ಬರೂ ಪರಿಸರದ ಬಗ್ಗೆ ಕಾಳಜಿ ವಹಿಸಬೇಕು. ಮರಗಳು ಶುದ್ಧ ಗಾಳಿ, ಜೀವಜಲ ಹಾಗೂ ಮಳೆಯ ಸಮತೋಲನ ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಅರಣ್ಯ ನಾಶದಿಂದ ಪ್ರಕೃತಿ ವಿಕೋಪಗಳು ಹೆಚ್ಚಾಗುತ್ತಿದ್ದು, ಪರಿಸರ ಸಂರಕ್ಷಣೆಯಲ್ಲಿ ವಿದ್ಯಾರ್ಥಿಗಳು ಮುಂಚೂಣಿಗೆ ಬರಬೇಕು ಎಂದರು.
ಶಾಲಾ ಹಂತದಲ್ಲಿಯೇ ವಿದ್ಯಾರ್ಥಿಗಳಿಗೆ ಸಸಿ ನೆಡುವುದು ಹಾಗೂ ಅವುಗಳನ್ನು ಪೋಷಿಸುವ ಅಭ್ಯಾಸ ಬೆಳೆಸಿದರೆ ಪರಿಸರ ಸಂರಕ್ಷಣೆಯ ಮಹತ್ವವನ್ನು ಜೀವನದುದ್ದಕ್ಕೂ ಅಳವಡಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ಜನಜಾಗೃತಿ ಸದಸ್ಯ ಅಪ್ಪಸಾಹೇಬ ತೀರ್ಥೆ ಮಾತನಾಡಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ವಿವಿಧ ಕ್ಷೇತ್ರಗಳಲ್ಲಿ ಸಾಮಾಜಿಕ ಕಾರ್ಯಗಳನ್ನು ನಡೆಸುತ್ತಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ವಸತಿ ಶಾಲೆಯ ಪ್ರಾಂಶುಪಾಲ ಮಂಜುನಾಥ ಶೆಟ್ಟಿ ಮಾತನಾಡಿ, ಧರ್ಮಸ್ಥಳ ಯೋಜನೆಯ ಕಾರ್ಯಕ್ರಮಗಳು ಜನಹಿತಕ್ಕಾಗಿ ನಡೆಯುತ್ತಿದ್ದು, ಶಿಕ್ಷಣ ಇಲಾಖೆಗೆ ಸಂಸ್ಥೆ ಹಲವು ರೀತಿಯಲ್ಲಿ ಸಹಕಾರ ನೀಡುತ್ತಿದೆ. ಶಾಲೆಗೆ ನೀಡಿರುವ ಹಣ್ಣಿನ ಗಿಡಗಳನ್ನು ಮಕ್ಕಳೊಂದಿಗೆ ಸೇರಿ ಕಾಳಜಿಯಿಂದ ಬೆಳೆಸುವುದಾಗಿ ಹೇಳಿದರು.
ಕಾರ್ಯಕ್ರಮದಲ್ಲಿ ಗ್ರಾಪಂ ಮಾಜಿ ಉಪಾಧ್ಯಕ್ಷ ಶಿವಲಿಂಗಪ್ಪ, ಮುಖಂಡ ಸುಭಾಷ್ ಗ್ರಾಮದ, ಸಂಸ್ಥೆಯ ಕೃಷಿ ಮೇಲ್ವಿಚಾರಕ ಸಂತೋಷ ರಡ್ಡಿ, ವಲಯ ಮೇಲ್ವಿಚಾರಕ ವಿರೇಶ್ ಕೋನೆ, ಸೇವಾ ಪ್ರತಿನಿಧಿ ಅವ್ವಮ್ಮ, ಶಾಲೆಯ ಸಿಬ್ಬಂದಿ ವರ್ಗದವರು ಮತ್ತು ಮುದ್ದು ಮಕ್ಕಳು ಉಪಸ್ಥಿತರಿದ್ದರು.






