ಆಳಂದ | ಜ.19ರಿಂದ ಶ್ರೀ ಚನ್ನಮಲ್ಲೇಶ್ವರ ಚರಿತಾಮೃತ ಮಹಾಪುರಾಣ ಪ್ರವಚನ ಕಾರ್ಯಕ್ರಮ : ಚನ್ನಮಲ್ಲ ಶಿವಾಚಾರ್ಯರು

ಆಳಂದ : ಮಾಡಿಯಾಳ ಗ್ರಾಮದ ಶ್ರೀ ಚನ್ನಮಲ್ಲೇಶ್ವರ ಮಠದ ಜಾತ್ರೆಯ ಅಂಗವಾಗಿ ಜ.19ರಿಂದ 30ರವರೆಗೆ ರಾತ್ರಿ 8 ಗಂಟೆಗೆ ಶ್ರೀ ಚನ್ನಮಲ್ಲೇಶ್ವರ ಚರಿತಾಮೃತ ಮಹಾಪುರಾಣ ಪ್ರವಚನ ಕಾರ್ಯಕ್ರಮ ಜರುಗಲಿದೆ ಎಂದು ಮಠದ ಪೀಠಾಧಿಪತಿ ಶ್ರೀ ಚನ್ನಮಲ್ಲ ಶಿವಾಚಾರ್ಯರು ಹೇಳಿದರು.
ಜಾತ್ರೆಯ ಪೋಸ್ಟರ್ ಬಿಡುಗಡೆಗೊಳಿಸಿ ಮಾತನಾಡಿದ ಅವರು, ಶ್ರೀ ಉಪಮನ್ಯು ಶಿವಾಚಾರ್ಯರು (ಸಿದ್ದಲಿಂಗೇಶ್ವರ ಸಂಸ್ಥಾನ ಹಿರೇಮಠ, ಐನಾಪುರ) ಪ್ರವಚನ ನೀಡಲಿದ್ದಾರೆ ಎಂದರು.
ಜ.21ರಂದು ಪುರಾಣ ಪ್ರವಚನದ ನಂತರ ನಿವೃತ್ತ ಸೈನಿಕರಿಗೆ ಸನ್ಮಾನ ಕಾರ್ಯಕ್ರಮ ಆಯೋಜಿಸಲಾಗಿದೆ. ಜ.26ರಂದು ಬೆಳಗ್ಗೆ 10 ಗಂಟೆಗೆ ಸರಕಾರಿ ಸಾರ್ವಜನಿಕ ಆಸ್ಪತ್ರೆಯ ಸಹಯೋಗದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಹಾಗೂ ಖ್ಯಾತ ನೇತ್ರ ತಜ್ಞ ಡಾ.ವಿಶ್ವನಾಥ ರೆಡ್ಡಿಯವರಿಂದ ಉಚಿತ ನೇತ್ರ ತಪಾಸಣೆ ನಡೆಯಲಿದೆ ಎಂದು ಅವರು ವಿವರಿಸಿದರು.
ಜ.27ರಂದು ಸಾಯಂಕಾಲ ಶ್ರೀ ಚನ್ನಮಲ್ಲೇಶ್ವರ ಶಿಕ್ಷಣ ಸಂಸ್ಥೆಯ ಬಡದಾಳ ಶಾಲಾ ವಿದ್ಯಾರ್ಥಿಗಳಿಂದ ಕಿರು ನಾಟಕ ಪ್ರದರ್ಶನ ನಡೆಯಲಿದೆ. ಜ.28ರಂದು ಸಾಯಂಕಾಲ ಹಿರಿಯ ಕೃಷಿ ವಿಜ್ಞಾನಿ ರಾಜು ತೆಗ್ಗೆಳಿ ಹಾಗೂ ಡಾ. ಯೂಸುಫ್ ಅಲಿ ಅವರು ರೈತರಿಗೆ ಕೃಷಿ ಕುರಿತು ವಿಶೇಷ ಮಾರ್ಗದರ್ಶನ ನೀಡಲಿದ್ದಾರೆ. ಅನಂತರ ಸುಚಿತ ಕಿಣಗಿ ಹಾಗೂ ತಂಡದಿಂದ ಭರತನಾಟ್ಯ ಕಾರ್ಯಕ್ರಮ ಜರಗಲಿದೆ.
ಜ.29ರಂದು ಬೆಳಗ್ಗೆ 10 ಗಂಟೆಗೆ ಮಾಡಿಯಾಳ ಆಯುರ್ವೇದ ಆಸ್ಪತ್ರೆಯ ವತಿಯಿಂದ ಬಡ ರೋಗಿಗಳಿಗೆ ಉಚಿತ ಸಂಧಿವಾತ ಚಿಕಿತ್ಸಾ ಶಿಬಿರ ಆಯೋಜಿಸಲಾಗಿದೆ. ರಾತ್ರಿ 8 ಗಂಟೆಗೆ ಧರ್ಮಸಭೆ ನಡೆಯಲಿದ್ದು, ನಾಗುರ ಮಠಾಧ್ಯಕ್ಷರು ಹಾಗೂ ಮಾತೋಶ್ರೀ ಸಿದ್ದಮಾಂಬೆ ಸಾನಿಧ್ಯ ವಹಿಸಲಿದ್ದಾರೆ. ಹಜರತ್ ಸೈಯದ್ ಭಾಷಾ ಹುಸೇನ ಮಠಾಧ್ಯಕ್ಷರು (ಬಟ್ಟರಗಾ ದರ್ಗಾ) ಹಾಗೂ ಗರೀಬ ಸಾಹೇಬ ಮಠಾಧ್ಯಕ್ಷರು (ಹಿತ್ತಲಶಿರೂರು) ನೇತೃತ್ವ ವಹಿಸಲಿದ್ದಾರೆ. ರಾತ್ರಿ 9 ಗಂಟೆಗೆ ಜೀ ಕನ್ನಡ ವಾಹಿನಿಯ ಸರಿಗಮಪ ಸೀಸನ್21ರ ವಿನ್ನರ್ ಹಾಗೂ ಇಂಡಿಯನ್ ಐಡಲ್ ಖ್ಯಾತ ಗಾಯಕಿ ಶಿವಾನಿ ಶಿವದಾಸ ಸ್ವಾಮಿ ಹಿರೇಮಠ ಮತ್ತು ತಂಡದಿಂದ ಭಕ್ತಿ ಸಂಗಮ ಕಾರ್ಯಕ್ರಮ ನಡೆಯಲಿದೆ.
ಜ.30ರಂದು ಬೆಳಗ್ಗೆ 10:30ಕ್ಕೆ ಸುಮಂಗಲಿಯರ ಕುಂಭಕಳಸ, ಮುತ್ತಿನಾರತಿ ಸಹಿತ ಡಾ. ಚನ್ನಮಲ್ಲ ಶಿವಯೋಗಿ ಶಿವಾಚಾರ್ಯರ ಅಡ್ಡಪಲ್ಲಕಿ ಮಹೋತ್ಸವ ಗ್ರಾಮದ ಪ್ರಮುಖ ರಸ್ತೆಗಳಲ್ಲಿ ವಿಜೃಂಭಣೆಯಿಂದ ಜರುಗಲಿದೆ. ಸಾಯಂಕಾಲ 4 ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದೆ. ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ ಪಾಟೀಲ್, ಬೀದರ್ ಸಂಸದ ಸಾಗರ ಖಂಡ್ರೆ, ಶಾಸಕರಾದ ಬಿ.ಆರ್. ಪಾಟೀಲ್, ಎಂ.ವೈ. ಪಾಟೀಲ್, ಬಸವರಾಜ ಮತ್ತಿಮೂಡ, ಶರಣು ಸಲಗರ, ಮಾಜಿ ಶಾಸಕ ಸುಭಾಷ ಗುತ್ತೇದಾರ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ ಎಂದು ಸ್ವಾಮೀಜಿ ಹೇಳಿದರು.
ಹಿರಿಯ ಮುಖಂಡ ಸಂಗಣ್ಣ ಮದ್ದಡಗಿ, ಸೂರ್ಯಕಾಂತ ರಾಮಜಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.







