ಆಳಂದ| ಸ್ವಾತಂತ್ರ್ಯದ ಹಿಂದೆ ತ್ಯಾಗ ಬಲಿದಾನವಿದೆ : ಮಾಜಿ ಶಾಸಕ ಸುಭಾಷ್ ಗುತ್ತೇದಾರ

ಕಲಬುರಗಿ: ಹಲವಾರು ಜನ ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ ಬಲಿದಾನಗಳ ಸಂಕೇತವೇ ಸ್ವಾತಂತ್ರ್ಯ ಎಂದು ಆಳಂದ ಮಾಜಿ ಶಾಸಕ ಸುಭಾಷ್ ಗುತ್ತೇದಾರ ಅಭಿಪ್ರಾಯಪಟ್ಟರು.
ಶುಕ್ರವಾರ ಆಳಂದ ಪಟ್ಟಣದ ಜೀವನಜ್ಯೋತಿ ಶಿಕ್ಷಣ ಮತ್ತು ಕಲ್ಯಾಣ ಸಂಸ್ಥೆ ಹಾಗೂ ಎಸ್‌ಆರ್‌ಜಿ ಫೌಂಡೇಶನ್‌ನ ಅಡಿಯಲ್ಲಿ ನಡೆಯುತ್ತಿರುವ ವಿವಿಧ ಶಾಲಾ ಕಾಲೇಜುಗಳ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ 79ನೇ ಸ್ವಾತಂತ್ರ್ಯ ದಿನಾಚಾರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಭಾರತದ ಸ್ವಾತಂತ್ರ‍್ಯಕ್ಕೆ 1857 ರಿಂದ 1947 ರವರೆಗೆ ಹಲವು ದಶಕಗಳ ಕಾಲ ನಮ್ಮ ಪೂರ್ವಜರು ಹೋರಾಡಿರುವುದನ್ನು ಈ ಸಂದರ್ಭದಲ್ಲಿ ನಾವು ನೆನಪಿಸಿಕೊಳ್ಳಲೇಬೇಕು. ಸ್ವಾತಂತ್ರ‍್ಯ ಎಂದರೆ ಪ್ರತಿಯೊಬ್ಬ ವ್ಯಕ್ತಿಗೆ ಈ ಭಾರತದಲ್ಲಿ ಎಲ್ಲ ರೀತಿಯ ಮೂಲಭೂತ ಹಕ್ಕು ಇದೆ. ಎಲ್ಲ ರೀತಿಯ ಸ್ವಾತಂತ್ರ‍್ಯ ಇದೆ. ಆದರೆ ಒಬ್ಬ ವ್ಯಕ್ತಿಯು ತನ್ನ ಸ್ವಾತಂತ್ರ‍್ಯ ಹಕ್ಕಿನಿಂದ ಮತ್ತೊಬ್ಬರ ಸ್ವಾತಂತ್ರ‍್ಯಕ್ಕೆ ಅಡ್ಡಿ ಆಗುವ ಯಾವುದೇ ಕೆಲಸವನ್ನು ಮಾಡಬಾರದು ಎಂಬುದನ್ನು ಸದಾ ನೆನಪಿನಲ್ಲಿ ಇಟ್ಟುಕೊಂಡಿರಬೇಕು. ಈ ಮಾತನ್ನು ಪೋಷಕರು, ಶಿಕ್ಷಕರು ಎಲ್ಲ ಮಕ್ಕಳಿಗೆ ಹೇಳಿಕೊಟ್ಟು, ಅರ್ಥ ಮಾಡಿಸಬೇಕು. ಹೆಚ್ಚಿನ ನೈತಿಕ ಶಿಕ್ಷಣವನ್ನು ನೀಡಲೇಬೇಕು ಎಂದು ಕರೆ ನೀಡಿದರು.
ಮುಖ್ಯ ಅತಿಥಿ ಬಾಬುರಾವ ಸರಡಗಿ ಮಾತನಾಡಿದರು.
ಎಸ್‌ಆರ್‌ಜಿ ಆಂಗ್ಲ್ ಮಾಧ್ಯಮ ಶಾಲೆ, ಎಂಎಆರ್‌ಜಿ ಪಿಯು ಕಾಲೇಜು, ವಿಕೆಜಿ ಪದವಿ ಕಾಲೇಜು, ಪಿಎಸ್‌ಆರ್‌ಎಂಎಸ್ ಬಿ.ಎಡ್ ಕಾಲೇಜಿನ ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು.
ವೇದಿಕೆಯ ಮೇಲೆ ಪ್ರಾಚಾರ್ಯರಾದ ಡಾ. ಅಶೋಕರೆಡ್ಡಿ, ಕಲ್ಯಾಣಿ ಸಾವಳಗಿ, ಡಾ. ಅಪ್ಪಾಸಾಬ್ ಬಿರಾದಾರ, ಜ್ಯೋತಿ ವಿಶಾಖ್, ಬಾಬುರಾವ ಸರಡಗಿ, ಶಶಿಕಾಂತ ಪಾಟೀಲ ಇದ್ದರು. ಅಮೃತ ಕೋಳಿ ಸ್ವಾಗತಿಸಿದರೆ, ಚಂದ್ರಕಲಾ ನಿರೂಪಿಸಿದರು. ಪ್ರೀತಿ ಉದ್ದನಶೆಟ್ಟಿ ವಂದಿಸಿದರು.







