ಆಳಂದ | ನ್ಯಾಯ ವಿಧಾನದಲ್ಲಿ ಹೊಸ ಕಾನೂನುಗಳ ಅರಿವು ಅಗತ್ಯ: ನ್ಯಾ.ಶ್ರೀಶಾನಂದ

ಕಲಬುರಗಿ: ಭಾರತೀಯ ಸಾಕ್ಷಿ ಅಧಿನಿಯಮ–2023 ಮತ್ತು “ಪಾರ್ಟಿಷನ್ ಇನ್ ಮೆಮೋಡಿಂ” ಕಾಯ್ದೆಗಳ ತಾತ್ಪರ್ಯವನ್ನು ನ್ಯಾಯಮೂರ್ತಿಗಳು ಮತ್ತು ನ್ಯಾಯವಾದಿಗಳು ಆಳವಾಗಿ ಅಧ್ಯಯನ ಮಾಡಿ, ಸಾಮಾಜಿಕ ನ್ಯಾಯವನ್ನು ಬಲಪಡಿಸಲು ಮತ್ತು ದೇಶದ ಕಾನೂನು ವ್ಯವಸ್ಥೆಗೆ ತಮ್ಮ ಕೊಡುಗೆ ನೀಡಬೇಕು ಎಂದು ಕಲಬುರಗಿಯ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಎಸ್.ಎಸ್. ಶ್ರೀಶಾನಂದ ಹೇಳಿದರು.
ಆಳಂದ ಪಟ್ಟಣದ ನ್ಯಾಯಾಲಯದ ವಕೀಲರ ಸಭಾಂಗಣದಲ್ಲಿ ಸೋಮವಾರ ಕರ್ನಾಟಕ ರಾಜ್ಯ ಬಾರ್ ಕೌನ್ಸಿಲ್ ಮತ್ತು ಸ್ಥಳೀಯ ವಕೀಲರ ಸಂಘದ ಆಶ್ರಯದಲ್ಲಿ ಮೂರು ದಿನಗಳ ಕಾನೂನು ಕಾರ್ಯಾಗಾರ ಸಮಾರೋಪ ಸಮಾರಂಭದಲ್ಲಿ ಸೋಮವಾರ ಅವರು ಮಾತನಾಡಿದರು.
ಭಾರತೀಯ ಸಾಕ್ಷಮ ಅಧಿನಿಯಮ– 2023 ಹೊಸದಾಗಿ ಕಾನೂನು ಜಾರಿಗೆ ಬರುವ ಮೂಲಕ ಸಾಕ್ಷ್ಯಗಳ ನಿರ್ವಹಣೆಗೆ ಮತ್ತು ಆಸ್ತಿ ವಿಭಜನೆಗೆ ಸ್ಪಷ್ಟತೆ, ನ್ಯಾಯ ಮತ್ತು ನಂಬಿಕೆಯನ್ನು ತಂದಿದೆ. ಹಳೆಯ ಕಾನೂನುಗಳ ಮಿತಿಗಳನ್ನು ಹೊಸ ಕಾನೂನು ಸರಿಪಡಿಸಿದ್ದು, ನೊಂದವರಿಗೆ ಆಶಾಕಿರಣವಾಗಿದೆ ಎಂದು ಅವರು ಹೇಳಿದರು.
ನ್ಯಾಯಮೂರ್ತಿಗಳು ಮತ್ತು ವಕೀಲರು ಕೇವಲ ಕಲಿಯುವುದಕ್ಕೆ ತೃಪ್ತರಾಗದೇ ಹೊಸ ಕಾನೂನುಗಳ ತಾಂತ್ರಿಕತೆಗಳನ್ನೂ ಅಧ್ಯಯನ ಮಾಡಿ, ನ್ಯಾಯವಿಧಾನದಲ್ಲಿ ಗುಣಮಟ್ಟದ ಸುಧಾರಣೆಗಾಗಿ ಶ್ರಮಿಸಬೇಕು, ಹಳೆಯ ನಿಯಮಗಳ ಅವ್ಯವಸ್ಥೆಗಳನ್ನು ಉದಾಹರಣೆಗಳೊಂದಿಗೆ ತೋರಿಸಿ, ಹೊಸ ನಿಯಮಗಳು ಹೇಗೆ ಪರಿಣಾಮಕಾರಿಯಾಗಿವೆ ಎಂಬುದನ್ನೂ ವಿವರಿಸಿದರು.
ಭಾರತೀಯ ದಂಡ ಸಂಹಿತೆ ಮತ್ತು ಗೃಹ ಭದ್ರತಾ ಸಂಹಿತೆಯ ಸ್ಥಾನದಲ್ಲಿ ಬಂದಿರುವ ಭಾರತೀಯ ನ್ಯಾಯ ಸಂಹಿತೆ ಮತ್ತು ಭಾರತೀಯ ನ್ಯಾಯ ಪ್ರಕ್ರಿಯೆ ಸಂಹಿತೆ ಕಾನೂನುಗಳ ಬಗ್ಗೆಯೂ ವಿವರಿಸಲಾಯಿತು.
ಕಾರ್ಯಕ್ರಮದಲ್ಲಿ ಜಿಲ್ಲಾ ನ್ಯಾಯಾಧೀಶ ಜಿ.ಎಲ್.ಲಕ್ಷ್ಮೀನಾರಾಯಣ, ಹಿರಿಯ ಶ್ರೇಣಿ ನ್ಯಾಯಾಧೀಶೆ ಸುಮನ್ ಚಿತ್ತರಗಿ, ಸಂಘದ ಕಾರ್ಯದರ್ಶಿ ಬಿ.ಟಿ.ಸಿಂಧೆ ಉಪಸ್ಥಿತರಿದ್ದರು. ತಾಲೂಕು ನ್ಯಾಯವಾದಿ ಸಂಘದ ಅಧ್ಯಕ್ಷ ಕಮಲ್ ರಾಠೋಡ ಅಧ್ಯಕ್ಷತೆ ವಹಿಸಿದರು.
ನ್ಯಾಯವಾದಿ ಶಿವಶಂಕರ ಮುನೋಳಿ ಕಾರ್ಯಕ್ರಮ ನಿರೂಪಿಸಿದರು.
ಕಾರ್ಯಾಗಾರದಲ್ಲಿ ತಾಲೂಕು ಸೇರಿದಂತೆ ಜಿಲ್ಲೆಯ ಹಿರಿಯ, ಕಿರಿಯ ನ್ಯಾಯವಾದಿಗಳು ಪಾಲ್ಗೊಂಡಿದ್ದರು. ಮೂರು ದಿನಗಳ ಕಾಲ ನಡೆದ ವಿವಿಧ ವಿಷಯಗಳ ಗಂಭೀರ ಚರ್ಚೆ ನೆಡದವು.







