ಎಸ್‌ಐಆರ್ ಅಂತಿಮ ಮತದಾರರ ಪಟ್ಟಿಯಿಂದ ಹೆಸರು ಡಿಲೀಟ್ ಆರೋಪ
ಕಲಬುರಗಿಯಲ್ಲಿ ಗುರುತಿನ ಚೀಟಿಯೊಂದಿಗೆ ಮೂವರು ಮತದಾರರು ಪ್ರತ್ಯಕ್ಷ

ಕಲಬುರಗಿ : ಎಸ್‌ಐಆರ್ ಅಂತಿಮ ಮತದಾರರ ಪಟ್ಟಿಯಿಂದ ತಮ್ಮ ಹೆಸರುಗಳನ್ನು ಕೈಬಿಡಲಾಗಿದೆ ಎಂದು ಆರೋಪಿಸಿ ವೈದ್ಯ, ರೈತ ಹಾಗೂ ಕೂಲಿ ಕಾರ್ಮಿಕರೊಬ್ಬರು ಗುರುತಿನ ಚೀಟಿಗಳೊಂದಿಗೆ ಶುಕ್ರವಾರ ನಗರದಲ್ಲಿ ಪ್ರತ್ಯಕ್ಷರಾಗಿ ಚುನಾವಣಾ ಆಯೋಗದ ಕ್ರಮದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ನಗರದ ಪತ್ರಿಕಾ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಹಿರಿಯ ವೈದ್ಯ ಡಾ.ಪಿ.ಸಂಪತ್ ರಾವ್ (70), ಮರತೂರಿನ ರೈತ ಅಂಬರಾಯ್ಯ (60) ಹಾಗೂ ಯಾದಗಿರಿಯ ಎಂ.ಡಿ. ಅತೀಕ್ (35) ಅವರು, ಮತದಾರರ ಗುರುತಿನ ಚೀಟಿ ಹೊಂದಿದ್ದರೂ ಅಂತಿಮ ಪಟ್ಟಿಯಲ್ಲಿ ತಮ್ಮ ಹೆಸರುಗಳು ನಾಪತ್ತೆಯಾಗಿವೆ ಎಂದು ದೂರಿದರು.
ಕಳೆದ 20 ವರ್ಷಗಳಿಗೂ ಹೆಚ್ಚು ಕಾಲದಿಂದ ಮತದಾನ ಮಾಡುತ್ತಿರುವ ತಮ್ಮ ಹೆಸರನ್ನು ಯಾವುದೇ ಸಮರ್ಪಕ ಪರಿಶೀಲನೆ ನಡೆಸದೆ ಪಟ್ಟಿಯಿಂದ ಕೈಬಿಡಲಾಗಿದೆ ಎಂದು ಡಾ.ಸಂಪತ್ ರಾವ್ ಅಳಲು ತೋಡಿಕೊಂಡರು. ಬಿಎಲ್‌ಒ ಮೂಲಕ ಗಣತಿ ನಮೂನೆ ಪಡೆದು ಭರ್ತಿ ಮಾಡಿದ್ದೆ. ಅದನ್ನು ಮನೆಯ ಕೆಲಸದವರಿಂದ ಪಡೆದುಕೊಳ್ಳುವಂತೆ ತಿಳಿಸಿ ಮಗಳ ಮನೆಗೆ ತೆರಳಿದ್ದೆ. ಆದರೆ, ಬಿಎಲ್‌ಒ ಮನೆಗೆ ಬಂದು ನಮೂನೆ ಸಂಗ್ರಹಿಸಿಲ್ಲ. ಇದೀಗ ಅಂತಿಮ ಪಟ್ಟಿಯಲ್ಲಿ ತಮ್ಮ ಹೆಸರಿನ ಎದುರು ‘ಶಾಶ್ವತ ಸ್ಥಳಾಂತರ’ ಎಂದು ನಮೂದಿಸಲಾಗಿದೆ. ವಿಚಾರಿಸಿದಾಗ ಹೆಸರು ಡಿಲೀಟ್ ಆಗಿದ್ದು, ಮತ್ತೆ ಸೇರ್ಪಡೆಗೊಳಿಸಲು ಫಾರ್ಮ್-6 ಸಲ್ಲಿಸುವಂತೆ ಸೂಚಿಸಿದ್ದಾರೆ. ಈಗಾಗಲೇ ಮತದಾರರಾಗಿರುವ ತಮಗೆ ಹೊಸ ಮತದಾರರಂತೆ ಅರ್ಜಿ ಸಲ್ಲಿಸುವಂತೆ ಹೇಳುತ್ತಿರುವುದು ವಿಪರ್ಯಾಸ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಮರತೂರು ಗ್ರಾಮದ ರೈತ ಅಂಬರಾಯ್ಯ ಹಾಗೂ ಯಾದಗಿರಿಯ ಎಂಡಿ ಅತೀಕ್ ಮಾತನಾಡಿ, ಬಿಎಲ್‌ಒಗಳು ತಮಗೆ ಗಣತಿ ನಮೂನೆ ನೀಡಿಲ್ಲ. ಗುರುತಿನ ಚೀಟಿ ಹಿಡಿದುಕೊಂಡು ಅಲೆದಾಡಿದರೂ ನಮೂನೆ ಸಿಕ್ಕಿಲ್ಲ. ಇದೀಗ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಬಿಎಲ್‌ಒಗಳನ್ನು ವಿಚಾರಿಸಿದರೆ ಪಟ್ಟಿಯಲ್ಲಿ ಹೆಸರು ಇಲ್ಲ ಎನ್ನುತ್ತಾರೆ. ತಾವು ಅನಕ್ಷರಸ್ಥರಾಗಿದ್ದು, ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆ ಅಥವಾ ಆಕ್ಷೇಪಣೆ ಸಲ್ಲಿಸುವ ಪ್ರಕ್ರಿಯೆ ತಿಳಿಯದೆ ಅಸಹಾಯಕರಾಗಿದ್ದೇವೆ. ನಮ್ಮ ಗ್ರಾಮವೊಂದರಲ್ಲೇ ಇಂತಹ ಸಮಸ್ಯೆ ಎದುರಿಸುತ್ತಿರುವ 20ಕ್ಕೂ ಹೆಚ್ಚು ಮತದಾರರಿದ್ದಾರೆ ಎಂದು ಅಂಬರಾಯ್ಯ ಬೇಸರ ವ್ಯಕ್ತಪಡಿಸಿದರು.
ಮತದಾರರ ಗುರುತಿನ ಚೀಟಿ ಹೊಂದಿದ್ದರೂ ಅಂತಿಮ ಪಟ್ಟಿಯಿಂದ ಹೆಸರುಗಳು ಕೈಬಿಡಲ್ಪಟ್ಟಿರುವುದು ಆತಂಕಕ್ಕೆ ಕಾರಣವಾಗಿದೆ. ಅರ್ಹ ಮತದಾರರ ಹಕ್ಕು ಕಸಿಯದಂತೆ ಚುನಾವಣಾ ಆಯೋಗ ತಕ್ಷಣ ಪರಿಶೀಲನೆ ನಡೆಸಿ, ಹೆಸರು ಕೈಬಿಡಲು ಕಾರಣವೇನು ಎಂಬುದನ್ನು ಸ್ಪಷ್ಟಪಡಿಸಬೇಕು ಹಾಗೂ ತಪ್ಪುಗಳನ್ನು ಸರಿಪಡಿಸಿ ಮತದಾನದ ಹಕ್ಕು ರಕ್ಷಿಸಬೇಕು ಎಂದು ಅವರು ಆಗ್ರಹಿಸಿದರು.






