ಗುತ್ತಿಗೆದಾರ ಆತ್ಮಹತ್ಯೆಯಲ್ಲಿ ಪ್ರಿಯಾಂಕ್ ಖರ್ಗೆ ಹಸ್ತಕ್ಷೇಪವಿದೆ: ಆಂದೋಲಾ ಶ್ರೀ ಆರೋಪ

ಕಲಬುರಗಿ: ಬೀದರ್ ಗುತ್ತಿಗೆದಾರ ಸಚಿನ್ ಪಂಚಾಳ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವ ಪ್ರಿಯಾಂಕ್ ಖರ್ಗೆ ಮತ್ತು ಅವರ ಆಪ್ತರ ಹಸ್ತಕ್ಷೇಪವಿರುವುದು ಬಯಲಾಗಿದೆ ಎಂದು ಆಂದೋಲಾದ ಸಿದ್ದಲಿಂಗ ಸ್ವಾಮೀಜಿ ಆರೋಪಿಸಿದ್ದಾರೆ.
ನಗರದ ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಟೆಂಡರ್ ನೀಡುವ ವಿಚಾರದಲ್ಲಿ ಸಚಿವರ ಆಪ್ತರಾದ ರಾಜು ಕಪನೂರ್ 1 ಕೋಟಿ ರೂ. ನೀಡುವಂತೆ ಗುತ್ತಿಗೆದಾರನಿಗೆ ಬೆದರಿಕೆ ಹಾಕಿದ್ದಾರೆ, ಅವರ ಜೊತೆಗೆ ನಂದಕುಮಾರ್ ನಾಗಭುಜಂಗೆ ಮತ್ತಿತರರು ಸೇರಿ ಕೊಲೆ ಬೆದರಿಕೆಯೂ ಒಡ್ಡಿದ್ದಾರೆಂದು ಆತ್ಮಹತ್ಯೆಗೆ ಶರಣಾದ 26 ವರ್ಷದ ಯುವಕ ಸಚಿನ್ ಡೆತ್ ನೋಟ್ನಲ್ಲಿ ಬರೆದಿದ್ದಾರೆ, ಆ ಡೆಟ್ ನೋಟ್ ನಲ್ಲಿ ಚಂದು ಪಾಟೀಲ್, ಶಾಸಕ ಬಸವರಾಜ ಮತ್ತಿಮಡು, ಮಣಿಕಂಠ ರಾಠೋಡ್ ಮತ್ತು ನನ್ನನ್ನು ಹತ್ಯೆ ಮಾಡುವುದಾಗಿ ಸೋಲಾಪುರ್ ಮೂಲದ ವ್ಯಕ್ತಿಗಳಿಗೆ ಸುಪಾರಿ ನೀಡಿದ್ದಾರೆ ಎಂದು ಉಲ್ಲೇಖಿಸಿದ್ದಾನೆ ಎಂದು ಹೇಳಿದರು.
ಕಲಬುರಗಿ ಜಿಲ್ಲೆಯಲ್ಲಿ ಹಲವು ಅಪರಾಧಗಳು ನಡೆಯುತ್ತಿದ್ದು, ಈವರೆಗೆ ಯಾವವುದಕ್ಕೂ ನ್ಯಾಯ ಸಿಕ್ಕಿಲ್ಲ. ಸಚಿವರ ಆಪ್ತರೆ ಹನಿಟ್ರಾಪ್, ಮತ್ತಿತರ ಅಪರಾಧ ಕೃತ್ಯಗಳಲ್ಲಿ ತೊಡಗಿದ್ದಾರೆ, ಅವರನ್ನು ರಕ್ಷಿಸಲು ಸಚಿವರು ನಿಂತಿರುವುದು ಅಕ್ಷಮ್ಯ ಅಪರಾಧ ಎಂದರು.
ಬಿಜೆಪಿ ಶಾಸಕ ಬಸವರಾಜ್ ಮತ್ತಿಮಡು ಮಾತನಾಡಿ, ಇಲ್ಲಿ ನಾವು ಸರಕಾರದ ವಿರುದ್ಧ ಹೋರಾಟ ಇಳಿದರೆ ನಮ್ಮ ವಿರುದ್ಧ ಪ್ರಕರಣ ದಾಖಲಿಸಲಾಗುತ್ತಿದೆ, ಈ ರೀತಿಯ ಬೆದರಿಕೆಗಳಿಗೆ ನಾವು ಅಂಜುವುದಿಲ್ಲ, ಈ ಪ್ರಕರಣವನ್ನು ಸಿಬಿಐಗೆ ವಹಿಸಬೇಕು ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಚಂದು ಪಾಟೀಲ್, ಶಿವರಾಜ್ ಪಾಟೀಲ್ ರದ್ದೇವಾಡಗಿ, ಅಮರನಾಥ್ ಪಾಟೀಲ್, ಸಂಗಮೇಶ್ ಪಾಟೀಲ್ ಮತ್ತಿತರರು ಇದ್ದರು.







