ಆಳಂದ ರಸ್ತೆ ಅಗಲೀಕರಣ | ಕಾನೂನುಬದ್ಧವಾಗಿ ಅರ್ಹರಿಗೆ ಪರಿಹಾರ : ಶಾಸಕ ಬಿ.ಆರ್.ಪಾಟೀಲ್

ಬಿ.ಆರ್.ಪಾಟೀಲ್
ಆಳಂದ:ಪಟ್ಟಣದ ಮುಖ್ಯ ರಸ್ತೆ ಅಗಲೀಕರಣ ಕಾಮಗಾರಿಯಿಂದ ಆಸ್ತಿ ಕಳೆದುಕೊಳ್ಳುವವರಿಗೆ ಮೊದಲು ಪರಿಹಾರ ಘೋಷಿಸಿ ನಂತರವೇ ಕಾಮಗಾರಿ ನಡೆಸಬೇಕು ಎಂದು ಪ್ರತಿಪಕ್ಷಗಳು ಒತ್ತಾಯಿಸಿ ಹೋರಾಟ ನಡೆಸುತ್ತಿರುವ ನಡುವೆಯೇ, ಈ ವಿಷಯಕ್ಕೆ ಸಂಬಂಧಿಸಿ ಶಾಸಕ ಹಾಗೂ ನೀತಿ ಆಯೋಗದ ರಾಜ್ಯ ಉಪಾಧ್ಯಕ್ಷ ಬಿ.ಆರ್.ಪಾಟೀಲ್ ತಮ್ಮ ನಿಲುವನ್ನು ಸ್ಪಷ್ಟಪಡಿಸಿದ್ದಾರೆ.
ರಸ್ತೆ ಅಗಲೀಕರಣ ಹಾಗೂ ಪರಿಹಾರ ವಿಷಯಕ್ಕೆ ಸಂಬಂಧಿಸಿ ನಮ್ಮ ಪ್ರತಿನಿಧಿ ಬುಧವಾರ ದೂರವಾಣಿ ಮೂಲಕ ಸಂಪರ್ಕಿಸಿದ ವೇಳೆ ಪ್ರತಿಕ್ರಿಯಿಸಿದ ಅವರು, ಪರಿಹಾರ ಕಾನೂನು ಪ್ರಕಾರ ಅರ್ಹವಾಗಿದ್ದರೆ ಸಂಬಂಧಪಟ್ಟವರು ಅದನ್ನು ಪಡೆದುಕೊಳ್ಳಲಿ. ಈ ಕುರಿತು ಸರ್ಕಾರಕ್ಕೆ ಅಧಿಕೃತ ಮನವಿ ಸಲ್ಲಿಸಬೇಕು. ಮನವಿ ಬಂದಲ್ಲಿ ಸರ್ಕಾರದ ಮಟ್ಟದಲ್ಲಿ ಪರಿಹಾರ ದೊರಕಿಸಲು ಪ್ರಯತ್ನಿಸಲಾಗುವುದು ಎಂದು ತಿಳಿಸಿದರು.
ಕಾನೂನುಬದ್ಧ ಪ್ರಕ್ರಿಯೆ ಅನುಸರಿಸಿ ಅರ್ಹರಿಗೆ ನ್ಯಾಯ ದೊರಕಿಸುವಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ ಅವರು, ರಸ್ತೆ ಅಗಲೀಕರಣವು ಸಾರ್ವಜನಿಕ ಹಿತದೃಷ್ಟಿಯಿಂದ ಕೈಗೊಳ್ಳಲಾಗಿರುವ ಮಹತ್ವದ ಅಭಿವೃದ್ಧಿ ಕಾಮಗಾರಿಯಾಗಿದ್ದು, ಎಲ್ಲರಿಗೂ ಅನುಕೂಲವಾಗುವ ರೀತಿಯಲ್ಲಿ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸರ್ಕಾರ ಬದ್ಧವಾಗಿದೆ ಎಂದು ಹೇಳಿದರು.
ಇನ್ನೊಂದೆಡೆ, ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ವಿಡಿಯೋದಲ್ಲಿ ಶಾಸಕರು, ರಸ್ತೆ ಅಗಲೀಕರಣ ಕಾರ್ಯಕ್ಕೆ ಸಾರ್ವಜನಿಕರು ನೀಡುತ್ತಿರುವ ಸಹಕಾರ ಅಭಿವೃದ್ಧಿಗೆ ಸಹಾಯಕವಾಗಲಿದೆ ಎಂದು ಅಭಿನಂದಿಸಿದರು. ಜೊತೆಗೆ ಪಟ್ಟಣದಲ್ಲಿ ಕುಡಿಯುವ ನೀರಿನ ಸಮಸ್ಯೆ ನಿವಾರಣೆ, ರಸ್ತೆ ಹಾಗೂ ಇತರೆ ಅಭಿವೃದ್ಧಿ ಕಾಮಗಾರಿಗಳಿಗೆ ಅನುದಾನ ತಂದಿರುವ ಬಗ್ಗೆ ಮಾಹಿತಿ ನೀಡಿದರು.
ಇದಕ್ಕೆ ವಿರುದ್ಧವಾಗಿ, ರಸ್ತೆ ಅಗಲೀಕರಣದಿಂದ ನೇರವಾಗಿ ಪ್ರಭಾವಿತರಾಗುತ್ತಿರುವ ಆಸ್ತಿ ಮಾಲಕರು, ಮೊದಲು ಪರಿಹಾರ ಘೋಷಿಸಬೇಕು ಅಥವಾ ಪರಿಹಾರ ನೀಡಿದ ನಂತರವೇ ಕಾಮಗಾರಿ ಆರಂಭಿಸಬೇಕು ಎಂಬ ತಮ್ಮ ಬೇಡಿಕೆಯನ್ನು ಮುಂದುವರೆಸಿದ್ದಾರೆ. ಈ ಹಿನ್ನೆಲೆಯಲ್ಲಿ ಆಳಂದ ಪಟ್ಟಣದಲ್ಲಿ ರಸ್ತೆ ಅಗಲೀಕರಣ ವಿಚಾರ ದಿನೇದಿನೇ ರಾಜಕೀಯ ಹಾಗೂ ಸಾರ್ವಜನಿಕ ಚರ್ಚೆಯ ಕೇಂದ್ರಬಿಂದುವಾಗುತ್ತಿದೆ.
ಈ ಎಲ್ಲ ಬೆಳವಣಿಗೆಗಳ ನಡುವೆಯೇ, ಶಾಸಕ ಬಿ.ಆರ್. ಪಾಟೀಲ್ ಅವರು ಆರೋಗ್ಯ ಕಾರಣಗಳಿಂದ ಪ್ರಸ್ತುತ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನೇತ್ರ ಚಿಕಿತ್ಸೆಗೆ ಒಳಗಾಗಿದ್ದು, ವೈದ್ಯರ ಸಲಹೆಯಂತೆ ವಿಶ್ರಾಂತಿ ಪಡೆಯುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಇದರಿಂದಾಗಿ ಅವರು ಸದ್ಯ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ನೇರವಾಗಿ ಭಾಗವಹಿಸಲು ಸಾಧ್ಯವಾಗುತ್ತಿಲ್ಲ ಎನ್ನಲಾಗಿದೆ.
ಆದರೂ, ದೂರವಾಣಿ ಮೂಲಕ ಅಧಿಕಾರಿಗಳು ಹಾಗೂ ಪಕ್ಷದ ಮುಖಂಡರೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ರಸ್ತೆ ಅಗಲೀಕರಣ ಹಾಗೂ ಪರಿಹಾರಕ್ಕೆ ಸಂಬಂಧಿಸಿದ ಬೆಳವಣಿಗೆಗಳ ಮೇಲೆ ನಿಗಾ ವಹಿಸುತ್ತಿದ್ದಾರೆ ಎಂದು ಅವರ ಆಪ್ತ ಮೂಲಗಳು ತಿಳಿಸಿವೆ.
ಒಟ್ಟಾರೆ, ರಸ್ತೆ ಅಗಲೀಕರಣ ಎಂಬ ಅಭಿವೃದ್ಧಿ ಕಾರ್ಯ ಮತ್ತು ಪರಿಹಾರ ಕುರಿತ ಬೇಡಿಕೆಗಳ ನಡುವೆ ಸಮತೋಲನ ಸಾಧಿಸುವ ಹೊಣೆ ಆಡಳಿತದ ಮೇಲಿದೆ ಎಂಬ ಅಭಿಪ್ರಾಯ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗುತ್ತಿದ್ದು, ಮುಂದಿನ ದಿನಗಳಲ್ಲಿ ಸರ್ಕಾರ ಕೈಗೊಳ್ಳುವ ಸ್ಪಷ್ಟ ನಿರ್ಧಾರಗಳ ಮೇಲೆ ಆಳಂದ ಪಟ್ಟಣದ ರಾಜಕೀಯ ಹಾಗೂ ಸಾಮಾಜಿಕ ವಾತಾವರಣ ಅವಲಂಬಿತವಾಗಲಿದೆ.







