ಕಲಬುರಗಿ ಕೇಂದ್ರ ಕಾರಾಗೃಹದಲ್ಲಿ ಅಂಬೇಡ್ಕರ್ ಜಯಂತಿ ಆಚರಣೆ

ಕಲಬುರಗಿ: ಕೇಂದ್ರ ಕಾರಾಗೃಹದಲ್ಲಿ ಸಂವಿಧಾನ ಶಿಲ್ಪಿ ಡಾ.ಬಾಬಾಸಾಹೇಬ ಅಂಬೇಡ್ಕರ್ ಅವರ 135ನೇ ಜಯಂತಿಯನ್ನು ಕೈದಿಗಳೊಂದಿಗೆ ಅರ್ಥಪೂರ್ಣವಾಗಿ ಆಚರಿಸಲಾಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಸಂಸ್ಥೆಯ ಅಧೀಕ್ಷಕ ರಾಕೇಶ್ ಕಾಂಬಳೆ ಅವರು ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿದರು. ಅವರು ಅಂಬೇಡ್ಕರ್ ಅವರನ್ನು ವಿಶ್ವ ರತ್ನ, ಆಧುನಿಕ ಭಾರತದ ಪಿತಾಮಹ, ಸಮಾನತೆಯ ಹರಿಕಾರ, ಮಹಿಳಾ ವಿಮೋಚಕ, ಶೋಷಿತರ ಧ್ವನಿ, ಮಹಾನ್ ವಿದ್ವಾಂಸ ಹಾಗೂ ಕಾನೂನು ಪಂಡಿತ ಎಂದು ಹೇಳಿದರು.
ಬಾಬಾ ಸಾಹೇಬರ ಆಶಯದಂತೆ ಸಮಾನತೆಯ ಸಮಾಜ ನಿರ್ಮಾಣ ಹಾಗೂ ಪ್ರತಿಯೊಬ್ಬರಿಗೂ ಶಿಕ್ಷಣ ದೊರಕಬೇಕು. ನಾವು ಶಿಕ್ಷಣ ಪಡೆದು ಸಮಾಜದ ಅಭಿವೃದ್ಧಿಗೆ ಕೈಜೋಡಿಸಿದಾಗ ಮಾತ್ರ ಅವರ ಜಯಂತಿಯನ್ನು ಸಾರ್ಥಕಗೊಳಿಸಿದಂತಾಗುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಹಾಯಕ ಅಧೀಕ್ಷಕ ಬಿ. ಸುರೇಶ್ ಮಾತನಾಡಿ, ಅತಿಯಾದ ಆಸೆಗಳು ದುಃಖಕ್ಕೆ ಕಾರಣವಾಗುತ್ತವೆ. ಅಂಬೇಡ್ಕರ್ ಅವರು ಮಾನವಕುಲಕ್ಕೆ ನೀಡಿದ ಸಂವಿಧಾನವನ್ನು ಅರ್ಥೈಸಿಕೊಂಡು, ಸಹಬಾಳ್ವೆ ಮತ್ತು ಸೌಹಾರ್ದತೆಯಿಂದ ಜೀವನ ನಡೆಸಬೇಕು ಎಂದು ತಿಳಿಸಿದರು.
ಕಾರಾಗೃಹದ ಕೈದಿಗಳು ಅಂಬೇಡ್ಕರ್ ಕುರಿತು ಗೀತೆಗಳು ಮತ್ತು ಭಜನೆಗಳನ್ನು ಹಾಡಿ ಗೌರವ ಸಲ್ಲಿಸಿದರು. ಬಳಿಕ ಕೈದಿಗಳು ಹಾಗೂ ಸಿಬ್ಬಂದಿಗೆ ಸಿಹಿ ವಿತರಣೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಸಹಾಯಕ ಅಧೀಕ್ಷಕ ಚನ್ನಪ್ಪ ಯಟಗಲ್, ಜೈಲರ್‌ಗಳಾದ ಸಾಗರ ಪಾಟೀಲ್, ಶ್ರೀಮಂತಗೌಡ ಪಾಟೀಲ್, ಪುಂಡಲಿಕ ಟಿ.ಕೆ ಸೇರಿದಂತೆ ಇತರ ಅಧಿಕಾರಿಗಳು ಮತ್ತು ಸಿಬ್ಬಂದಿ ಭಾಗವಹಿಸಿದರು. ಭೀಮಾಶಂಕರ್ ಡಾಂಗೆ ಸ್ವಾಗತಿಸಿದರು, ನಾಗರಾಜ ಮೂಲಗೆ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.






