ಆಳಂದ ಬೈಪಾಸ್ ರಸ್ತೆ ಕಾಮಗಾರಿ ಅವೈಜ್ಞಾನಿಕ? ಸಾರ್ವಜನಿಕರಿಂದ ಆಕ್ಷೇಪ

ಆಳಂದ: ಪಟ್ಟಣದ ವಾಹನ ದಟ್ಟಣೆಗೆ ಶಾಶ್ವತ ಪರಿಹಾರ ಕಲ್ಪಿಸುವ ಉದ್ದೇಶದಿಂದ ಕೈಗೆತ್ತಿಕೊಳ್ಳಲಾಗಿರುವ ಬೈಪಾಸ್ ರಸ್ತೆ ಅಭಿವೃದ್ಧಿ ಕಾಮಗಾರಿ ಅವೈಜ್ಞಾನಿಕವಾಗಿ ನಡೆಯುತ್ತಿದ್ದು, ಯೋಜನೆಯ ಮೂಲ ಉದ್ದೇಶವೇ ಹಾಳಾಗುತ್ತಿದೆ ಎಂಬ ಆರೋಪಗಳು ಸಾರ್ವಜನಿಕ ವಲಯದಲ್ಲಿ ಕೇಳಿಬಂದಿವೆ.
ಹೊಸ ಚೆಕ್‌ಪೋಸ್ಟ್‌ನಿಂದ ಹನುಮಾನ ಅಗಸಿ ಹಳ್ಳದ ಮೂಲಕ ಎಚ್‌ಕೆಇ ಪದವಿ ಕಾಲೇಜು ಭಾಗಕ್ಕೆ ಸಂಪರ್ಕ ಕಲ್ಪಿಸುವ ಈ ರಸ್ತೆ, ಶ್ರೀರಾಮ ಮಾರುಕಟ್ಟೆ, ಮುಖ್ಯರಸ್ತೆ ಹಾಗೂ ಬಸ್ ನಿಲ್ದಾಣದ ವಾಹನ ದಟ್ಟಣೆಯನ್ನು ಕಡಿಮೆ ಮಾಡುವ ಪರ್ಯಾಯ ಮಾರ್ಗವಾಗಿ ರೂಪುಗೊಳ್ಳಬೇಕಿತ್ತು. ಆದರೆ ಕಾಮಗಾರಿ ಬಳಿಕ ರಸ್ತೆ ದ್ವಿಮುಖ ಸಂಚಾರಕ್ಕೆ ಅನುಕೂಲವಾಗುವ ಬದಲು ಇಕ್ಕಟ್ಟಿನ ಸಿಮೆಂಟ್ ರಸ್ತೆಯಾಗಿ ಮಾರ್ಪಟ್ಟಿದೆ ಎಂದು ಸ್ಥಳೀಯರು ದೂರಿದ್ದಾರೆ.
ಮುಖ್ಯಮಂತ್ರಿಗಳ ವಿಶೇಷ ಅನುದಾನದಡಿ ಸುಮಾರು 1.20 ಕೋಟಿ ರೂ. ವೆಚ್ಚದಲ್ಲಿ ಲೋಕೋಪಯೋಗಿ ಇಲಾಖೆ ಮೂಲಕ ಸುಮಾರು ಒಂದು ಕಿಲೋಮೀಟರ್ ಉದ್ದದ ರಸ್ತೆ ಅಭಿವೃದ್ಧಿ ಕಾಮಗಾರಿ ನಡೆಯುತ್ತಿದೆ. ಬಳಿರಾಮ ಬಂಗಲಾದಿಂದ ಹನುಮಾನ ಅಗಸಿ ಹಳ್ಳದವರೆಗೆ ರಸ್ತೆ ವಿಸ್ತರಣೆ ಹಾಗೂ ಸಿಮೆಂಟೀಕರಣ ಕಾಮಗಾರಿ ನಡೆಯುತ್ತಿದ್ದರೂ, ಅಗತ್ಯ ತಾಂತ್ರಿಕ ಮಾನದಂಡಗಳನ್ನು ಪಾಲಿಸಲಾಗಿಲ್ಲ ಎಂಬ ಆರೋಪ ಕೇಳಿಬಂದಿದೆ.
ದ್ವಿಮುಖ ಸಂಚಾರಕ್ಕೆ ತೊಂದರೆ :
ಮೂಲ ಯೋಜನೆಯ ಪ್ರಕಾರ ರಸ್ತೆ ದ್ವಿಮುಖ ವಾಹನ ಸಂಚಾರಕ್ಕೆ ಅನುಕೂಲವಾಗುವಷ್ಟು ಅಗಲದಲ್ಲಿ ನಿರ್ಮಾಣವಾಗಬೇಕಿತ್ತು. ಆದರೆ ರಸ್ತೆ ಸಮರ್ಪಕವಾಗಿ ವಿಸ್ತರಣೆಯಾಗದ ಕಾರಣ ಎರಡು ವಾಹನಗಳು ಎದುರುಬಂದಾಗ ಒಂದಕ್ಕೆ ದಾರಿ ಬಿಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ವಿಶೇಷವಾಗಿ ರಾತ್ರಿ ವೇಳೆ ದ್ವಿಚಕ್ರ ವಾಹನ ಸವಾರರಿಗೆ ಅಪಘಾತದ ಆತಂಕ ಹೆಚ್ಚಿದೆ ಎಂದು ಸಾರ್ವಜನಿಕರು ಅಭಿಪ್ರಾಯಪಟ್ಟಿದ್ದಾರೆ.
ಸೇತುವೆ, ಕಲ್ವರ್ಟ್ ಕಾಮಗಾರಿ ಅಪೂರ್ಣ :
ರಸ್ತೆಯ ಹಿಂಭಾಗದಲ್ಲಿರುವ ಹಳೆಯ ಸೇತುವೆಯ ಪುನರ್‌ನಿರ್ಮಾಣ ಕೈಗೆತ್ತಿಕೊಳ್ಳಲಾಗಿಲ್ಲ. ಜೊತೆಗೆ ಮಧ್ಯಭಾಗದಲ್ಲಿ ನಿರ್ಮಿಸಬೇಕಿದ್ದ ಎರಡು ಕಲ್ವರ್ಟ್ ಕಾಮಗಾರಿಗಳೂ ಪೂರ್ಣಗೊಂಡಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಹಳೆಯ ಅನುಭವದಿಂದ ಪಾಠ ಕಲಿತಿಲ್ಲವೇ? :
ಈ ಹಿಂದೆ ಇದೇ ರಸ್ತೆಗೆ ಸುಮಾರು 88 ಲಕ್ಷ ರೂ. ವೆಚ್ಚದಲ್ಲಿ ಡಾಂಬರ ರಸ್ತೆ ನಿರ್ಮಿಸಲಾಗಿತ್ತು. ಆದರೆ ಒಂದು ವರ್ಷ ಪೂರ್ಣಗೊಳ್ಳುವ ಮುನ್ನವೇ ರಸ್ತೆ ಹಾಳಾಗಿತ್ತು. ಇದೀಗ ಅದೇ ರಸ್ತೆಗೆ ಮತ್ತೆ 1.20 ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರ ಹಣ ಸಮರ್ಪಕವಾಗಿ ಬಳಕೆಯಾಗುತ್ತಿದೆಯೇ ಎಂಬ ಪ್ರಶ್ನೆ ಸಾರ್ವಜನಿಕರಲ್ಲಿ ಮೂಡಿದೆ.
ಬೈಪಾಸ್ ಭರವಸೆ ಇನ್ನೂ ಈಡೇರಿಲ್ಲ :
ಶಾಸಕ ಬಿ.ಆರ್. ಪಾಟೀಲ ಅವರು ಪಟ್ಟಣಕ್ಕೆ ಸುಸಜ್ಜಿತ ಬೈಪಾಸ್ ರಸ್ತೆ ನಿರ್ಮಿಸುವ ಭರವಸೆ ನೀಡಿದ್ದರೂ, ಅದು ಇನ್ನೂ ಕಾರ್ಯರೂಪಕ್ಕೆ ಬಂದಿಲ್ಲ. ಪ್ರಸ್ತುತ ನಡೆಯುತ್ತಿರುವ ಕಾಮಗಾರಿಯೂ ಭವಿಷ್ಯದ ವಾಹನ ದಟ್ಟಣೆಗೆ ಶಾಶ್ವತ ಪರಿಹಾರ ನೀಡುವಂತಿಲ್ಲ ಎಂದು ಸಾರ್ವಜನಿಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಕಾಮಗಾರಿಗೆ ಸಂಬಂಧಿಸಿದಂತೆ ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಹೊನ್ನೇಶ ಹಾಗೂ ಕಿರಿಯ ಎಂಜಿನಿಯರ್ ಯುವರಾಜ ದೇವಣಗಾಂವ ಅವರನ್ನು ಸಂಪರ್ಕಿಸಲು ಪ್ರಯತ್ನಿಸಿದರೂ, ಅವರ ಮೊಬೈಲ್ ದೂರವಾಣಿಗಳು ಸಂಪರ್ಕಕ್ಕೆ ಲಭ್ಯವಾಗಲಿಲ್ಲ.
ಹೆಸರು ಬಹಿರಂಗಪಡಿಸಲು ಇಚ್ಛಿಸದ ಸ್ಥಳೀಯ ರೈತರೊಬ್ಬರು, “ಈ ಹಿಂದೆ ಇದೇ ರಸ್ತೆ ದ್ವಿಮುಖ ವಾಹನ ಸಂಚಾರಕ್ಕೆ ಅನುಕೂಲಕರವಾಗಿತ್ತು. ಈಗ ರಸ್ತೆ ಅಗಲ ಕಡಿಮೆಯಾಗಿದ್ದು, ಎದುರುಬರುವ ವಾಹನಗಳಿಗೆ ದಾರಿ ಬಿಡುವುದು ಕಷ್ಟವಾಗಿದೆ. ಇದರಿಂದ ಅಪಘಾತಗಳ ಸಂಭವ ಹೆಚ್ಚುವ ಆತಂಕ ಎದುರಾಗಿದೆ,” ಎಂದು ತಿಳಿಸಿದ್ದಾರೆ.






