Alanda | ಬರ ಘೋಷಣೆ, ಬೆಳೆವಿಮೆ ಪಾವತಿಗೆ ಆಗ್ರಹ: ಎತ್ತಿನಗಾಡಿಗಳೊಂದಿಗೆ ಹೆದ್ದಾರಿ ತಡೆ

ಆಳಂದ: ತಾಲೂಕನ್ನು ಬರಪೀಡಿತ ಎಂದು ಘೋಷಿಸಬೇಕು, ಬಾಕಿ ಇರುವ ಬೆಳೆವಿಮೆ ಮೊತ್ತವನ್ನು ಕೂಡಲೇ ಪಾವತಿಸಬೇಕು ಹಾಗೂ ಪ್ರಸಕ್ತ ಸಾಲಿನ ಬೆಳೆಹಾನಿಗೆ ಪರಿಹಾರ ನೀಡಬೇಕು ಎಂದು ಆಗ್ರಹಿಸಿ ರೈತರು ಬುಧವಾರ ಕೃಷಿ ಚಟುವಟಿಕೆಗಳನ್ನು ಬದಿಗೊತ್ತಿ ಎತ್ತಿನಗಾಡಿಗಳೊಂದಿಗೆ ರಾಜ್ಯ ಹೆದ್ದಾರಿಗೆ ಇಳಿದು ಪ್ರತಿಭಟನೆ ನಡೆಸಿದರು.
ಕಲ್ಯಾಣ ಜನಪರ ವೇದಿಕೆಯ ರಾಜ್ಯಾಧ್ಯಕ್ಷ ಬಸವರಾಜ ಕೊರಳ್ಳಿ ನೇತೃತ್ವದಲ್ಲಿ ಕೊಡಲಹಂಗರಗಾ ಗ್ರಾಮದ ಬಳಿ ನಡೆದ ಪ್ರತಿಭಟನೆ ವೇಳೆ ರೈತರು ಎತ್ತಿನಗಾಡಿಗಳನ್ನು ಹೆದ್ದಾರಿಯಲ್ಲಿ ನಿಲ್ಲಿಸಿ ವಾಗ್ದರಿ–ರಿಬ್ಬನಪಲ್ಲಿ ರಾಜ್ಯ ಹೆದ್ದಾರಿ ಸಂಚಾರವನ್ನು ತಡೆದರು. ಇದರಿಂದ ಕರ್ನಾಟಕ ಮತ್ತು ಮಹಾರಾಷ್ಟ್ರ ನಡುವೆ ಸಂಚರಿಸುವ ಸಾರಿಗೆ ಸಂಸ್ಥೆಯ ಬಸ್‌ಗಳು ಸೇರಿದಂತೆ ಹಲವು ಖಾಸಗಿ ವಾಹನಗಳ ಸಂಚಾರ ಒಂದು ಗಂಟೆಗೂ ಹೆಚ್ಚು ಕಾಲ ಸ್ಥಗಿತಗೊಂಡು, ಪ್ರಯಾಣಿಕರು ಪರದಾಡುವಂತಾಯಿತು.
‘ಕಚೇರಿ ಬಾಗಿಲು ಒಡೆಯುತ್ತೇವೆ’ ಎಂದು ಎಚ್ಚರಿಕೆ:
ತಾಲೂಕನ್ನು ಬರಪೀಡಿತ ಎಂದು ಘೋಷಿಸುವುದು, ಕಳೆದ ಸಾಲಿನ ಬಾಕಿ ಬೆಳೆವಿಮೆ ಮೊತ್ತ ಹಾಗೂ ಪ್ರಸಕ್ತ ಸಾಲಿನ ಬೆಳೆಹಾನಿ ಪರಿಹಾರವನ್ನು ತಕ್ಷಣ ಬಿಡುಗಡೆ ಮಾಡುವುದು ರೈತರ ಪ್ರಮುಖ ಬೇಡಿಕೆಯಾಗಿತ್ತು.
ಬೆಳೆವಿಮೆ ಪಾವತಿಗೆ ಸರ್ಕಾರ ಹಾಗೂ ಅಧಿಕಾರಿಗಳಿಗೆ ಒಂದು ವಾರದ ಗಡುವು ನೀಡಿದ ಪ್ರತಿಭಟನಾಕಾರರು, ಗಡುವಿನೊಳಗೆ ಹಣ ಜಮೆಯಾಗದಿದ್ದರೆ ಅಧಿಕಾರಿಗಳ ಕಚೇರಿಗಳ ಮುಂದೆ ತೀವ್ರ ಹೋರಾಟ ನಡೆಸುವುದಾಗಿ ಎಚ್ಚರಿಸಿದರು. ಕೆಲವರು ಆಕ್ರೋಶ ವ್ಯಕ್ತಪಡಿಸಿ, ಪರಿಹಾರ ದೊರೆಯದಿದ್ದರೆ ಅಧಿಕಾರಿಗಳ ಕಚೇರಿ ಬಾಗಿಲು ಒಡೆಯುವ ಹಂತಕ್ಕೆ ರೈತರನ್ನು ತಳ್ಳಬೇಡಿ ಎಂದು ಎಚ್ಚರಿಕೆ ನೀಡಿದರು.
ಬೆಳೆವಿಮೆ ಕಂತು ಪಾವತಿಸಿರುವ ಅನೇಕ ರೈತರ ಖಾತೆಗಳಿಗೆ ಇನ್ನೂ ವಿಮೆ ಮೊತ್ತ ಜಮೆಯಾಗಿಲ್ಲ. ಕೊಡಲಹಂಗರಗಾ ಸೇರಿದಂತೆ ತಾಲೂಕಿನ ಹಲವು ಗ್ರಾಮಗಳಲ್ಲಿ ರೈತರು ವಿಮೆ ಪರಿಹಾರಕ್ಕಾಗಿ ಕಾಯುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲೂ ತಾಲೂಕನ್ನು ಬರಪೀಡಿತ ಪಟ್ಟಿಯಿಂದ ಹೊರಗಿಟ್ಟಿರುವುದು ಏಕೆ ಎಂದು ಪ್ರಶ್ನಿಸಿದ ರೈತರು, ಸರ್ಕಾರದ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ಹಿರಿಯ ಮುಖಂಡ ಶಂಕರರಾವ್ ಮಾಲಿಪಾಟೀಲ, ಭೀಮಶಾ ಚಿತಲಿ, ವೇದಿಕೆಯ ರಾಜ್ಯ ಕಾರ್ಯದರ್ಶಿ ಶರಣು ಕುಲಕರ್ಣಿ, ಜಿಲ್ಲಾಧ್ಯಕ್ಷ ನಾಗರಾಜ ಘಡಕೆ, ಉಪಾಧ್ಯಕ್ಷ ವಿಕ್ರಂ ಜೇವರ್ಗಿ, ತಾಲೂಕು ಅಧ್ಯಕ್ಷ ಬೀರಣ್ಣ ಭೂಸನೂರ, ಗಂಗಾಧರ ಕುಂಬಾರ, ಶರಣು ಪಾಟೀಲ, ನೀಲಕಂಠ ಶೇರಿಕಾರ ಸೇರಿದಂತೆ ಹಲವರು ಮಾತನಾಡಿ ಸರ್ಕಾರ ಹಾಗೂ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ರೈತರಾದ ಭೀಮರಾವ್ ಬಾಲಖೇಡ, ಸುರೇಶ ಭೂಸನೂರ, ಶಿವಕುಮಾರ ನಗದೆ, ಸೋಮಯ್ಯ ಸ್ವಾಮಿ, ಶರಣಪ್ಪ ಸಾಹೂಕಾರ ರೆಡ್ಡಿ, ಪೀರಪ್ಪಗೌಡ ಪಾಟೀಲ, ಅಣ್ಣಾರಾವ್ ಬಿರಾದಾರ, ದತ್ತಪ್ಪ ಪೂಜಾರಿ, ರೇವಣಸಿದ್ಧ ಪೂಜಾರಿ, ಶರಣಬಸಪ್ಪ ಉಜಳಂಬೆ, ನಿಖಿಲ ಭೀಮಳ್ಳಿ, ಗೌರಿಶಂಕರ ಪಾಟೀಲ, ಸಂದೀಪ ಭೀಮಳ್ಳಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಅನೇಕ ರೈತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ತಹಸೀಲ್ದಾರ್ ಅಣ್ಣಾರಾವ್ ಪಾಟೀಲ ಹಾಗೂ ಸಹಾಯಕ ಕೃಷಿ ನಿರ್ದೇಶಕ ತಿಪ್ಪೇಸ್ವಾಮಿ ವಿ. ಅವರು ರೈತರ ಮನವಿ ಸ್ವೀಕರಿಸಿ, ಬೇಡಿಕೆಗಳನ್ನು ಸರ್ಕಾರದ ಗಮನಕ್ಕೆ ತಂದು ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.
ಬೆಳೆವಿಮೆ ಪಾವತಿಯಲ್ಲಿ ಉಂಟಾಗಿರುವ ತಾಂತ್ರಿಕ ಅಡೆತಡೆಗಳನ್ನು ನಿವಾರಿಸಿ, ಅರ್ಹ ಫಲಾನುಭವಿಗಳ ಖಾತೆಗಳಿಗೆ ಶೀಘ್ರವೇ ವಿಮೆ ಮೊತ್ತ ಜಮೆಯಾಗುವಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದರು.
ಪ್ರತಿಭಟನೆಯ ಹಿನ್ನೆಲೆಯಲ್ಲಿ ಆಳಂದ ಗ್ರಾಮೀಣ ಠಾಣೆ ಸಿಪಿಐ ಜಗದೀಶ ಹಾಗೂ ನರೋಣಾ ಠಾಣೆ ಪಿಎಸ್‌ಐ ಸಿದ್ರಾಮ ನಿಂಬರಗಾ ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ಆಗಮಿಸಿ ಬಂದೋಬಸ್ತ್ ಕಲ್ಪಿಸಿದರು. ಅಧಿಕಾರಿಗಳ ಭರವಸೆ ಬಳಿಕ ರೈತರು ಪ್ರತಿಭಟನೆ ಹಿಂಪಡೆದಿದ್ದು, ಬಳಿಕ ಹೆದ್ದಾರಿಯಲ್ಲಿ ಸಂಚಾರ ವ್ಯವಸ್ಥೆ ಪುನಃಸ್ಥಾಪಿಸಲಾಯಿತು.






