ಆಳಂದ | ಸರಕಾರ ನಿಗದಿಪಡಿಸಿದ ಬೆಲೆ ಘೋಷಣೆ ಮಾಡಿ ಕಾರ್ಖಾನೆ ಆರಂಭಿಸುವಂತೆ ಆಗ್ರಹ

ಕಲಬುರಗಿ: ಆಳಂದ ತಾಲೂಕಿನ ಭೂಸನೂರ ಎನ್‌ಎಸ್‌ಎಲ್ ಸಕ್ಕರೆ ಕಾರ್ಖಾನೆಗೆ ಕಲಬುರಗಿ-ಬೀದರ್-ಯಾದಗಿರಿ ಕೆಎಂಎಫ್ ಅಧ್ಯಕ್ಷ ಆರ್.ಕೆ.ಪಾಟೀಲ್ ನೇತೃತ್ವದಲ್ಲಿ ಗುರುವಾರ ಕಬ್ಬು ಬೆಳೆಗಾರ ರೈತರ ನಿಯೋಗ ಭೇಟಿ ನೀಡಿ ಸರಕಾರ ನಿಗದಿಪಡಿಸಿದ ದರ ನೀಡಿ ಕಬ್ಬು ನುರಿಸಲು ಆರಂಭಿಸುವಂತೆ ಆಗ್ರಹಿಸಿದರು.
ರೈತರನ್ನು ಉದ್ದೇಶಿಸಿ ಮಾತನಾಡಿದ ಆರ್.ಕೆ.ಪಾಟೀಲ್ ಅವರು, ಈ ಬಾರಿ ಹೆಚ್ಚಿನ ಮಳೆ, ನದಿ, ಹಳ್ಳಗಳ ಪ್ರವಾಹದಿಂದಲೂ ಕಬ್ಬಿನ ಬೆಳೆ ಹಾನಿಯಾಗಿದೆ. ರೈತರು ಸಂಕಷ್ಟದಲ್ಲಿ ಇದ್ದು, ಸರಕಾರ ರೈತರ ನೆರವಿಗೆ ಬರಬೇಕು. ಅಕ್ಕಪಕ್ಕದ ಕಾರ್ಖಾನೆಗಳು ನೀಡುವ ದರ ನೆಪ ಬೇಡ ಮೊದಲು ಬೆಲೆ ಘೋಷಣೆ ಮಾಡಿ ಕಾರ್ಖಾನೆ ಆರಂಭಿಸಬೇಕು ಎಂದು ಒತ್ತಾಯಿಸಿದರು.
ಆಳಂದ ಸಹಕಾರಿ ಸಕ್ಕರೆ ಕಾರ್ಖಾನೆ ನಿರ್ದೇಶಕ ಧರ್ಮರಾಜ ಸಾಹು ಮಾತನಾಡಿ, ಕಾರ್ಖಾನೆಯವರು ಇಳುವರಿ ಕಡಿಮೆ ಬರುತ್ತದೆ. ಇದರಿಂದ ಕಾರ್ಖಾನೆಗೆ ನಷ್ಟ ಆಗುತ್ತದೆ ಎಂದು ಹೇಳುವುದು ಬಿಟ್ಟು ಸರಕಾರ ನಿಗದಿಪಡಿಸಿದ ದರ ನೀಡುವಂತೆ ಆಗ್ರಹಿಸಿದರು.
ಕೃಷಿಕ ಸಮಾಜ ತಾಲೂಕು ಅಧ್ಯಕ್ಷ ಗುರುಶರಣ ಪಾಟೀಲ್ ಕೋರಳ್ಳಿ ಮಾತನಾಡಿದರು.
ಸಹಕಾರಿ ಸಕ್ಕರೆ ಕಾರ್ಖಾನೆ ನಿರ್ದೇಶಕ ಉಪಾಧ್ಯಕ್ಷ ಸಿದ್ರಾಮ ಸಾಲಿಮನಿ, ನಿರ್ದೇಶಕ ಶಾಂತೇಶ್ವರ ಪಾಟೀಲ್, ಪ್ರಶಾಂತ ಪಾಟೀಲ್, ಪ್ರಮುಖರಾದ ಶರಣು ಪಾಟೀಲ್, ರಾಜಶೇಖರ ಪಾಟೀಲ್, ರಾಜಶೇಖರ ಯಂಕಂಚಿ, ಸುಭಾಷ್ ಮುರುಡ, ಶಿವಪುತ್ರಪ್ಪ ಕೊಟ್ಟರಕಿ, ಮೋಹನಗೌಡ ಪಾಟೀಲ್, ಪಂಡಿತ ಶೇರಿಕಾರ, ಬಾಬುರಾವ ಗೊಬ್ಬರ, ವೀರಣ್ಣಾ ಹತ್ತರಕಿ, ಗುರುಶಾಂತ ಕಡಕೋಳ, ಶ್ರೀಮಂತ ವಾಗಧರಿ, ಸತೀಶ ಪನಶಟ್ಟಿ, ಮಹಾಂತಪ್ಪ ಯಲಶಟ್ಟಿ, ಸಂಜೀವಕುಮಾರ ಖೋಬ್ರೆ, ವಿಶ್ವನಾಥ ಪವಾಡಶಟ್ಟಿ, ಲಕ್ಷ್ಮಣ್ ಝಳಕಿ, ಶರಣಬಸಪ್ಪ ವಾಗೆ,ಶ್ರೀಶೈಲ್ ಹತ್ತರಕಿ, ಸಂಜಯ ಪಾಟೀಲ್, ರಘವಪ್ಪ ಹತ್ತರಕಿ ಇತರರು ಭಾಗವಹಿಸಿದ್ದರು.
ಭೂಸನೂರ ಎನ್‌ಎಸ್‌ಎಲ್ ಸಕ್ಕರೆ ಕಾರ್ಖಾನೆ ಪ್ರಸಕ್ತ ಸಾಲಿನ ಹಂಗಾಮು ಆರಂಭಿಸಿ ಸರಕಾರ ನಿಗದಿಪಡಿಸಿದ ದರ ನೀಡಬೇಕು, ಕಬ್ಬು ಕಡಿಯುವಾಗ ಟೋಳಿ, ವಾಹನ ಚಾಲಕರು ಹಣ ಪಡೆಯುವುದಕ್ಕೆ ಕಡಿವಾಣ ಹಾಕಬೇಕು. ಕಬ್ಬು ಆದ್ಯತೆ ಮೇಲೆ ಕಟಾವ್ ಮಾಡಬೇಕು, ಕಬ್ಬು ಬೆಳೆಗಾರ ರೈತರಿಗೆ ಕಬ್ಬಿನ ಬೀಜ, ಗೊಬ್ಬರ ವಿತರಿಸಬೇಕು, ರೈತರಿಗೆ ಹೆಚ್ಚಿನ ಇಳುವರಿ ತೆಗೆಯುವಂತೆ ತರಬೇತಿ ನೀಡಬೇಕು.
-ಗುರುಲಿಂಗಜoಗಮ ಎಸ್.ಪಾಟೀಲ್, ಧಂಗಾಪೂರ. ಅಧ್ಯಕ್ಷರು, ಎಸ್‌ಎಸ್‌ಕೆಎನ್, ಆಳಂದ.







