ಕಲಬುರಗಿ ವಿಮಾನ ನಿಲ್ದಾಣದಲ್ಲಿ ಅಪಹರಣ ವಿರೋಧಿ ಅಣಕು ಪ್ರದರ್ಶನ

ಕಲಬುರಗಿ: ನಾಗರಿಕ ವಿಮಾನಯಾನ ಭದ್ರತಾ ಬ್ಯೂರೋ (ಬಿಸಿಎಎಸ್) ವಾರ್ಷಿಕ ವೇಳಾಪಟ್ಟಿಯಂತೆ ಇತ್ತೀಚೆಗೆ ಕಲಬುರಗಿ ವಿಮಾನ ನಿಲ್ದಾಣದಲ್ಲಿ ಅಪಹರಣ ವಿರೋಧಿ ಅಣಕು ಪ್ರದರ್ಶನ ನಡೆಸಲಾಯಿತು.
ಜಿಲ್ಲಾಧಿಕಾರಿ ಇಕ್ರಮ್ ಶರೀಫ್, ನಗರ ಪೊಲೀಸ್ ಆಯುಕ್ತ ಡಾ. ಎಸ್.ಡಿ. ಶರಣಪ್ಪ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಡ್ಡೂರು ಶ್ರೀನಿವಾಸಲು ಅವರ ಸಮಕ್ಷಮದಲ್ಲಿ ವಿವಿಧ ಸಂಬಂಧಿತ ಇಲಾಖೆಗಳ ಸಮನ್ವಯದೊಂದಿಗೆ ಅಣಕು ಪ್ರದರ್ಶನ ನಡೆಯಿತು. ನೈಜ ತುರ್ತು ಪರಿಸ್ಥಿತಿಗಳನ್ನು ಸಮರ್ಥವಾಗಿ ನಿಭಾಯಿಸುವ ಸನ್ನದ್ಧತೆಯನ್ನು ಪರಿಶೀಲಿಸುವುದು ಹಾಗೂ ಇಂತಹ ಸಂದರ್ಭಗಳಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಅಭ್ಯಾಸ ನಡೆಸುವುದು ಇದರ ಉದ್ದೇಶವಾಗಿತ್ತು.
ಈ ಸಂದರ್ಭದಲ್ಲಿ ತುರ್ತು ಪರಿಸ್ಥಿತಿ ಎದುರಾದಾಗ ವಿವಿಧ ಇಲಾಖೆಗಳು ಪರಸ್ಪರ ಸಮನ್ವಯದಿಂದ ಕಾರ್ಯನಿರ್ವಹಿಸುವ ವಿಧಾನ ಹಾಗೂ ಕೈಗೊಳ್ಳಬೇಕಾದ ಅಗತ್ಯ ಕ್ರಮಗಳ ಕುರಿತು ಪರಿಶೀಲನೆ ನಡೆಸಲಾಯಿತು.
ಕಾರ್ಯಕ್ರಮದಲ್ಲಿ ಡಿಸಿಪಿ ಶಾಲೂ, ಎಸಿಪಿ ಪ್ರವೀಣ ನಾಯಕ್, ಕಲಬುರಗಿ ವಿಮಾನ ನಿಲ್ದಾಣದ ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರದ (ಎಎಐ) ನಿರ್ದೇಶಕ ಕಿಶೋರ ಕಿಲ್ಲಂಪಲ್ಲಿ, ಡಿಜಿಎಂ (ಸಿಎನ್‌ಎಸ್) ವಿ.ಸಿ. ವೆಂಕಟೇಶ್ವರ ರೆಡ್ಡಿ, ಎಜಿಎಂ (ಸಿವಿಲ್ ಎಂಜಿನಿಯರಿಂಗ್) ವೆಂಕಟರಾಮ ಜಿ., ಎಜಿಎಂ (ಎಲೆಕ್ಟ್ರಿಕಲ್ ಎಂಜಿನಿಯರಿಂಗ್) ಶ್ರೀಧರ ಬಾಬು, ಎಟಿಸಿ ಇನ್‌ಚಾರ್ಜ್ ರೊಹಿತ್ ಗೋಯಲ್, ಮುಖ್ಯ ಭದ್ರತಾ ಅಧಿಕಾರಿ ಎಂ. ತೀಕ್ಷಣ ಮಾಧವ ಹಾಗೂ ಅಗ್ನಿಶಾಮಕ ಸೇವೆಯ ವಿಜಯಕುಮಾರ್ ಪಿ.ಕೆ. ಉಪಸ್ಥಿತರಿದ್ದರು.






