ಆಳಂದ | ವಿಶ್ವಗುರು ಬಸವಣ್ಣನವರ ಜಯಂತಿ

ಆಳಂದ : ಬಸವಣ್ಣನವರ ವಚನಗಳು ಸಮಾಜದ ಪರಿವರ್ತನೆಗೆ ದಿಕ್ಕು ತೋರಿದ ಅಮೂಲ್ಯ ಸಂದೇಶಗಳನ್ನು ಒಳಗೊಂಡಿದ್ದು, ಯುವಜನತೆ ಅವುಗಳನ್ನು ಅಧ್ಯಯನ ಮಾಡಿ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹಿರಿಯ ಕ್ಷೇತ್ರ ಶಿಕ್ಷಣಾಧಿಕಾರಿ ವಿ.ರಂಗಸ್ವಾಮಿ ಶೆಟ್ಟಿ ಹೇಳಿದರು.
ಪಟ್ಟಣದ ಹೊರವಲಯದ ತಾಲೂಕು ಆಡಳಿತ ಸೌಧದಲ್ಲಿ ಆಯೋಜಿಸಿದ್ದ ವಿಶ್ವಗುರು ಬಸವಣ್ಣನವರ ಜಯಂತಿ ಕಾರ್ಯಕ್ರಮದಲ್ಲಿ ಮುಖ್ಯ ಉಪನ್ಯಾಸಕರಾಗಿ ಅವರು ಮಾತನಾಡಿದರು.
ಬಸವಣ್ಣನವರ ವಚನಗಳಲ್ಲಿ ಸಮಾಜದ ಅಂಕು-ಡೊಂಕುಗಳನ್ನು ತಿದ್ದುವ ಶಕ್ತಿ ಅಡಗಿದೆ. “ಕಾಯಕವೇ ಕೈಲಾಸ” ಎಂಬ ಬಸವಣ್ಣನವರ ಪರಿಕಲ್ಪನೆ ವಿಶ್ವಮಾನ್ಯವಾಗಿದ್ದು, ಶ್ರಮದ ಮಹತ್ವವನ್ನು ಸಾರುತ್ತದೆ. ಅನುಭವ ಮಂಟಪದ ಮೂಲಕ ಪ್ರಜಾಪ್ರಭುತ್ವದ ಮೂಲಭೂತ ಆಲೋಚನೆಗೆ ಬಸವಣ್ಣನವರು ಬುನಾದಿ ಹಾಕಿದ ಮಹಾನ್ ಚಿಂತಕರಾಗಿದ್ದಾರೆ ಎಂದು ಅವರು ಹೇಳಿದರು.
ಕಾರ್ಯಕ್ರಮಕ್ಕೆ ಸಾನ್ನಿಧ್ಯ ವಹಿಸಿದ್ದ ಸ್ಥಳೀಯ ಹಿರೇಮಠದ ಶ್ರೀ ಸಿದ್ಧೇಶ್ವರ ಶಿವಾಚಾರ್ಯರು ಮಾತನಾಡಿದರು. ವೇದಿಕೆಯಲ್ಲಿ ಪುರಸಭೆ ಮುಖ್ಯಾಧಿಕಾರಿ ಸಂಗಮೇಶ ಪನಶೆಟ್ಟಿ, ಸಮಾಜ ಅಧ್ಯಕ್ಷ ಶರಣಬಸಪ್ಪ ಪಾಟೀಲ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಲಾವಿದ ಶಿವಶರಣಪ್ಪ ಪೂಜಾರಿ ಅವರು ತಬಲಾ ಸಾಥಿ ಅಶೋಕ ಆಳಂದ ಅವರ ಸಹಕಾರದೊಂದಿಗೆ ವಚನ ಗಾಯನ ನಡೆಸಿ ಕಾರ್ಯಕ್ರಮಕ್ಕೆ ವಿಶೇಷ ಮೆರಗು ತಂದರು. ತಾಪಂ ಇಒ ಮಾನಪ್ಪ ಕಟ್ಟಿಮನಿ ಸ್ವಾಗತಿಸಿದರು. ಶಿಕ್ಷಕ ಕಲ್ಯಾಣಪ್ಪ ಬಿಜ್ಜರಗಿ ಕಾರ್ಯಕ್ರಮ ನಿರೂಪಿಸಿದರು.
ಇದಕ್ಕೂ ಮೊದಲು ತಾಲೂಕು ಆಡಳಿತ ಆವರಣದಲ್ಲಿನ ಬಸವೇಶ್ವರ ಹಾಗೂ ಡಾ.ಬಿ.ಆರ್. ಅಂಬೇಡ್ಕರ್ ಅವರ ಪ್ರತಿಮೆಗೆ ಮಾರ್ಲಾಪಣೆ ನಡೆಯಿತು.
ಬಿಸಿಎಂ ಅಧಿಕಾರಿ ನಾಗಪ್ಪ ನಾಗನೂರ, ಸಹಾಯಕ ಕೃಷಿ ನಿರ್ದೇಶಕ ತಿಪ್ಪೇಸ್ವಾಮಿ, ಗ್ರೇಡ್-2 ತಹಶೀಲ್ದಾರ್ ಬಿ.ಜಿ.ಕುದರಿ, ಸಮಾಜ ಕಲ್ಯಾಣಾಧಿಕಾರಿ ವಿಜಯಲಕ್ಷ್ಮಿ ಲಖಾನಿ ಹೋಳ್ಕರ್, ಭೂನೋಂದಣಿ ಅಧಿಕಾರಿ ರೂಪಾ ಪಾಟೀಲ, ಡಾ. ಯಲ್ಲಪ್ಪ ಇಂಗಳೆ ಹಾಗೂ ನಾಗರಿಕ ಮುಖಂಡ ಮೌಲಾ ಮುಲ್ಲಾ, ರೇವಣಸಿದ್ಧಪ್ಪ ನಾಗೂರೆ, ಶಿವುಪುತ್ರ ನಡಗೇರಿ, ವೀರಶೈವ ಮಹಾಸಭಾ ಉಪಾಧ್ಯಕ್ಷ ಶ್ರೀಶೈಲ ಖಜೂರಿ, ಸಿದ್ಧಗೌಡ ಪಾಟೀಲ ಮಗ್ಗಿ, ನ್ಯಾಯವಾದಿ ಬಾಬಾಸಾಹೇಬ ವಿ. ಪಾಟೀಲ, ಹಿರಿಯ ಬಾಬುರಾವ್ ಮಡ್ಡೆ, ಮಲ್ಲಪ್ಪ ಹತ್ತರಕಿ, ಶಂಕರರಾವ್ ದೇಶಮುಖ, ರಾಮ ಹತ್ತರಕಿ, ಮಹಾದೇವ ಹತ್ತಿ, ಸಿದ್ದು ಹಿರೋಳಿ, ಇಕ್ಬಾಲ ಬಿಲಗುಂದಿ ಸೇರಿದಂತೆ ವೀರಶೈವ ಲಿಂಗಾಯತ ಕಾರ್ಯಕರ್ತರು ನಾಗರಿಕರು ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.






