ಆಳಂದ | ಕೇಬಲ್ ವಯರ್ ಕಳ್ಳತನ : ಇಬ್ಬರ ಬಂಧನ

ಕಲಬುರಗಿ : ಆಳಂದ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳೆದ ಮೇ 16ರಿಂದ 18ರವರೆಗೆ ನಡೆದಿದ್ದ ಮೂರು ಕಳ್ಳತನ ಪ್ರಕರಣಗಳಿಗೆ ಸಂಬಂಧಿಸಿದಂತೆ ಪೊಲೀಸರು ಇಬ್ಬರನ್ನು ಬಂಧಿಸಿ, ಅವರಿಂದ 210 ಫೀಟ್ ಕೇಬಲ್ ವಯರ್ ಮತ್ತು 60 ಫೀಟ್ ಸರ್ವಿಸ್ ವಯರನ್ನು ಜಪ್ತಿ ಮಾಡಿಕೊಳ್ಳುವಲ್ಲಿ ಆಳಂದ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ.
ಆಳಂದ ತಾಲೂಕಿನ ಪಡಸಾವಳಿ ಗ್ರಾಮದ ನಿವಾಸಿಗಳಾದ ಭೀಮಾಶಂಕರ ಅಲಿಯಾಸ್ ಭೀಮಶ್ಯಾ (32) ಹಾಗೂ ಅಶೋಕ (40) ಬಂಧಿತ ಆರೋಪಿಗಳೆಂದು ಪೊಲೀಸರು ತಿಳಿಸಿದ್ದಾರೆ.
ಆಳಂದ ತಾಲೂಕಿನ ಪಡಸಾವಳಗಿ ಗ್ರಾಮದ ನಾಮದೇವ, ರಾಜಾಬಾಹಿ ಹಾಗೂ ಸಿದ್ದರಾಮ ಎಂಬಾತರ ವಯರ್‌ಗಳು ಕಳ್ಳತನವಾಗಿದ್ದ ಕುರಿತು ಆಳಂದ ಪೊಲೀಸ್ ಠಾಣೆಯಲ್ಲಿ ಮೂರು ಪ್ರತ್ಯೇಕ ಪ್ರಕರಣಗಳು ದಾಖಲಾಗಿದ್ದವು.
ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಕಳ್ಳರ ಪತ್ತೆಗೆ ವ್ಯಾಪಕ ಜಾಲವನ್ನು ಬೀಸಿದ್ದರು, ಇತ್ತ ರವಿವಾರ ಆರೋಪಿಗಳು ಆಳಂದ ಹಳೆ ಚೆಕ್‌ಪೊಸ್ಟ್ ಹತ್ತಿರವಿರುವ ಕುರಿತು ಖಚಿತ ಮಾಹಿತಿ ಕಲೆ ಹಾಕಿದ ಬಳಿಕ ಎಸ್ಪಿ ಅಡ್ಡೂರು ಶ್ರೀನಿವಾಸುಲು, ಹೆಚ್ಚುವರಿ ಎಸ್ಪಿ ಮಹೇಶ ಮೇಘಣ್ಣನವರ್, ಡಿಎಸ್ಪಿ ಅವರ ಮಾರ್ಗದರ್ಶನದಲ್ಲಿ ಸಿಪಿಐ ಶರಣಬಸಪ್ಪ ಕೋಡ್ತಾ ಅವರ ನೇತೃತ್ವದಲ್ಲಿ ಸಿಬ್ಬಂದಿಗಳಾದ ಚಂದ್ರಶೇಖರ, ಗಣಪತರಾವ, ಸಚೀನ, ಜಾಕೀರ, ವೆಂಕಟೇಶ, ಸಿದ್ದರಾಮ, ಮೌಲಾಲಿ ಅವರು ಸ್ಥಳಕ್ಕೆ ಧಾವಿಸಿ, ಇಬ್ಬರು ಆರೋಪಿಗಳನ್ನು ಬಂಧಿಸಿ, ಅವರಿಂದ ವಯರ್‌ಗಳನ್ನು ಜಪ್ತಿ ಮಾಡಿಕೊಂಡಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ.
ಈ ಕುರಿತು ಆಳಂದ ಪೊಲೀಸ್ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿಕೊಂಡ ಪೊಲೀಸರು, ಬಂಧಿತ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆಂದು ತಿಳಿಸಿದ್ದಾರೆ.







