ಆಳಂದ | ಶಾಲಾ ಅಭಿವೃದ್ಧಿಗೆ ಎಸ್‌ಡಿಎಂಸಿ ಸಕ್ರಿಯತೆ ಅಗತ್ಯ: ಅಣ್ಣಪ್ಪ ಹಾದಿಮನಿ

ಆಳಂದ : ತಾಲೂಕಿನ ಪ್ರತಿಯೊಂದು ಶಾಲೆಯಲ್ಲಿಯೂ ಶೈಕ್ಷಣಿಕ ಗುಣಮಟ್ಟ ಹೆಚ್ಚಿಸಲು ಶಾಲಾ ಅಭಿವೃದ್ಧಿ ಮತ್ತು ಮೇಲ್ವಿಚಾರಣಾ ಸಮಿತಿ (ಎಸ್‌ಡಿಎಂಸಿ) ಸಕ್ರಿಯವಾಗಿ ಕಾರ್ಯನಿರ್ವಹಿಸಬೇಕು ಎಂದು ಕ್ಷೇತ್ರ ಸಮನ್ವಯಾಧಿಕಾರಿ ಅಣ್ಣಪ್ಪ ಹಾದಿಮನಿ ತಿಳಿಸಿದರು.
ಪಟ್ಟಣದ ಸರ್ಕಾರಿ ಬಾಲಕರ ಪ್ರೌಢಶಾಲೆಯಲ್ಲಿ 2025–26ನೇ ಸಾಲಿನ ಮುಖ್ಯಗುರುಗಳು ಹಾಗೂ ಎಸ್‌ಡಿಎಂಸಿ ಅಧ್ಯಕ್ಷರು ಮತ್ತು ಸದಸ್ಯರಿಗಾಗಿ ಆಯೋಜಿಸಿದ್ದ ಒಂದು ದಿನದ ಕಾರ್ಯಗಾರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಶಾಲೆಗಳ ಪ್ರಗತಿಗೆ ಮುಖ್ಯಗುರುಗಳು ಮತ್ತು ಎಸ್‌ಡಿಎಂಸಿ ಸದಸ್ಯರ ಸಹಕಾರ ಅತ್ಯವಶ್ಯಕ ಎಂದು ಹೇಳಿದರು.
ಶಾಲಾ ಸೌಲಭ್ಯಗಳು, ಮಕ್ಕಳ ಪ್ರಗತಿ ದಾಖಲಾತಿ, ಮಧ್ಯಾಹ್ನದ ಬಿಸಿ ಊಟ, ಶಾಲಾ ಪರಿಸರ, ಮೂಲಭೂತ ಸೌಕರ್ಯಗಳು ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಎಸ್‌ಡಿಎಂಸಿ ಸದಸ್ಯರು ಸಕ್ರಿಯವಾಗಿ ಭಾಗವಹಿಸಿದಾಗ ಮಾತ್ರ ಶಾಲೆಗಳು ಅಭಿವೃದ್ಧಿಯತ್ತ ಸಾಗುತ್ತವೆ ಎಂದು ಅಭಿಪ್ರಾಯಪಟ್ಟರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಬೇನಾಜಿ ಸೂರ್ಯವಂಶಿ ಮಾತನಾಡಿ, ಅಕ್ಷರ ದಾಸೋಹ ಯೋಜನೆಯಡಿ ವಾರದಲ್ಲಿ ಆರು ದಿನ ಮಕ್ಕಳಿಗೆ ಮೊಟ್ಟೆ ಅಥವಾ ಬಾಳೆಹಣ್ಣು ವಿತರಿಸಲಾಗುತ್ತಿದ್ದು, ಪ್ರತಿಯೊಬ್ಬ ಮಗುವಿಗೂ ಇದರ ಪ್ರಯೋಜನ ತಲುಪುವಂತೆ ಎಸ್‌ಡಿಎಂಸಿ ಸದಸ್ಯರು ಜವಾಬ್ದಾರಿಯುತವಾಗಿ ಕೆಲಸ ಮಾಡಬೇಕು ಎಂದು ಹೇಳಿದರು.
ಆರ್‌ಪಿ ವೀರೇಶ್ ಬೋಳಶೆಟ್ಟಿ ಅವರು ಮುಖ್ಯಗುರುಗಳು ಮತ್ತು ಎಸ್‌ಡಿಎಂಸಿ ಸದಸ್ಯರಿಗೆ ಮಕ್ಕಳ ಕಲ್ಯಾಣ ಕಾರ್ಯಕ್ರಮಗಳು, ಶೈಕ್ಷಣಿಕ ಪ್ರವಾಸ, ಹಬ್ಬಗಳ ಆಚರಣೆ, ಶಾಲಾ ಅಭಿವೃದ್ಧಿ ಯೋಜನೆ ಹಾಗೂ ಭೌತಿಕ, ಶೈಕ್ಷಣಿಕ ಮತ್ತು ಆಡಳಿತಾತ್ಮಕ ಸುಧಾರಣೆಗಳ ಕುರಿತು ತರಬೇತಿ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸರ್ಕಾರಿ ಬಾಲಕರ ಪ್ರೌಢಶಾಲೆಯ ತಾನಾಜಿ ವಹಿಸಿದ್ದರು. ಸಮಾರೋಪ ಸಮಾರಂಭದಲ್ಲಿ ಪದವಿಪೂರ್ವ ಕಾಲೇಜಿನ ಉಪನ್ಯಾಸಕ ರವೀಂದ್ರ ಕಂಟೇಕೋರೆ ಮಾರ್ಗದರ್ಶನ ನೀಡಿದರು.
ಹೊದಲೂರ, ಖಜೂರಿ, ಮಟಕಿ ಮತ್ತು ಆಳಂದ ದಕ್ಷಿಣ ಕ್ಲಸ್ಟರ್‌ನ ಸರ್ಕಾರಿ ಶಾಲೆಗಳ ಮುಖ್ಯಗುರುಗಳು ಹಾಗೂ ಎಸ್‌ಡಿಎಂಸಿ ಅಧ್ಯಕ್ಷರು ಮತ್ತು ಸದಸ್ಯರು ಕಾರ್ಯಗಾರದಲ್ಲಿ ಭಾಗವಹಿಸಿದ್ದರು. ಮಟಗಿ ಕ್ಲಸ್ಟರ್‌ನ ಸಿಆರ್‌ಪಿ ಸಿದ್ದಾರ್ಥ್ ವಂದಿಸಿದರು.






