Aland | ಯುವಕರು 371(ಜೆ) ಮೀಸಲಾತಿ ಸೌಲಭ್ಯ ಸದುಪಯೋಗಪಡಿಸಿಕೊಳ್ಳಿ: ಚನ್ನಬಸಪ್ಪ ಮುದೋಳ
90 ದಿನಗಳ ಉಚಿತ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಶಿಬಿರ ಸಮಾರೋಪ

ಆಳಂದ: ಶಿಕ್ಷಣದ ಅಭಿವೃದ್ಧಿಗೆ ಶಾಸಕ ಬಿ.ಆರ್. ಪಾಟೀಲ ಹಾಗೂ ಕೆಎಂಎಫ್ ಅಧ್ಯಕ್ಷ ಆರ್.ಕೆ. ಪಾಟೀಲ ತೋರುತ್ತಿರುವ ಕಾಳಜಿ ಮತ್ತು ಆಸಕ್ತಿ ಶ್ಲಾಘನೀಯವಾಗಿದೆ. ಕಲ್ಯಾಣ ಕರ್ನಾಟಕದ ಯುವಕರು ಸಂವಿಧಾನದ 371(ಜೆ) ಅಡಿಯಲ್ಲಿ ದೊರೆಯುವ ಶೈಕ್ಷಣಿಕ ಹಾಗೂ ಉದ್ಯೋಗ ಮೀಸಲಾತಿ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಂಡು ಉನ್ನತ ಶಿಕ್ಷಣ ಮತ್ತು ಸರ್ಕಾರಿ ಉದ್ಯೋಗ ಪಡೆಯಲು ಮುಂದಾಗಬೇಕು ಎಂದು ಕಲಬುರಗಿ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಚನ್ನಬಸಪ್ಪ ಮುದೋಳ ಹೇಳಿದರು.
ಪಟ್ಟಣದ ವೀರಶೈವ ಲಿಂಗಾಯತ ಸಭಾಂಗಣದಲ್ಲಿ ಸಮತಾ ಲೋಕ ಶಿಕ್ಷಣ ಸಮಿತಿ ವತಿಯಿಂದ ಆಯೋಜಿಸಿದ್ದ 90 ದಿನಗಳ ಉಚಿತ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಶಿಬಿರದ ಸಮಾರೋಪ ಹಾಗೂ ಸಮಾಗಮ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸುಮಾರು 350ಕ್ಕೂ ಹೆಚ್ಚು ವಿದ್ಯಾರ್ಥಿಗಳು ತರಬೇತಿಯಲ್ಲಿ ಭಾಗವಹಿಸಿರುವುದು ಸಂತಸದ ಸಂಗತಿ. ಇಂತಹ ಪ್ರಯತ್ನಗಳು ಗ್ರಾಮೀಣ ಭಾಗದ ಬಡ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಹೊಸ ಭರವಸೆ ನೀಡುತ್ತವೆ. ಯುವಕರು ಮೊಬೈಲ್‌ನ್ನು ಕೇವಲ ಮನರಂಜನೆಗೆ ಬಳಸದೆ ಜ್ಞಾನ ಸಂಪಾದನೆ ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳ ಸಿದ್ಧತೆಗೆ ಬಳಸಿಕೊಳ್ಳಬೇಕು. ರೀಲ್ಸ್ ನೋಡುವುದರಲ್ಲಿ ಸಮಯ ವ್ಯರ್ಥ ಮಾಡದೆ ತಮ್ಮ ಸಾಧನೆಯ ಇತಿಹಾಸವನ್ನು ತಾವೇ ಬರೆಯಬೇಕು ಎಂದು ಕರೆ ನೀಡಿದರು.
ಕಲಬುರಗಿ ಜಿಲ್ಲೆಯ ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ಸುಧಾರಣೆ ಕಂಡುಬರುತ್ತಿರುವುದು ಆಶಾದಾಯಕವಾಗಿದೆ. ಶಿಕ್ಷಕರು ಭವಿಷ್ಯದ ಸಮಾಜವನ್ನು ನಿರ್ಮಿಸುವ ಶಿಲ್ಪಿಗಳಾಗಿದ್ದಾರೆ. ಸರ್ಕಾರಿ ಶಾಲೆಗಳ ಅಭಿವೃದ್ಧಿಗಾಗಿ ಜಮೀನು, ಕೊಳವೆಬಾವಿ ಸೇರಿದಂತೆ ವಿವಿಧ ಸೌಲಭ್ಯಗಳನ್ನು ದೇಣಿಗೆಯಾಗಿ ನೀಡಿದ ದಾನಿಗಳ ಸೇವೆ ಅಭಿನಂದನಾರ್ಹವಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಕಾರ್ಯದರ್ಶಿ ಹಾಗೂ ಕೆಎಂಎಫ್ ಅಧ್ಯಕ್ಷ ಆರ್.ಕೆ. ಪಾಟೀಲ ಮಾತನಾಡಿ, ನಮ್ಮ ಭಾಗದ ಯುವಕರು ಉದ್ಯೋಗ ತರಬೇತಿಗಾಗಿ ಬೆಂಗಳೂರು, ಹುಬ್ಬಳ್ಳಿ, ಧಾರವಾಡ ಹಾಗೂ ವಿಜಯಪುರಕ್ಕೆ ತೆರಳುತ್ತಿರುವುದನ್ನು ಗಮನಿಸಿ, ಸ್ಥಳೀಯವಾಗಿಯೇ ನುರಿತ ಸಂಪನ್ಮೂಲ ತರಬೇತುದಾರರಿಂದ ಉಚಿತ ಸ್ಪರ್ಧಾತ್ಮಕ ಪರೀಕ್ಷಾ ಶಿಬಿರ ಆಯೋಜಿಸಲಾಗಿದೆ. ಪದವಿ ಮುಗಿಸಿದ ಯುವಕರು ಮೊಬೈಲ್ ವ್ಯಾಮೋಹ ಬಿಟ್ಟು ಸ್ಪರ್ಧಾತ್ಮಕ ಪರೀಕ್ಷೆ ಹಾಗೂ ಕೌಶಲ್ಯ ತರಬೇತಿಗಳತ್ತ ಗಮನಹರಿಸಬೇಕು. ಯುವಕರಿಗೆ ನಮ್ಮ ಸಂಸ್ಥೆ ಸದಾ ಸಹಕಾರ ನೀಡಲಿದೆ. ತಾಲೂಕಿನ ಪ್ರತಿಯೊಂದು ಕುಟುಂಬದಿಂದಲೂ ಒಬ್ಬರಾದರೂ ಸರ್ಕಾರಿ ನೌಕರರಾಗಬೇಕು ಎಂಬುದು ನಮ್ಮ ಆಶಯವಾಗಿದೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳಲ್ಲಿ ಓದುವ ಹವ್ಯಾಸ ಬೆಳೆಸುವ ಹಾಗೂ ಪ್ರಚಲಿತ ವಿದ್ಯಮಾನಗಳ ಜ್ಞಾನ ಹೆಚ್ಚಿಸುವ ಉದ್ದೇಶದಿಂದ ಮೂರು ತಿಂಗಳ ಕಾಲ ಉಚಿತವಾಗಿ ‘ವಾರ್ತಾ ಭಾರತಿ’ ದಿನಪತ್ರಿಕೆ ವಿತರಿಸಿ ಶೈಕ್ಷಣಿಕ ಪ್ರೋತ್ಸಾಹ ನೀಡಿದ ಪತ್ರಕರ್ತ ಮಹೇಶ್ ಸಾಖರೆ ಅವರನ್ನು ಸಂಸ್ಥೆಯ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ವೇದಿಕೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಗೋವರ್ಧನ, ನೌಕರರ ಸಂಘದ ಅಧ್ಯಕ್ಷ ಸತೀಶ ಸನ್ಮುಖ ಹಾಗೂ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಸಿದ್ಧರಾಮ ಪ್ಯಾಟಿ ಉಪಸ್ಥಿತರಿದ್ದರು. ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವಿ. ರಂಗಸ್ವಾಮಿ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಮೋದ ಪಾಂಚಾಳ ನಿರೂಪಿಸಿದರು. ಸಿದ್ಧಾರ್ಥ ಹರಸೂರ ವಂದಿಸಿದರು.
ಇದೇ ಸಂದರ್ಭದಲ್ಲಿ 2025–26ನೇ ಸಾಲಿನ ಸರ್ಕಾರಿ ಪ್ರೌಢಶಾಲೆಗಳ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಭಾಷಾವಾರು ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳು ಹಾಗೂ ಸಂಪನ್ಮೂಲ ಶಿಕ್ಷಕರಿಗೆ ಪ್ರಶಸ್ತಿ ಪತ್ರ ನೀಡಿ ಸನ್ಮಾನಿಸಲಾಯಿತು.






